Tumakuru: ಮಂತ್ರಿಸಿದ 123 ಕುಂಬಳಕಾಯಿಯಿಂದ ಎಚ್‌ಡಿಕೆಗೆ ದೃಷ್ಟಿ ತೆಗೆದ ಕಾರ‍್ಯಕರ್ತರು

By Govindaraj S  |  First Published Dec 30, 2022, 10:32 PM IST

ಈ ಬಾರಿ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂದು ಹುಲಿಯೂರುದುರ್ಗದ ಜೆಡಿಎಸ್‌ ಕಾರ್ಯಕರ್ತರು ಮಂತ್ರಿಸಿ ತಂದ 123 ಕುಂಬಳಕಾಯಿಗಳನ್ನು ಮಾಜಿ ಸಿಎಂ ಕುಮಾರಸ್ವಾಮಿಗೆ ದೃಷ್ಟಿತೆಗೆದು ಒಡೆದಿದ್ದಾರೆ.


ಕುಣಿಗಲ್‌ (ಡಿ.30): ಈ ಬಾರಿ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂದು ಹುಲಿಯೂರುದುರ್ಗದ ಜೆಡಿಎಸ್‌ ಕಾರ್ಯಕರ್ತರು ಮಂತ್ರಿಸಿ ತಂದ 123 ಕುಂಬಳಕಾಯಿಗಳನ್ನು ಮಾಜಿ ಸಿಎಂ ಕುಮಾರಸ್ವಾಮಿಗೆ ದೃಷ್ಟಿತೆಗೆದು ಒಡೆದಿದ್ದಾರೆ. ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ಹುಲಿಯೂರುದುರ್ಗ ಪಟ್ಟಣಕ್ಕೆ ತೆರಳಿದ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ದೃಷ್ಟಿತೆಗೆಯಲು ಪುರೋಹಿತ ತಂತ್ರಿಗಳ ಸೂಚನೆಯಂತೆ ವಿಧಿವತ್ತಾಗಿ ಪೂಜಿಸಿದ 123 ಕುಂಬಳಕಾಯಿಗಳನ್ನು ಏಕಕಾಲಕ್ಕೆ ಒಡೆಯಲಾಗಿದೆ. ಪ್ರತಿಯೊಂದು ಕುಂಬಳಕಾಯಿ ಕೊರೆದು ಅದರಲ್ಲಿ ಹಲವಾರು ಗಿಡ ಮೂಲಿಕೆ ಸೇರಿದಂತೆ ಅರಿಶಿಣ, ಕುಂಕುಮ, ಅಕ್ಷತೆ ಹಾಗೂ ನಾಣ್ಯಗಳನ್ನು ತುಂಬಿ ದೇವಾಲಯದಲ್ಲಿ ವಿಶೇಷವಾದ ಮಂತ್ರಗಳಿಂದ ಪೂಜಿಸಲಾಗಿತ್ತು. 

ಹೀಗೆ ಸಿದ್ಧಪಡಿಸಿದ ಬೂದಗುಂಬಳಕಾಯಿಗಳನ್ನು ಕುಮಾರಸ್ವಾಮಿ ಬರುವ ವಾಹನದ ಮುಂದೆ ದೃಷ್ಟಿತೆಗೆದು ಒಡೆಯಲಾಯಿತು.ಈ ರೀತಿ ಮಾಡಿದ ಪೂಜೆಯಿಂದ ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುವುದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ ಹಾಗೂ ಕುಮಾರಸ್ವಾಮಿಗೆ ಅಂಟಿದ್ದ ಹಲವಾರು ದೋಷಗಳು ಪರಿಹಾರ ಆಗುತ್ತವೆ ಎಂಬುದು ಕಾರ್ಯಕರ್ತರ ನಂಬಿಕೆಯಾಗಿದೆ ಎಂದು ಕಾರ್ಯಕರ್ತ ಮಧು ಹೇಳಿದರು.

Tap to resize

Latest Videos

ಸಮುದಾಯವನ್ನು ಮಂಗ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ: ಎಚ್‌.ಡಿ.ಕುಮಾರಸ್ವಾಮಿ

ದಾಖಲೆ ಸೇರಿದ ಪಂಚರತ್ನಯಾತ್ರೆಯ ಹಾರ: ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯದ ಜನ ವಿವಿಧ ಬಗೆಯ 500ಕ್ಕೂ ಹೆಚ್ಚು ಬೃಹತ್‌ ಹಾರಗಳನ್ನು ಹಾಕಿ ಗೌರವಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ ದಾಖಲೆಗೆ ಪಾತ್ರರಾಗಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಯಲ್ಲಾಪುರದಲ್ಲಿ ಮಾಜಿ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಿದ್ದ ಜಾಗಕ್ಕೆ ಆಗಮಿಸಿದ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್ ತೀರ್ಪುಗಾರರಾದ ಮೋಹಿತ್‌ ಕುಮಾರ್‌ ವತ್ಸ ಹಾಗೂ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ ತೀರ್ಪುಗಾರರಾದ ಆರ್‌.ಹರೀಶ್‌ ಅವರು ಮಾಜಿ ಮುಖ್ಯಮಂತ್ರಿ ಅವರಿಗೆ ಎರಡೂ ದಾಖಲೆಗಳ ಪತ್ರಗಳು ಮತ್ತು ಪದಕಗಳನ್ನು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಏಷ್ಯಾ ಬುಕ್‌ ಆಫ್‌ ರೆಕಾಡ್ರ್ಸ ತೀರ್ಪುಗಾರರಾದ ಮೋಹಿತ್‌ಕುಮಾರ್‌ ಅವರು, ಇದೊಂದು ವಿಶೇಷ ದಾಖಲೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಜಕಾರಣಿಯೊಬ್ಬರು ಗೌರವಕ್ಕೆ ಪಾತ್ರರಾಗಿರುವುದು ಹಾಗೂ ರೈತರೇ ಬೆಳೆಗಳನ್ನೇ ಬೃಹತ್‌ ಹಾರಗಳನ್ನಾಗಿ ತಯಾರಿಸಿ ಅವರಿಗೆ ಹಾಕಿ ಸ್ವಾಗತಿಸುತ್ತಿರುವುದು ಸೋಜಿಗ ಎಂದರು. ನಾವು ಸದಾ ದಾಖಲೆಗಳನ್ನು ಹುಡುಕುತ್ತಿರುತ್ತೇವೆ. ದೇವನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಕೃಷಿ ಬೆಳೆಗಳಿಂದ ತಯಾರಿಸಿದ ಭಾರೀ ಹಾರಗಳನ್ನು ಹಾಕಿ ಬರಮಾಡಿಕೊಂಡ ಬಗ್ಗೆ ಮಾಹಿತಿ ಸಿಕ್ಕಿತು. ಅಂದಿನಿಂದಲೇ ನಾವು ಖುದ್ದು ಪರಿಶೀಲನೆ ಮಾಡಿದೆವು. ಗುರುವಾರವೂ ನಾವು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ರಥಯಾತ್ರೆಯ ಜತೆಗೆ ಪ್ರವಾಸ ಮಾಡಿದೆವು. ಈ ರೀತಿ ಬೃಹತ್‌ ಹಾರಗಳ ಗೌರವಕ್ಕೆ ಭಾಜನರಾದ ಏಕೈಕ ವ್ಯಕ್ತಿ ಕುಮಾರಸ್ವಾಮಿ ಎಂದು ಮೋಹಿತ್‌ಕುಮಾರ್‌ ಮಾಹಿತಿ ನೀಡಿದರು.

ಜೆಡಿಎಸ್‌ನಿಂದ ರೈತರ ಸಮಸ್ಯೆಗೆ ಪರಿಹಾರ: ಎಚ್‌.ಡಿ.ಕುಮಾರಸ್ವಾಮಿ

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಇದು ನನಗೆ ಅಚ್ಚರಿಯ ಗೌರವ. ಈ ದಾಖಲೆಗಳನ್ನು ನನ್ನ ನಾಡಿನ ರೈತರು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮರ್ಪಣೆ ಮಾಡುತ್ತೇನೆ ಎಂದರು. ಸೇಬು, ಚಿಕ್ಕು, ಮೂಸುಂಬಿ ಸೇರಿದಂತೆ ವಿವಿಧ ಹಣ್ಣಿನ ಹಾರ, ಸೌತೆಕಾಯಿ, ದೊಣ್ಣೆಮೆಣಸು, ನುಗ್ಗೆಕಾಯಿ, ಕೊತ್ತಂಬರಿ ಸೊಪ್ಪು ಸೇರಿದಂತೆ ಹಲವು ಸೊಪ್ಪು-ತರಕಾರಿಗಳ ಹಾರ, ಅದೇ ರೀತಿ ಕೊಬ್ಬರಿ, ಕಬ್ಬು, ನಾಣ್ಯ, ಭತ್ತ ಹಾರ, ಎತ್ತಿನ ಲಾಳದ ಹಾರ, ಜೆಡಿಎಸ್‌ ಚಿಹ್ನೆ ಹಾರ, ಮಣ್ಣಿನ ಹಾರ, ಕಿರೀಟದ ಹಾರ, ಮಹಿಳೆಯರು ಹಾಕಿದ ರಾಖಿ ಹಾರ ಸೇರಿದಂತೆ ಥರಾವತಿ ಬೃಹತ್‌ ಹಾರಗಳನ್ನು ಹಾಕಿ ಕುಮಾರಸ್ವಾಮಿ ಅವರನ್ನು ಹೋದಲ್ಲೆಲ್ಲ ಸ್ವಾಗತಿಸಲಾಗುತ್ತಿದೆ.

click me!