'ಬಿಎಸ್‌ವೈ ಮೇಲೆ ಋುಣಭಾರ ಬಹಳಷ್ಟಿದೆ, ಮೀಸಲಾತಿ ಕೊಡಬೇಕು'

Kannadaprabha News   | Asianet News
Published : Dec 27, 2020, 08:16 AM IST
'ಬಿಎಸ್‌ವೈ ಮೇಲೆ ಋುಣಭಾರ ಬಹಳಷ್ಟಿದೆ, ಮೀಸಲಾತಿ ಕೊಡಬೇಕು'

ಸಾರಾಂಶ

ಬಿಎಸ್‌ವೈ ಅವಧಿಯಲ್ಲೇ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಲಿ| ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತರ ಕೊಡುಗೆ ಅಪಾರ| ಆರ್‌ಎಸ್‌ಎಸ್‌ ಕೂಡ ಮೀಸಲಾತಿ ನೀಡುವಂತೆ ಸಲಹೆ ನೀಡಲಿ| ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿಗಾಗಿ ನಮ್ಮ ಹೋರಾಟ| ಪಾದಯಾತ್ರೆಯಲ್ಲಿ ಉ.ಕ.ಭಾಗದ ಹಲವು ಮಠಾಧೀಶರು ಭಾಗಿ: ಪಂಚಮಸಾಲಿ ಶ್ರೀ| 

ಧಾರವಾಡ(ಡಿ.27): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅವಧಿಯಲ್ಲೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲೇಬೇಕು. ಈ ಸಂಬಂಧ ಆರ್‌ಎಸ್‌ಎಸ್‌ ಕೂಡ ಸರ್ಕಾರಕ್ಕೆ ಸಲಹೆ ಮಾಡಲಿ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ. 

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ನಮ್ಮ ಸಮಾಜ ಸಂಘಟನೆಯಾಗಿದೆ. ವೀರಪ್ಪ ಮೊಯ್ಲಿಯಿಂದ ಹಿಡಿದು ಯಡಿಯೂರಪ್ಪ ವರೆಗೂ ಯಾರಾರ‍ಯರು ಆಡಳಿತ ನಡೆಸಿದ್ದಾರೋ ಅವರಿಗೆಲ್ಲ ಮನವಿ ಕೊಟ್ಟಿದ್ದೇವೆ. ಶಾಲು ಹಾಕಿ ಸನ್ಮಾನ ಮಾಡಿ ವಿನಂತಿಸಿಕೊಂಡು ಸಾಕಾಗಿ ಹೋಗಿದೆ. ಹೀಗಾಗಿ, ಇದೀಗ ಹೋರಾಟಕ್ಕೆ ಇಳಿದಿದ್ದೇವೆ ಎಂದರು.

ಸ್ವಾತಂತ್ರ್ಯ ಬಂದಾಗಿನಿಂದ 8 ಜನ ಲಿಂಗಾಯತ ಮುಖ್ಯಮಂತ್ರಿಗಳು ರಾಜ್ಯವನ್ನು ಆಳಿದ್ದಾರೆ. ಆದರೆ, ರಾಜಕೀಯ ಜಾಗೃತಿಗೆ ಮಾತ್ರ ಲಿಂಗಾಯತ ಸಮುದಾಯ ಬಳಕೆಯಾಗಿದೆ. ಈ ಎಂಟು ಜನ ಸಿಎಂಗಳಿಗೂ ಮೀಸಲಾತಿ ಕಲ್ಪಿಸುವ ಸುವರ್ಣ ಅವಕಾಶವಿತ್ತು. ಆದರೆ, ಯಾವ ಸಿಎಂ ಕೂಡ ಲಿಂಗಾಯತ ಸಮಾಜದ ಬೇಡಿಕೆ ಈಡೇರಿಸುವ ಗೋಜಿಗೆ ಹೋಗಿಲ್ಲ. ಯಡಿಯೂರಪ್ಪ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕರಾಗಿ ಬಿಂಬಿಸಿಕೊಂಡಿದ್ದಾರೆ. ಅವರ ಮೇಲೆ ಪಂಚಮಸಾಲಿ ಋುಣಭಾರ ಬಹಳಷ್ಟಿದೆ. ಹೀಗಾಗಿ, ಅವರ ಅವಧಿಯಲ್ಲೇ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿದರು.

ಬಿಎಸ್‌ವೈ ಸರ್ಕಾರಕ್ಕೆ ಮತ್ತೊಮ್ಮೆ ಖಡಕ್‌ ಎಚ್ಚರಿಕೆ ಕೊಟ್ಟ ಸ್ವಾಮೀಜಿ

ಆರ್‌ಎಸ್‌ಎಸ್ ಸಹ ಇದನ್ನು ಮನವರಿಕೆ ಮಾಡಿಕೊಡಬೇಕು. ಕರ್ನಾಟಕದಲ್ಲಿ ಬಿಜೆಪಿ ಬರಲು ಲಿಂಗಾಯತರ ಪಾತ್ರ ಬಹಳಷ್ಟಿದೆ. ಈ ಸತ್ಯ ಆರ್‌ಎಸ್‌ಎಸ್‌ಗೂ ಗೊತ್ತಿದೆ. ಮಹಾರಾಷ್ಟ್ರದಲ್ಲಿ ಸಂಘದ ಸಲಹೆ ಮೇರೆಗೆ ಮರಾಠರಿಗೆ ಶೇ.16ರ ಮೀಸಲಾತಿ ಕೊಟ್ಟಿದ್ದಾರೆ. ಮಹಾರಾಷ್ಟ್ರ ಸಂಘ ಪರಿವಾರದಂತೆ ಕರ್ನಾಟಕ ಸಂಘ ಪರಿಹಾರ ನಡೆದುಕೊಳ್ಳಬೇಕು. ಪಂಚಮಸಾಲಿ ಸಮಾಜದ ಹಕ್ಕು ಈಡೇರಿಸಲು ಸಂಘ ಪರಿವಾರ ಸಲಹೆ ನೀಡಬೇಕು ಎಂದರು.

ನಮ್ಮ ಮಕ್ಕಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಅನ್ಯಾಯವಾಗುತ್ತಿದೆ. ಆದಕಾರಣ ನಾವು ಮೀಸಲಾತಿ ಕೇಳುತ್ತಿದ್ದೇವೆ. ಇದನ್ನು ಕೊಡುವುದು ಸರ್ಕಾರದ ಧರ್ಮ ಎಂದ ಅವರು, ಈ ಕಾರಣಕ್ಕಾಗಿಯೇ ನಾವು ಜ. 14ರಂದು ಪಾದಯಾತ್ರೆ ಮಾಡುತ್ತಿದ್ದೇವೆ. 14ರಂದು ಕೂಡಲಸಂಗಮದಿಂದ ಪಾದಯಾತ್ರೆ ಹೊರಟು ಬೆಂಗಳೂರಿಗೆ ತೆರಳಿ ಅಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ ಎಂದರು. ಈ ಸಂಬಂಧ ಧಾರವಾಡದಲ್ಲೂ ಸಮಾಜದ ಮುಖಂಡರೊಂದಿಗೆ ಈಗಾಗಲೇ ಸಭೆ ನಡೆಸಲಾಗಿದೆ ಎಂದು ನುಡಿದರು.

ಉತ್ತರ ಕರ್ನಾಟಕ ಭಾಗದ ವಿವಿಧ ಮಠಾಧೀಶರು ಪಾದಯಾತ್ರೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಷ್ಟರೊಳಗೆ ಯಡಿಯೂರಪ್ಪ ಅವರು ಪಂಚಮಸಾಲಿಗೆ 2 ಎ ಮೀಸಲಾತಿ ಹಾಗೂ ಲಿಂಗಾಯತ ಇತರೆ ಪಂಗಡದವರಿಗೆ ಒಬಿಸಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!