ಬಿಎಸ್‌ವೈ ಬದಲಾವಣೆ: 'ಯತ್ನಾಳ ಯಾಕೆ ಹಾಗೆ ಹೇಳಿದ್ರೋ ಗೊತ್ತಿಲ್ಲ'

By Kannadaprabha NewsFirst Published Apr 2, 2021, 2:45 PM IST
Highlights

ಯತ್ನಾಳ ಬಂದಿದ್ದರಿಂದಲೇ ಮೀಸಲಾತಿ ಹೋರಾಟ ದಡ ಸೇರುವಂತಾಯಿತು| ನಿರಾಣಿಯವರು ಪಾದಯಾತ್ರೆಗೆ ವಿಶೇಷ ನೆರವು ನೀಡಿಲ್ಲ| ಎಲ್ಲರಂತೆ ಅವರು ಸಹ ವಾಹನದ ಸೌಲಭ್ಯ ನೀಡಿದ್ದಾರೆ| 10 ಲಕ್ಷ ಜನರ ಸಮ್ಮುಖದಲ್ಲಿ ವಿಜಯಾನಂದ ಕಾಶೆಪ್ಪನವರ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ:ಬಸವಜಯಮೃತ್ಯುಂಜಯ ಶ್ರೀ| 

ಕೊಪ್ಪಳ(ಏ.02): ಸಿಎಂ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರು ಯಾಕೆ ಹಾಗೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯ ಭರವಸೆ ನೀಡಿದ್ದು, ನಮಗೂ ವಿಶ್ವಾಸವಿದೆ ಎಂದರು. ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬಸನಗೌಡ ಪಾಟೀಲ ಅವರ ಪಾತ್ರವೂ ದೊಡ್ಡದಿದೆ. ಅವರು ಸದನದ ಒಳಗೆ ಮತ್ತು ಹೊರಗೂ ಹೋರಾಟ ಮಾಡಿದ್ದಾರೆ. ಅವರು ಭಾಗವಹಿಸಿದ್ದರಿಂದ ಹೋರಾಟ ದಡ ಸೇರುವಂತಾಯಿತು. ಪಂಚಮಸಾಲಿ ಸಮಾಜದಲ್ಲಿ ಭಿನ್ನಾಭಿಪ್ರಾಯ, ಎರಡು ಗುಂಪು ಇಲ್ಲ ಎಂದರು.

ಪಾದಯಾತ್ರೆಯ ಲೆಕ್ಕ ಕೊಡಿ ಎಂದು ಮುರುಗೇಶ ನಿರಾಣಿ ಅವರು ಕೇಳುತ್ತಿದ್ದಾರೆ. ಅವರು ಪಾದಯಾತ್ರೆಗೆ ಒಂದೇ ಒಂದು ಪೈಸೆ ನೀಡಿಲ್ಲ. ಪಾದಯಾತ್ರೆಗೆ ಕೆಲವು ವಾಹನಗಳ ಸೌಲಭ್ಯ ನೀಡಿದ್ದಾರೆ ಅಷ್ಟೆ. ಆದರೆ, ಯಾರೇ ಲೆಕ್ಕ ಕೇಳಿದರೂ ನಾವು ಕೊಡುವುದಕ್ಕೆ ಸಿದ್ಧರಿದ್ದೇವೆ. ತಮ್ಮನ್ನು ಸಚಿವರನ್ನಾಗಿ ಮಾಡುತ್ತಿದ್ದಂತೆ ಪಾದಯಾತ್ರೆ ನಿಲ್ಲಿಸುತ್ತೇನೆ ಎಂದು ಅವರು ಸಿಎಂ ಯಡಿಯೂರಪ್ಪ ಅವರಿಗೆ ಹೇಳಿದ್ದರು. ಆದರೆ, ನಾವು ಮಾತ್ರ ಹೋರಾಟ ನಿಲ್ಲಿಸಲಿಲ್ಲ ಎಂದರು.

ಸಿಡಿ ಕೇಸ್‌: 'ಕಾಂಗ್ರೆಸ್‌ ಜಾರಕಿಹೊಳಿ ಮೇಲೆ ದ್ವೇಷ ಸಾಧಿಸುತ್ತಿರೋದು ತಪ್ಪು'

ವಿಜಯಾನಂದ ಕಾಶಪ್ಪನವರ 2017ರಿಂದಲೇ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅವರನ್ನು 10 ಲಕ್ಷ ಪಂಚಮಸಾಲಿಗಳ ಸಮ್ಮುಖದಲ್ಲಿಯೇ ರಾಷ್ಟ್ರೀಯ ಅಧ್ಯಕ್ಷರು ಎಂದು ಘೋಷಿಸಲಾಗಿದೆ. ವಿನಾಕಾರಣ ಗೊಂದಲ ಸೃಷ್ಟಿಮಾಡಬಾರದು ಎಂದರು.

ಸಿದ್ದರಾಮಯ್ಯನವರು ಹೇಳಿದಂತೆ ಕೇವಲ ಹಿಂದುಳಿದವರು, ದಲಿತರು ಮಾತ್ರ ಹಿಂದುಳಿದಿಲ್ಲ. ಇತರೆ ಸಮುದಾಯದವರು ಹಿಂದುಳಿದಿದ್ದಾರೆ. ಅವರ ಕಲ್ಯಾಣವೂ ಆಗಬೇಕಿದೆ. ಪ್ರಬಲ ಸಮಾಜದಲ್ಲಿಯೂ ಅನ್ಯಾಯಕ್ಕೆ ಒಳಗಾದವರು ಇದ್ದು, ಅವರಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿ ಅಗತ್ಯವಿದೆ. ಇದಕ್ಕಾಗಿಯೇ ಹೋರಾಟ ಮಾಡಲಾಗುತ್ತದೆ ಎಂದರು. ಅಮರೇಶ ಕರಡಿ ಸೇರಿದಂತೆ ಇತರರು ಇದ್ದರು.
 

click me!