'ಯಡಿಯೂರಪ್ಪ ಸರ್ಕಾರ ಹುಟ್ಟಿದ್ದೆ ಅನೈತಿಕ ಶಿಶುವಿನಿಂದ'

By Kannadaprabha NewsFirst Published Apr 2, 2021, 2:03 PM IST
Highlights

ಸಿಬಿಐಗೆ ಕೊಟ್ಟರೆ ಸಿಡಿ ಕೇಸ್‌ ಸತ್ಯ ಆಚೆಗೆ| ಡಿ.ಕೆ.ಶಿವಕುಮಾರ ಸಿಡಿ ಕೇಸ್‌ಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ. ಹೀಗಾಗಿ ಹೆಚ್ಚಿನ ಮಾಹಿತಿಯನ್ನು ಡಿಕೆಶಿಯವರಿಂದಲೇ ಪಡೆಯಿರಿ| ರಾಜ್ಯದಲ್ಲಿ ಪ್ರವಾಹ, ಕೋವಿಡ್‌ನಿಂದ ಜನತೆ ಸಾಕಷ್ಟು ತೊಂದರೆಯಲ್ಲಿದೆ ಎಂಬುದನ್ನು ಆಡಳಿತ ನಡೆಸುವವರು ಮರೆತೆ ಹೋಗಿದ್ದಾರೆ: ಎಸ್‌.ಆರ್‌.ಪಾಟೀಲ| 

ಬಾಗಲಕೋಟೆ(ಏ.02): ರಾಜ್ಯಾದ್ಯಂತ ಸದ್ದು ಮಾಡಿರುವ ಸಿಡಿ ಪ್ರಕರಣವನ್ನು ಎಸ್‌ಐಟಿ ಬದಲು ಸಿಬಿಐಗೆ ಕೊಟ್ಟಿದ್ದರೆ ಸತ್ಯ ಹೊರಗೆ ಬರುತ್ತಿತ್ತು ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಹೇಳಿದ್ದಾರೆ. 

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಕೇಸ್‌ನ ಸಂತ್ರಸ್ತೆ ನೀಡಿರುವ ಹೇಳಿಕೆಯ ನಂತರವೂ ರಮೇಶ ಜಾರಕಿಹೊಳಿ ಬಂಧನವಾಗದ ಬಗ್ಗೆ ಪ್ರಸ್ತಾಪಿಸಿದ ಅವರು, ಸಂತ್ರಸ್ತೆ ನ್ಯಾಯಾ​ಧೀಶರ ಮುಂದೆ 164 ಅಡಿ ಹೇಳಿಕೆ ನೀಡಿದ್ದು, ಅದು ತನಿಖಾ​ಧಿಕಾರಿಗೆ ಹೋಗುತ್ತದೆ. ಸಂತ್ರಸ್ತೆ ಹೇಳಿಕೆಯನ್ನು ಆಧರಿಸಿ ತನಿಖಾ​ಧಿಕಾರಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದರೆ ಸತ್ಯ ಬೇಗ ಹೊರಬರುತ್ತಿತ್ತು ಎಂದರು.

ಸಿಡಿ ಕೇಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಷಡ್ಯಂತ್ರವಿದೆ ಎಂಬ ಸಂತ್ರಸ್ತೆ ಕುಟುಂಬಸ್ಥರು ಆರೋಪಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಡಿ.ಕೆ.ಶಿವಕುಮಾರ ಅವರು ಸಿಡಿ ಕೇಸ್‌ಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ. ಹೀಗಾಗಿ ಹೆಚ್ಚಿನ ಮಾಹಿತಿಯನ್ನು ಡಿಕೆಶಿಯವರಿಂದಲೇ ಪಡೆಯಿರಿ ಎಂದರು.

ಸಿಡಿ ಲೇಡಿಗೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ: ಸಚಿವೆ ಜೊಲ್ಲೆ

ಸಿಡಿ ಸರ್ಕಾರ:

ಬಿಎಸ್‌ವೈ ನೇತೃತ್ವದ ಸರ್ಕಾರ ಸಿಡಿ ಸರ್ಕಾರ ಎಂದು ವಾಗ್ದಾಳಿ ನಡೆಸಿದ ಎಸ್‌ಆರ್‌ಪಿ, ಸಿಡಿಯಿಂದ ಸರ್ಕಾರ ನೈತಿಕ ಅಧಃಪತನವಾಗಿದೆ. ಸರ್ಕಾರ ಹುಟ್ಟಿದ್ದೆ ಅನೈತಿಕ ಶಿಶುವಿನಿಂದ ಎಂದ ಅವರು, ಕಾಂಗ್ರೆಸ್‌ ಜೆಡಿಎಸ್‌ನಿಂದ 17 ಶಾಸಕರು ಹೋಗಿ ಸರ್ಕಾರ ರಚಿಸಲು ನೆರವಾಗಿದ್ದರಿಂದ ಇದು ಅನೈತಿಕ ಸರ್ಕಾರವೇ ಆಗಿದೆ ಎಂದು ಆರೋಪಿಸಿದರು.

ವಿಧಾನಸಭೆಯಲ್ಲಿ ಸಂಖ್ಯಾಬಲ ಹೆಚ್ಚು ಮಾಡಿಕೊಳ್ಳಲು 17 ಶಾಸಕರು ಲಿವಿಂಗ್‌ ಟು ಗೆದರ್‌ ಇದ್ದಾಗ ಹುಟ್ಟಿರುವ ಸರ್ಕಾರ ಇದಾಗಿದೆ. ಹೀಗಾಗಿ ಈ ಸರ್ಕಾರ ಅನೈತಿಕ ಶಿಶು ಎಂದು ವ್ಯಂಗ್ಯವಾಡಿದರು. ಅಲ್ಲದೆ, ರಾಜ್ಯದಲ್ಲಿ ಪ್ರವಾಹ, ಕೋವಿಡ್‌ನಿಂದ ಜನತೆ ಸಾಕಷ್ಟು ತೊಂದರೆಯಲ್ಲಿದೆ ಎಂಬುದನ್ನು ಆಡಳಿತ ನಡೆಸುವವರು ಮರೆತೆ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 

click me!