Belagavi: ಸಾಹುಕಾರ್ ಕುಟುಂಬಕ್ಕೆ ಆಫ್ರಿಕಾ ಲಿಂಕ್: ಕೊನೆಗೂ ಇಡಿ ದಾಖಲಿಸಿದ ಆ ಬಿಗ್ ಕೇಸ್ ಯಾವುದು? ಬಯಲಾಗುತ್ತಾ ಅಸಲಿ ಸತ್ಯ?

Published : Sep 09, 2026, 07:31 PM IST
Satish Jarakiholi

ಸಾರಾಂಶ

ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ಇಡಿ ದಾಳಿ ನಡೆದಿದ್ದು, ಆಫ್ರಿಕಾದಲ್ಲಿ ಅಕ್ರಮ ಹೂಡಿಕೆ ಆರೋಪದ ಮೇಲೆ ತನಿಖೆ ನಡೆಯುತ್ತಿದೆ. ಈ ದಾಳಿಯು FEMA ಮತ್ತು PMLA ಕಾಯ್ದೆಗಳ ಅಡಿಯಲ್ಲಿ ದಾಖಲಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ನಡುವೆ ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವ, ಬೆಳಗಾವಿಯ ಸಾಹುಕಾರ ಎಂದೇ ಹೆಸರುವಾಸಿಯಾದ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಿಡೀರ್ ದಾಳಿ ನಡೆಸಿದ್ದು, ರಾಜ್ಯ ರಾಜಕೀಯ ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿಯ ನಡುವೆ ತೀವ್ರ ಸ್ವರೂಪದ ವಾಕ್ಸಮರ್ ಶುರುವಾಗಿದೆ.

ಬೆಂಗಳೂರು, ಬೆಳಗಾವಿಯಲ್ಲಿ ಇಡಿ ಮೆಗಾ ಶೋಧ!

ಬುಧವಾರ ಮುಂಜಾನೆಯಿಂದಲೇ ಕಾರ್ಯಾಚರಣೆಗಿಳಿದ ಇಡಿ ಅಧಿಕಾರಿಗಳ ತಂಡಗಳು ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸ, ಬೆಳಗಾವಿ ಮನೆ, ಅವರ ಪುತ್ರಿ ಹಾಗೂ ಚಿಕ್ಕೋಡಿ ಲೋಕಸಭಾ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ನಿವಾಸ ಸೇರಿದಂತೆ ಸುಮಾರು ೧೮ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿವೆ. ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಭದ್ರತೆಯೊಂದಿಗೆ ಆಗಮಿಸಿದ ಅಧಿಕಾರಿಗಳು, ಡಿಜಿಟಲ್ ಸಾಕ್ಷ್ಯಾಧಾರಗಳು, ಲ್ಯಾಪ್‌ಟಾಪ್ ಹಾಗೂ ಪ್ರಮುಖ ಆರ್ಥಿಕ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆಫ್ರಿಕಾ ಲಿಂಕ್ ಮತ್ತು ವಿದೇಶಿ ಹೂಡಿಕೆ ರಹಸ್ಯ!

ಸಚಿವ ಸತೀಶ್ ಜಾರಕಿಹೊಳಿ ಅವರು ನಿಯಮಗಳನ್ನು ಮೀರಿ ವಿದೇಶದಲ್ಲಿ, ಅದರಲ್ಲೂ ಪ್ರಮುಖವಾಗಿ ಆಫ್ರಿಕಾದಲ್ಲಿ ಅಕ್ರಮ ಹೂಡಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಆಫ್ರಿಕಾದ ಗಣಿಗಾರಿಕೆ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಇಡಿ 'ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ' (FEMA) ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದೆ. ಹಿಂದೆ ಅಬಕಾರಿ ಇಲಾಖೆ ವಿಚಾರವಾಗಿ ಸಚಿವರ ಭಾವಮೈದ, ಅಬಕಾರಿ ಜಂಟಿ ಆಯುಕ್ತ ವೈ.ಡಿ. ಮಂಜುನಾಥ್ ನಿವಾಸದ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಪತ್ತೆಯಾದ ಆರ್ಥಿಕ ಸುಳಿವುಗಳನ್ನೇ ಆಧರಿಸಿ ಈಗಿನ ಪ್ರತ್ಯೇಕ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಕೈ-ಕಮಲ ತಾರಕಕ್ಕೇರಿದ ಇಡಿ ಟಾಕ್ ವಾರ್!

ಈ ಇಡಿ ದಾಳಿಯು ರಾಜ್ಯದಲ್ಲಿ ತೀವ್ರ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ವಿಪಕ್ಷಗಳ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದೆ. ಕಾಂಗ್ರೆಸ್ ನಾಯಕರ ಧ್ವನಿ ಅಡಗಿಸಲು ಇಡಿ, ಸಿಬಿಐ ಬಳಸಲಾಗುತ್ತಿದೆ" ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಪಕ್ಷ ನಾಯಕರು ತಿರುಗೇಟು ನೀಡಿದ್ದು, "ಇಡಿ ಸುಮ್ಮಸುಮ್ಮನೆ ಯಾರ ಮೇಲೆಯೂ ದಾಳಿ ಮಾಡುವುದಿಲ್ಲ. ಯಾವುದೇ ತಪ್ಪು ಮಾಡದಿದ್ದರೆ ಭಯಪಡುವ ಅಗತ್ಯವೇನಿದೆ? ಆಧಾರಗಳಿದ್ದಾಗ ಮಾತ್ರ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತವೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ.

PREV
Read more Articles on
click me!

Recommended Stories

ನುಡಿದಂತೆ ನಡೆದ ಶಾಸಕ ಎಂ.ಕೃಷ್ಣಪ್ಪ: 20 ಮಂದಿ ಕ್ವಿಜ್ ವಿಜೇತರಿಗೆ ಉಚಿತ ಕಾಶಿ-ಪ್ರಯಾಗ ವಿಮಾನ ಯಾತ್ರೆ
38 ವರ್ಷದ ಸೇವೆ, ಕೊನೆ ಗಂಟೆ ಬಾರಿಸಿದ ದಾಸ್ ಅಂಕಲ್: ಬೆಂಗಳೂರಿನ ಭಾವುಕ ವಿಡಿಯೋ ಹಂಚಿದ ಮಹೀಂದ್ರಾ