ಚಿಕ್ಕಮಗಳೂರು: ಸಿಬ್ಬಂದಿ ಇಲ್ಲದೇ ಜನೌಷಧಿ ಕೇಂದ್ರಕ್ಕೆ ಬೀಗ

By Suvarna News  |  First Published Aug 29, 2022, 9:35 PM IST

. ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಿದ ಜನೌಷಧಿ ಕೇಂದ್ರ ಮಲೆನಾಡಿನಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಆಗಸ್ಟ್. 29) :
ಎಲ್ಲರಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಜನರಿಕ್ ಔಷಧಗಳನ್ನು ಲಭ್ಯವಾಗುವಂತೆ ಮಾಡುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಫಾರ್ಮಸುಟಿಕಲ್ಸ್ ಇಲಾಖೆ 2008ರ ನವೆಂಬರ್ ನಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ(ಪಿಎಂಬಿಜೆಪಿ)ಯನ್ನು ಆರಂಭಿಸಿದೆ. ಆದ್ರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿಬ್ಬಂದಿಗಳೇ ಇಲ್ಲ ಎಂದು ಕೇಂದ್ರಕ್ಕೆ ಬೀಗ ಹಾಕಲಾಗಿದೆ.

ಹೌದು.. ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಿದ ಜನೌಷಧಿ ಕೇಂದ್ರ ಮಲೆನಾಡಿನಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಬಡವರ್ಗದ ಜನರಿಗೆ ಔಷಧಿಗಳನ್ನು ಕೊಳ್ಳಲು ಹೆಚ್ಚು ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯ ಸಿಬ್ಬಂದಿ ಕೊರತೆಯಿಂದ ಬಾಗಿಲು ಹಾಕಿದ್ದು ಬಡರೋಗಿಗಳು ದುಪ್ಪಟ್ಟು ಹಣವನ್ನು ನೀಡಿ ಔಷಧಿ ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ.

Tap to resize

Latest Videos

ಚಿಕ್ಕಮಗೂರು ಜಿಲ್ಲೆಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಡರೋಗಿಗಳಿಗೆ ಹೊರೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ  ಜನೌಷಧಿ ಕೇಂದ್ರ ಬಂದ್ ಆಗಿರುವ ಹಿನ್ನಲೆಯಲ್ಲಿ ಬಡ ರೋಗಿಗಳು  ಖಾಸಗಿ ಮೆಡಿಕಲ್ ನತ್ತ ಔಷಧಿ ಖರೀದಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ತಾಲ್ಲೂಕ್ ಆಸ್ಪತ್ರೆಯಲ್ಲಿ ಜನೌಷಧ ಕೇಂದ್ರ ನಿರ್ಮಾಣ ಮಾಡಲಾಗಿತ್ತು. ಆರಂಭದಲ್ಲಿ ಉತ್ತಮ ಸೇವೆ ನೀಡಿದ್ದ ಕೇಂದ್ರದಿಂದ ನಿತ್ಯವೂ ನೂರಾರು ಮಂದಿ ಔಷಧಿಗಳನ್ನು ಪಡೆಯುತ್ತಿದ್ದರು. ಆದರೆ ಕಳೆದ ಕೆಲ ತಿಂಗಳುನಿಂದ  ಔಷಧಿ ಕೇಂದ್ರ ಬಾಗಿಲು ಹಾಕಿದ್ದು, ಜನರಿಗೆ ರಿಯಾಯಿತಿ ದರದಲ್ಲಿ ಔಷಧಿಗಳು ಸಿಗದಂತಾಗಿದೆ. ಅದರಲ್ಲೂ ಬಿಪಿ ಶುಗರ್ ಮಾತ್ರೆಗಳನ್ನು  ದುಪ್ಪಟ್ಟು ದರವನ್ನು  ಕೊಟ್ಟು ಖಾಸಗಿ ಮೆಡಿಕಲ್ ಶಾಪ್ಗಳಲ್ಲಿ ಔಷಧಿಗಳನ್ನು ಕೊಳ್ಳಬೇಕಾಗಿಬಂದಿದೆ. 

ಸಿಬ್ಬಂದಿ ಇಲ್ಲದೇ ಕೇಂದ್ರಕ್ಕೆ ಬೀಗ 
ಎಂಎಸ್ಎಐಲ್ ಸಂಸ್ಥೆಯ ಅಡಿಯಲ್ಲಿ ಕೆಲಸ ನಿರ್ವಹಿಸುವ ಈ ಜನೌಷಧಿ ಕೇಂದ್ರದಲ್ಲಿ ಸಿಬ್ಬಂದಿಯಿಲ್ಲದ ಕಾರಣ ಬಾಗಿಲು ಹಾಕಲಾಗಿದೆ. ಆ ಸಿಬ್ಬಂದಿಗೆ ಸರಿಯಾಗಿ ಸಂಬಳ ಕೊಡದಿರುವುದೇ ಅವರು ಬಿಟ್ಟು ಹೊಗಲು ಕಾರಣ ಎನ್ನಲಾಗಿದೆ.ಸಾರ್ವಜನಿಕರು ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗಲೂ ಪ್ರಯೋಜನವಾಗಿಲ್ಲ. ಜನೌಷಧಿ ಕೇಂದ್ರದ ನಿರ್ವಹಣೆ ನಮ್ಮ ವ್ಯಾಪ್ತಿಯಲ್ಲಿಲ್ಲ, ಕೇವಲ ಸ್ಥಳಾವಕಾಶ, ವಿದ್ಯುತ್ ಮೊದಲಾದ ಮೂಲ ಸೌಕರ್ಯಗಳನ್ನು ಉಚಿತವಾಗಿ ಕಲ್ಪಿಸುವುದಷ್ಟೇ ನಮ್ಮಜವಾಬ್ದಾರಿ ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಉತ್ತರವಾಗಿದೆ.

ಜನೌಷಧ ಕೇಂದ್ರ ಕಾರ್ಯನಿರ್ವಹಿಸದೇ ಸರಿ ಸುಮಾರು 3 ತಿಂಗಳು ಕಳೆದರೂ, ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಬಡರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ತಾಲ್ಲೂಕ್ ಆಸ್ಪತ್ರೆಯಲ್ಲಿ ಸಮಸ್ಯೆ ಎದ್ದು ಕಾಣ್ಣುತ್ತಿದ್ದರೂ  ಜನ ಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾರೊಬ್ಬರೂ ಮುಂದಾಗದಿರುವುದು ನಿರ್ಲಕ್ಷ್ಯತೆಯ ಪರಮಾವಧಿಯಂತೆ ಕಾಣತೊಡಗಿದೆ.

click me!