ಜಮಖಂಡಿ: ಮೀಸಲಾತಿ ತೆಗೆದು ಒಗೆಯಿರಿ ಎಂದ ಬಿಜೆಪಿ ಶಾಸಕನ ವಿಡಿಯೋ ವೈರಲ್‌

By Kannadaprabha News  |  First Published Oct 26, 2023, 11:42 AM IST

ಮೀಸಲಾತಿ ಕಿತ್ತೊಗೆಯಿರಿ ಎಂದು ಹೇಳಿದ್ದಾರೆ ಎನ್ನಲಾದ ಜಮಖಂಡಿಯ ಬಿಜೆಪಿ ಶಾಸಕರ ವಿಡಿಯೊ ವೈರಲ್ ಆದ ನಂತರ ಶಾಸಕ ಹೇಳಿಕೆಗೆ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮೀಸಲಾತಿ ರದ್ದು ಮಾಡಬೇಕೆಂಬ ಜಮಖಂಡಿ ಶಾಸಕರ ವಿವಾದಾತ್ಮಕ ಹೇಳಿಕೆ ಖಂಡಿಸಿ ಮುಧೋಳ ನಗರದಲ್ಲಿ ಭೀಮ್ ಆರ್ಮಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. 


ಬಾಗಲಕೋಟೆ(ಅ.26): ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಹಾಲುಮತ ಸಮುದಾಯದಿಂದ ಆಯೋಜನೆಗೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಅವರು ಮೀಸಲಾತಿ ತೆಗೆದು ಒಗೆದರೆ, ಎಲ್ಲರೂ ಟಾಪ್ ಕ್ಲಾಸ್‌ನಲ್ಲಿ ಬಂದುಬಿಡುತ್ತೇವೆ ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆದ ಬೆನ್ನಲ್ಲಿ ಅವರ ಹೇಳಿಕೆಗೆ ಜಿಲ್ಲೆಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ತಮ್ಮ ಮಾತಿನ ನಡುವೆ ಕನಕದಾಸರ ಕುಲಕುಲ ಕುಲವೆಂದು ಬಡಿದಾಡದಿರಿ... ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂಬ ಕೀರ್ತನವನ್ನು ಉಲ್ಲೇಖಿಸಿದ ಶಾಸಕ ರಿಜರ್ವೇಶನ್ ಕಾರಣಕ್ಕೆ ನಾವೆಲ್ಲರೂ ಅದು ನಮಗೇ ಸಿಗಬೇಕು ಎಂದು ಪರಸ್ಪರ ಹೊಡೆದಾಡಿಕೊಳ್ಳುವಂತಾಗಿದೆ. ಆ ಕಾರಣಕ್ಕೆ ರಿಜರ್ವೇಶನ್‌ ಅನ್ನು ತೆಗೆದು ಒಗೆಯಬೇಕು. ಆಗ ಎಲ್ಲರೂ ಟಾಪ್ ಕ್ಲಾಸ್‌ನಲ್ಲಿ ಬಂದುಬಿಡುತ್ತೇವೆ ಎಂದು ಹೇಳಿರುವ ವಿಡಿಯೊ ಇದೀಗ ಜಿಲ್ಲೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಈ ಸಂಬಂಧ ಕಿಡಿಕಾರಿರುವ ಆಪ್‌ ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು, ಬಿಜೆಪಿ ಮುಖಂಡರು ಸಂವಿಧಾನ ವಿರೋಧಿಗಳು ಎಂಬುದು ಶಾಸಕ ಗುಡಗುಂಟಿ ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ವಿದ್ಯುತ್‌ ಕೊರತೆ ಆಗದಂತೆ ತುರ್ತು ಕ್ರಮ: ಸಚಿವ ಎಂ.ಬಿ.ಪಾಟೀಲ

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಆಮ್‌ ಆದ್ಮಿ ಪಕ್ಷದ ಉತ್ತರ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಅರ್ಜುನ ಹಲಗಿಗೌಡರ, ಬಡವರು ಮತ್ತು ಹಿಂದುಳಿದವರು ಎಲ್ಲರಂತೆ ಸಾಮಾಜಿಕ ಕ್ಷೇತ್ರಗಳಲ್ಲಿ ಮುಂದೆ ಬರುವುದನ್ನು ಬಿಜೆಪಿಗರು ಸಹಿಸುವುದಿಲ್ಲ. ಎಸ್‌ಸಿ, ಎಸ್‌ಟಿ ಸೇರಿ ಇತರ ಹಿಂದುಳಿದ ವರ್ಗದವರು ಹಿಂದಿನಂತೆ ಕೂಲಿಗಳಾಗಿ, ಜೀತದಾಳುಗಳಾಗಿ ಬದುಕಬೇಕೆಂದು ಅವರ ಬಯಕೆಯಾಗಿದೆ. ಇವರು ಪ್ರಜಾಪ್ರಭುತ್ವ ವಿರೋಧಿಗಳು. ಬಿಜೆಪಿ ವಾಸ್ತವವಾಗಿ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವ ಪಕ್ಷವಾಗಿದ್ದರೆ ತಕ್ಷಣ ಜಗದೀಶ್ ಗುಡಗಂಟಿ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.

ಆಪರೇಷನ್‌ ಕಮಲ ಖಚಿತ: ಮಾಜಿ ಸಚಿವ ಮುರುಗೇಶ ನಿರಾಣಿ

ಮೀಸಲಾತಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಅಮೂಲ್ಯ ಕೊಡುಗೆಯಾಗಿದೆ. ಮೀಸಲಾತಿ ನಮ್ಮ ದೇಶದ ಹಿಂದುಳಿದ ಜನರ ಸಬಲೀಕರಣಕ್ಕಾಗಿ ಹಾಗೂ ಸಮಾನತೆ ಜಾರಿಗೊಳಿಸಲು ಸಂವಿಧಾನ ದೃಢೀಕರಿಸಿದ ವ್ಯವಸ್ಥೆಯಾಗಿದೆ. ಅದು ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಹಿಂದುಳಿದವರಿಗೆ ಪ್ರಾತಿನಿಧ್ಯವನ್ನು ಒದಗಿಸುತ್ತದೆ. ಭಾರತೀಯ ಸಂವಿಧಾನದಲ್ಲಿನ ನಿಬಂಧನೆಗಳ ಆಧಾರದ ಮೇಲೆ, ಇದು ಕೇಂದ್ರ ಸರ್ಕಾರ ಮತ್ತು ರಾಜ್ಯಗಳಿಗೆ ಮೀಸಲು ಕೋಟಾಗಳು ಅಥವಾ ಸೀಟುಗಳನ್ನು ಹೊಂದಿಸಲು ಅನುಮತಿ ನೀಡುತ್ತದೆ. ಮೀಸಲಾತಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ನ್ಯಾಯ ಒದಗಿಸಿ, ಅವರು ಇತರರೊಂದಿಗೆ ಸಮಾನವಾಗಿ ಬದುಕಲು ಸಾಧ್ಯವಾಗುವಂತೆ ಅವಕಾಶ ಕಲ್ಪಿಸುತ್ತದೆ ಎಂದಿದ್ದಾರೆ.

ಗುಡಗುಂಟಿ ವಿರುದ್ಧ ವಿವಿಧೆಡೆ ಆಕ್ರೋಶ 

ರಿಜರ್ವೇಶನ್ ಕಿತ್ತೊಗೆಯಿರಿ ಎಂದು ಹೇಳಿದ್ದಾರೆ ಎನ್ನಲಾದ ಜಮಖಂಡಿಯ ಬಿಜೆಪಿ ಶಾಸಕರ ವಿಡಿಯೊ ವೈರಲ್ ಆದ ನಂತರ ಶಾಸಕ ಹೇಳಿಕೆಗೆ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮೀಸಲಾತಿ ರದ್ದು ಮಾಡಬೇಕೆಂಬ ಜಮಖಂಡಿ ಶಾಸಕರ ವಿವಾದಾತ್ಮಕ ಹೇಳಿಕೆ ಖಂಡಿಸಿ ಮುಧೋಳ ನಗರದಲ್ಲಿ ಭೀಮ್ ಆರ್ಮಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು, ರಸ್ತೆ ತಡೆದು, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಭೀಮ್ ಆರ್ಮಿ ಕಾರ್ಯಕರ್ತರು, ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ ವಿರುದ್ಧ ಘೋಷಣೆ ಕೂಗಿದರು, ಶಾಸಕ ಜಗದೀಶ್ ಗುಡಗುಂಟಿ ಭಾವಚಿತ್ರ ಸುಟ್ಟು ಆಕ್ರೋಶ ಹೊರಹಾಕಿದರು.

click me!