ಕಾಮಗಾರಿ ಅಪೂರ್ಣ, ಬಿಲ್ ಪಾವತಿ ಸಂಪೂರ್ಣ, ಯೋಜನೆ ಹೆಸರಲ್ಲಿ ಲೂಟಿ, ಯೋಜನೆ ಪ್ರಗತಿ ತನಿಖೆಗೆ ಮಾಜಿ ಶಾಸಕ ಬಿ.ಆರ್. ಪಾಟೀಲ್ ಆಗ್ರಹ
ಕಲಬುರಗಿ(ಮಾ.11): ಜಿಲ್ಲೆಯ ಆಳಂದ ತಾಲೂಕಿನಲ್ಲಿ ಅನುಷ್ಠಾನದಲ್ಲಿರುವ ಮನೆ ಮನೆಗೂ ಗಂಗೆ ಹೆಸರಿನ ಜಲ್ ಜೀವನ ಮಿಷನ್ ಯೋಜನೆ ಜನರಿಗೆ ನೀರು ಪೂರೈಸುವಲ್ಲಿ ಸಂಪೂರ್ಣ ಮುಗ್ಗರಿಸಿದೆ. ಈ ಯೋಜನೆ ಹೆಸರಲ್ಲಿ 4 ಹಂತಗಳಲ್ಲಿ ತಾಲೂಕಿನ 160 ರಷ್ಟುಹಳ್ಳಿಗಳಲ್ಲಿ ವೆಚ್ಚ ಮಾಡಿರುವ 160 ಕೋಟಿ ರು. ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ್ ದೂರಿದ್ದಾರೆ. ಆಳಂದ ತಾಲೂಕಿನಲ್ಲಾಗಿರುವ ಯೋಜನೆಯ ಕಳಪೆ ಕೆಲಸ, ವೈಫಲ್ಯಗಳನ್ನೆಲ್ಲ ಪಟ್ಟಿಮಾಡಿರುವ ಅವರು ರಾಜ್ಯದ ಆರ್‌ಡಿಪಿಆರ್ ಕಾರ್ಯದರ್ಶಿಗಳಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರಿಗೆ ಚುನಾವಣಾ ವೆಚ್ಚಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ದುರುಪಯೋಗ ಮಾಡಿಕೊಳ್ಳಲಾಗಿದೆ. ಕಾಮಗಾರಿ ಶೇ.90ರಷ್ಟು ಪೂರ್ಣ ಮಾಡಲಾಗಿದೆ ಎಂದು ಹಣ ಲೂಟಿ ಮಾಡಲಾಗಿದೆ. ಆಳಂದದ ಜೊತೆಗೆ ಜಿಲ್ಲಾದ್ಯಂತ ಹಳ್ಳಿಗಳಲ್ಲಿ ರಸ್ತೆ ಬೇಕಾಬಿಟ್ಟಿಅಗೆದು ಹಾಕಲಾಗಿದೆ. ಕಳಪೆ ಕಾಮಗಾರಿ ನಡೆಸಿ ಹಲವೆಡೆ ಅಧ್ವಾನ ಮಾಡಿದೆ ಎಂದು ಪಟ್ಟಿ ಮಾಡಿದರು.
undefined
ಕಲ್ಯಾಣ ಕರ್ನಾಟಕದ 31 ಕ್ಷೇತ್ರದಲ್ಲಿ ಕೆಆರ್‌ಪಿಪಿ ಸ್ಪರ್ಧೆ: ಜನಾರ್ದನ ರೆಡ್ಡಿ
ಯೋಜನೆ ಹೆಸರಿನಲ್ಲಿ ಎಲ್ಲೆಂದರಲ್ಲಿ ಮನಸ್ಸಿಗೆ ಬಂದಂತೆ ಗುಣಮಟ್ಟದ ರಸ್ತೆಗಳನ್ನು ಅಗೆದು ಹಾಳು ಮಾಡಲಾಗುತ್ತಿದೆ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಹಣಕಾಸಿನ ಅನುಕೂಲ ಕಲ್ಪಿಸುವ ದುರುದ್ದೇಶದೊಂದಿಗೆ ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆಳಂದ ವಿಧಾನಸಭಾ ಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಹೆಸರಲ್ಲಿ ಹೀಗೆ ಸುಧಾರಿತ ರಸ್ತೆಗಳನ್ನು ಹಾಳು ಮಾಡಲಾಗುತ್ತಿದೆ ಎಂದೂ ಟೀಕಿಸಿದರು.
ಅವೈಜ್ಞಾನಿಕವಾಗಿ ಹಾಗೂ ಕಳಪೆ ಮಟ್ಟದಲ್ಲಿ ಪೈಪ್ಲೈನ್ ಅಳವಡಿಕೆ ಕಾಮಗಾರಿ ಕೈಗೊಳ್ಳುವ ಮೂಲಕ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಜಿಲ್ಲಾ ಪಂಚಾಯತಿ ಮುಖ್ಯ ನಿರ್ವಾಹಕ ಅಧಿಕಾರಿಗಳು ಕೂಡಲೆ ಆಳಂದ ಕ್ಷೇತ್ರದ ಯಾವ ಯಾವ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಕಾಮಗಾರಿ ನಡೆಯುತ್ತಿದೆಯೋ ಆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಶಾಸಕರು ಆಗ್ರಹಿಸಿದರು.
ಆಳಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಯೋಜನೆ ಅಡಿ ಮನಸ್ಸಿಗೆ ಬಂದಂತೆ ಕಾಮಗಾರಿ ಕೈಗೊಳ್ಳುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳದೆಯೇ ಕೆಲವೆಡೆ ಬಿಲ್ ಪೇಮೆಂಟ್ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆಯಾದಾಗ ಹಗರಣ ಹೊರಬರಲಿದೆ ಎಂದರು. ಸುದ್ದಿಗೋಷ್ಠಯಲ್ಲಿ ಸಿದ್ದರಾಮ ಪ್ಯಾಟಿ, ಗಣೇಶ ಪಾಟೀಲ, ಈರಣ್ಣ ಝಳಕಿ ಇದ್ದರು.