
ದಾವಣಗೆರೆ (ಜ.01): ಹೊಸ ವರ್ಷದ ಸಂಭ್ರಮದ ನಡುವೆಯೇ ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ದೇವೇಂದ್ರಪ್ಪ ಅವರು ಅತ್ಯಂತ ವಿಭಿನ್ನ ಮತ್ತು ಅರ್ಥಪೂರ್ಣ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. 'ನೊಂದವರಿಗೆ ನೆರವು' ಎಂಬ ಶೀರ್ಷಿಕೆಯಡಿ ತಾವೇ ಕೈಯಲ್ಲಿ ತಟ್ಟೆ ಹಿಡಿದು ಹಣ ಸಂಗ್ರಹಿಸುವ ಮೂಲಕ ಶಾಸಕರು ಮಾನವೀಯತೆ ಮೆರೆದಿದ್ದಾರೆ.
ಜಗಳೂರಿನ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಶಾಸಕ ದೇವೇಂದ್ರಪ್ಪ ಅವರು ಭಿಕ್ಷಾಟನೆ ಮಾಡುವ ಮೂಲಕ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದರು. ವೇದಿಕೆಯ ಮೇಲಿದ್ದ ಶಾಸಕರು ತಟ್ಟೆ ಹಿಡಿದು ನಿಂತಾಗ, ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಹಣ ನೀಡಿದರು. ಕೇವಲ ಮೊದಲ ದಿನವೇ ಅಂದಾಜು 5,68,300 ರೂ. ಹಣ ಸಂಗ್ರಹವಾಗಿದ್ದು, ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಸಕರು, 'ನಾನು ಈ ಅಭಿಯಾನಕ್ಕಾಗಿ ನನ್ನ ಪ್ರತಿ ತಿಂಗಳ ಒಂದು ಲಕ್ಷ ರೂಪಾಯಿ ಸಂಭಾವನೆಯನ್ನು ಮೀಸಲಿಡುತ್ತೇನೆ. ಇಂದು ನಾನು ವೈಯಕ್ತಿಕವಾಗಿ 1,26,000 ರೂ.ಗಳನ್ನು ಈ ನಿಧಿಗೆ ನೀಡುತ್ತಿದ್ದೇನೆ. ಭಿಕ್ಷಾಟನೆ ಮೂಲಕ ಒಟ್ಟು 1 ಕೋಟಿ ರೂ. ಹಣ ಸಂಗ್ರಹಿಸಿ ಅಸಹಾಯಕರಿಗೆ ನೆರವಾಗುವುದು ನನ್ನ ಸಂಕಲ್ಪ' ಎಂದು ಘೋಷಿಸಿದರು.
ಇನ್ನು ಜನರಿಂದ ಸಂಗ್ರಹವಾದ ಹಣದ ದುರುಪಯೋಗದ ಬಗ್ಗೆ ಎಚ್ಚರಿಸಿದ ಅವರು, 'ಸಾರ್ವಜನಿಕರ ಹಣವನ್ನು ಸ್ವಂತಕ್ಕೆ ಬಳಸಿದರೆ ಅದು ವಿಷಸರ್ಪವಾಗುತ್ತದೆ ಅಥವಾ ಚೇಳಾಗಿ ಕಚ್ಚುತ್ತದೆ. ಈ ಹಣವನ್ನು ನಿರ್ವಹಿಸಲು 7 ಜನರ ಸಮಿತಿ ರಚಿಸಲಾಗುವುದು. ಅನಾಥರು, ಅಂಗವಿಕಲರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ಎಲ್ಲಾ ಸಮುದಾಯದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಈ ಹಣವನ್ನು ತಲುಪಿಸಲಾಗುವುದು. ವರ್ಷಕ್ಕೊಮ್ಮೆ ಸಂಗ್ರಹವಾದ ಮತ್ತು ಖರ್ಚಾದ ಹಣದ ಪಕ್ಕಾ ಲೆಕ್ಕವನ್ನು ಜನರಿಗೆ ನೀಡುತ್ತೇವೆ' ಎಂದು ಪಾರದರ್ಶಕತೆಯ ಭರವಸೆ ನೀಡಿದರು.
ತಮ್ಮ ಭಾಷಣದ ಕೊನೆಯಲ್ಲಿ 'ಸುಖ ಎಲ್ಲರಿಗೆ ಎಲ್ಲೈತವ್ವ.. ದುಃಖ ತುಂಬ್ಯಾದ' ಎಂಬ ತತ್ವಪದವನ್ನು ಹಾಡುವ ಮೂಲಕ ಶಾಸಕರು ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದರು. ರಾಜಕೀಯ ಆಡಂಬರಗಳ ನಡುವೆ ಶಾಸಕರೊಬ್ಬರ ಈ ಜನಪರ ಕಾಳಜಿ ರಾಜ್ಯದ ಗಮನ ಸೆಳೆದಿದೆ.