
ತುರುವೇಕೆರೆ (ನ.29): ಡಾ.ಬಿ.ಆರ್. ಅಂಬೇಡ್ಕರ್(Dr BR Ambedkar) ದಲಿತರ ಪ್ರತಿನಿಧಿ ಎಂದು ಬಿಂಬಿಸುತ್ತಿರುವುದು ಸಮಾಜದಲ್ಲಿ ತಪ್ಪು ಸಂದೇಶವನ್ನು ಸಾರುವಂತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀಹ ಹೇಳಿದರು.
ತಾಲೂಕಿನ ನೀರಗುಂದ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್ ಮಹಿಳೆಯರಿಗೆ ಶಿಕ್ಷಣ ನೀಡಬೇಕು. ಅವರಿಗೆ ಆಸ್ತಿ ಹಕ್ಕು ನೀಡಬೇಕೆಂದು ಪ್ರತಿಪಾದಿಸಿದ್ದರು. ಅಂಬೇಡ್ಕರ್ ದೇಶದ ಸಮಸ್ತ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ಸಂವಿಧಾನವನ್ನು ರಚಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ದೇಶ ಮುನ್ನೆಡೆಯುತ್ತಿದೆ. ಅಂಬೇಡ್ಕರ್ ರಚಿಸಿರುವ ಸಂವಿಧಾನದ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರು ಕೇವಲ ದಲಿತರ ಪ್ರತಿನಿಧಿಯಲ್ಲ. ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದರು. ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು. ಬಡತನದ ನಿರ್ಮೂಲನೆಗಾಗಿ, ದೇಶದ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ಸಾರುವುದಕ್ಕಾಗಿ ಸಂವಿಧಾನ ರಚಿಸಿದರು ಎಂದು ಹೇಳಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ದಲಿತರನ್ನು ಸಮಾಜಮುಖಿಯನ್ನಾಗಿಸಲು ಆಶ್ರಯ, ಆರಾಧನಾ ಎಂಬ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು ಎಂದರು.
ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ , ನಿವೃತ್ತ ಅಪರ ಜಿಲ್ಲಾಧಿಕಾರಿ ಆರ್.ಅಲ್ಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಗ್ರಾಮದಲ್ಲಿ ಯಾವುದೇ ರಾಜಕೀಯ ದ್ವೇಷ ಬೆರಸದೇ ಸುಮಾರು 10 ಕೋಟಿಗೂ ಹೆಚ್ಚು ಮೊತ್ತದ ಶಾಶ್ವತ ಕಾಮಗಾರಿ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತುಮಲ್ ನಿರ್ದೇಶಕ ಸಿ.ವಿ.ಮಹಾಲಿಂಗಯ್ಯ, ಇ.ಒ.ಅನಂತರಾಜು, ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕ ರಮೇಶ್ ನಾಯಕ್, ಡಿಎಸ್.ಎಸ್ ಮುಖಂಡ ಕುಂದೂರು ತಿಮ್ಮಯ್ಯ, ಛಲವಾದಿ ಮುಖಂಡ ಡೊಂಕಿಹಳ್ಳಿ ರಾಮಣ್ಣ, ಮುಖಂಡರಾದ ವೆಂಕಟಾಪುರ ಯೋಗೀಶ್, ಕುಮಾರಸ್ವಾಮಿ, ಮಾದಿಹಳ್ಳಿ ಕಾಂತರಾಜು, ಲಕ್ಷ್ಮೀದೇವಮ್ಮ, ನೆಮ್ಮದಿಗ್ರಾಮ ಸಿ.ಎಸ್.ಮೂರ್ತಿ, ಚಂದ್ರಯ್ಯ, ಮಾದಿಹಳ್ಳಿ ಕಾಂತರಾಜು, ಕೃಷ್ಣಮಾದಿಗ, ಎನ್.ಮಹೇಶ್, ಗಂಗಾರಾಜು ಸೇರಿದಂತೆ ಹಲವು ಮುಖಂಡರು ಇದ್ದರು. ಖ್ಯಾತ ಗಾಯಕ ಕಂಬದ ರಂಗಯ್ಯ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
28 ಟಿವಿಕೆ 4 - ತುರುವೇಕೆರೆ ತಾಲೂಕಿನ ನೀರಗುಂದ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭವನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.