ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆ ಬದಲು ಕಾಂಗ್ರೆಸ್ ಜೋಡೋ ಯಾತ್ರೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್ ನಡೆಸುತ್ತಿರುವ ಭಾರತ ಜೋಡೋ ಯಾತ್ರೆ ಬಗ್ಗೆ ವ್ಯಂಗ್ಯವಾಡಿದರು.
ಚಿಕ್ಕಬಳ್ಳಾಪುರ (ಅ.11):ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆ ಬದಲು ಕಾಂಗ್ರೆಸ್ ಜೋಡೋ ಯಾತ್ರೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್ ನಡೆಸುತ್ತಿರುವ ಭಾರತ ಜೋಡೋ ಯಾತ್ರೆ ಬಗ್ಗೆ ವ್ಯಂಗ್ಯವಾಡಿದರು.
ಕ್ಷೇತ್ರದಲ್ಲಿ ಸೋಮವಾರ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಈಸ್ವ್ ಇಂಡಿಯಾ ಕಂಪನಿಗೆ ಹೋಲಿಸಿ ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸುರ್ಜೇ ವಾಲ ಮಾಡಿರುವ ಆರೋಪ ಕುರಿತು ಪ್ರತಿಕ್ರಿಯಿಸಿ, ಈಸ್ವ್ ಇಂಡಿಯಾ ಕಂಪನಿ ಯಾವುದು ಎಂಬುದನ್ನು ಜನರು ಅರ್ಥ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ದೇಶದಿಂದಲೇ ಕಾಂಗ್ರೆಸ್ ಅನ್ನು ಓಡಿಸಿದ್ದಾರೆ ಎಂದು ಲೇವಡಿ ಮಾಡಿದರು.
ಯಾತ್ರೆಗೆ ಜನ ಬೆಂಬಲ ಸಿಗುತ್ತಿಲ್ಲ
ಕಾಂಗ್ರೆಸ್ ತೋಡೋ ಆಗಿದೆ. ಕಾಂಗ್ರೆಸ್‌ನ ಜೋಡೋ ಎಂದು ಮಾಡಿಕೊಳ್ಳಲಿ ಅದಕ್ಕೆ ನಮ್ಮ ವಿರೋಧವಿಲ್ಲ. ನಿರ್ಧಿಷ್ಟಕಾರ್ಯಕ್ರಮ ಇಲ್ಲದೆ, ಗೊತ್ತು ಗುರಿ ಇಲ್ಲದೆ ಕಾಂಗ್ರೆಸ್ ನಾಯಕರು ಯಾತ್ರೆ ಮಾಡುತ್ತಿರುವುದು ವಿಪರ್ಯಾಸ. ಹಾಗಾಗಿಯೇ ಜನರೂ ಇದಕ್ಕೆ ಬೆಂಬಲಿಸುತ್ತಿಲ್ಲ. ಭಾರತ್ ಜೋಡೋ (Bharat Jodo) ಯಾತ್ರೆ ಅಲ್ಲ ಅದು ಕಾಂಗ್ರೆಸ್ ಜೋಡೋ ಯಾತ್ರೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.
ದೇಶ ಜೋಡಿಸಲು ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರು ಈಗಾಗಲೇ ಸಾಕಷ್ಟುಶ್ರಮಿಸಿದ್ದಾರೆ. ಅವರ ನಂತರ ಪ್ರಧಾನಿ ಮೋದಿ ಅವರು ಆರ್ಟಿಕಲ್ 370 ತೆಗೆದು, ದೇಶದಲ್ಲಿ ಒಂದೇ ಧ್ವಜ, ಒಂದೇ ಕಾನೂನು ಮತ್ತು ಒಂದೇ ಆಡಳಿತ ಇರುವಂತೆ ನೋಡಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಲ್ಲವೂ ಎರಡೆರಡಿತ್ತು. ಎರಡು ಆಡಳಿತ, ಎರಡು ಕಾನೂನು ಮತ್ತು ಎರಡು ಧ್ವಜಗಳಿದ್ದವು. ಇವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುತ್ತಿರುವ ರಸ್ತೆ ನಿರ್ಮಾಣ ಮಾಡಿದವರು ಅಟಲ್ ಬಿಹಾರಿ ವಾಜಪೇಯಿ. ವಾಜಪೇಯಿ ಅವರು ನಿರ್ಮಿಸಿದರೆ, ಮೋದಿ ಅವರು ಅದನ್ನು ಮುಂದುವರಿಸಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮಾದರಿ ಕ್ಷೇತ್ರ ಮಾಡಲು ಪಣ
ಕಳೆದ 10 ವರ್ಷದ ಅವಧಿಯಲ್ಲಿ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಅದರ ಹಿಂದಿನ 65 ವರ್ಷಗಳಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಕೂಲಂಕಷವಾಗಿ ಹೋಲಿಕೆ ಮಾಡಿದ ನಂತರ ಮತ ನೀಡುವ ನಿರ್ಧಾರ ಮಾಡಿ. ನಾನು ಯೋಗ್ಯ ಇದ್ದರೆ ಮಾತ್ರ ಮತ ನೀಡಿ, ನನಗಿಂತ ಅರ್ಹತೆ ಇದ್ದವರು ಕಣದಲ್ಲಿದ್ದರೆ ನಾನು ಮತ ಕೇಳುವುದೇ ಇಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲು ಪಣ ತೊಟ್ಟಿದ್ದು, ನೀರಾವರಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಕೈಗಾರಿಕೆ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಅಭಿವೃದ್ಧಿಯನ್ನು ಹಂತಹಂತವಾಗಿ ಮಾಡಲಾಗುತ್ತಿದೆ. ಕ್ಷೇತ್ರದ ಪ್ರತಿ ವ್ಯಕ್ತಿಯ ಬದುಕು ಹಸನು ಮಾಡುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದಕ್ಕೆ ಸರ್ಕಾರವೂ ಸಹಕಾರ ನೀಡುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ…, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಮುನಿರಾಜು, ಮಿಲ್ಟನ್ ವೆಂಕಟೇಶ…, ಆವುಲಕೊಂಡರಾಯಪ್ಪ, ರಾಜಣ್ಣ, ಮೂರ್ತಿ, ದಿನೇಶ…, ಶಂಕರ್, ನರಸಿಂಹಮೂರ್ತಿ ಸೇರಿದಂತೆ ಹಾರಓಬಂಡೆ, ಪೋಶೆಟ್ಟಿಹಳ್ಳಿ, ತಿಪ್ಪೇನಹಳ್ಳಿ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.
ರಕ್ಷಾ ರಾಮಯ್ಯ ಬಗ್ಗೆ ಪ್ರತಿಕ್ರಿಯೆ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಂ.ಆರ್.ಸೀತಾರಾಮಯ್ಯ ರವರ ಪುತ್ರ ರಕ್ಷಾ ರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಚಿಕ್ಕಬಳ್ಳಾಪುರಕ್ಕೆ ಯಾರೇ ಅಭ್ಯರ್ಥಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿ, ಜನರು ನನಗೇ ಮತ ಕೊಡುತ್ತಾರೆ. ಮೇಲಿನಿಂದ ಇಳಿದ ತಕ್ಷಣ ಯಾರೂ ಮತ ಕೊಡುವುದಿಲ್ಲ. ಕ್ಷೇತ್ರಕ್ಕೆ ಅವರ ಕೊಡುಗೆ ಏನು, ಕ್ಷೇತ್ರದ ಅಭಿವೃದ್ಧಿಗೆ ಅವರ ಪಾತ್ರ ಏನು ಎಂದು ಸಚಿವ ಸುಧಾಕರ್ ಪ್ರಶ್ನಿಸಿದರು.