* ಪಿಎಸೈ, ಕಾನ್ಸಟೇಬಲ್ ಲಂಚ ಆರೋಪ ಪ್ರಕರಣ
* ಸಸ್ಪೆಂಡ್ ಆದ ಕಾನ್ಸಟೇಬಲ್ ಐದೇ ದಿನಗಳಲ್ಲಿ ಮರು ನಿಯುಕ್ತಿ
* ಎಸ್ಪಿ ಕಾರ್ಯವೈಖರಿ ಬಗ್ಗೆ ಭಾರಿ ಚರ್ಚೆ
ಆನಂದ್ ಎಂ. ಸೌದಿ
ಯಾದಗಿರಿ(ಡಿ.19): ಇಲ್ಲಿಗೆ ಸಮೀಪದ ಕೌಳೂರು ಬಳಿ, ಇತ್ತೀಚೆಗೆ ಮರಳು ದಂಧೆಕೋರರಿಂದ ಗ್ರಾಮೀಣ ಠಾಣೆಯ ಪಿಎಸೈ ಹಾಗೂ ಕಾನ್ಸಟೇಬಲ್ 50 ಸಾವಿರ ರು.ಗಳ ಲಂಚ(Bribe) ಪಡೆದಿದ್ದಾರೆಂಬ ಆರೋಪದಡಿಯ(Allegation) ದೂರಿಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ. ಬಿ. ವೇದಮೂರ್ತಿ(Dr CB Vedamurthy) ಅವರ ಕಾರ್ಯವೈಖರಿ ಜನಸಾಮಾನ್ಯರಿಗಷ್ಟೇ ಅಲ್ಲ, ಖಾಕಿಪಡೆಯಲ್ಲೇ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ಕಾನ್ಸಟೇಬಲ್ ಅಮಾನತು(Constable Suspend) ಹಾಗೂ ಮರು ನಿಯುಕ್ತಿ ವಿಚಾರ ಸೇರಿದಂತೆ ಇತ್ತೀಚಿನ ಕೆಲವೊಂದು ಪ್ರಕರಣಗಳ ಬಗ್ಗೆ ಎಸ್ಪಿ ಡಾ. ವೇದಮೂರ್ತಿ ಅವರು ಕೈಗೊಂಡ ಕ್ರಮಗಳನ್ನು ಅವಲೋಕಿಸಿದರೆ, ಎಸ್ಪಿ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಯೋ ಅಥವಾ ಗೊತ್ತಿದ್ದೂ ಸಹ ಆರೋಪಿಗಳ(Accused) ರಕ್ಷಣೆಗೆ ಕಾನೂನಿನ ಕುಣಿಕೆ ಸಡಿಲಗೊಳಿಸುತ್ತಿದ್ದಾರೆಯೇ ಎಂಬ ಅನುಮಾನಗಳು ಇಲ್ಲೀಗ ವ್ಯಕ್ತವಾಗುತ್ತಿವೆ.
ಕೆಲವು ಪ್ರಕರಣಗಳಲ್ಲಿ ದೂರುದಾರರಿಗೆ ಆಮಿಷವೊಡ್ಡಿ ಅಥವಾ ಬೆದರಿಸಿಯೋ ದೂರು(Complaint) ವಾಪಸ್ ಪಡೆಯುವಂತೆ ಮಾಡುವುದು ಸೇರಿದಂತೆ, ಗ್ರಾಮೀಣ ಭಾಗದಲ್ಲಿ ಬೆಳಕಿಗೆ ಬಂದ ಕೆಲವೊಂದು ಪ್ರಕರಣಗಳನ್ನು, ತನಿಖೆ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟಬೇಕಾದ ಬದಲು, ‘ಸಂಧಾನ’ ಮೂಲಕ ಮುಚ್ಚಿ ಹಾಕುವಲ್ಲಿ ಖಾಕಿಪಡೆಯ ಕೆಲವರು ಮುಂದಾಳುತ್ವ ವಹಿಸುತ್ತಿದ್ದಾರೆನ್ನುವ ಮಾತುಗಳು ಪ್ರತಿಧ್ವನಿಸುತ್ತಿವೆ.
Karnataka Politics: ಅಭಿವೃದ್ಧಿಗಿಂತ ಅಪಪ್ರಚಾರವೇ ಕಾಂಗ್ರೆಸ್ಸಿನ ದೊಡ್ಡ ಸಾಧನೆ: ರಾಜೂಗೌಡ
ಏನಾಗಿತ್ತು?:
ಇತ್ತೀಚೆಗೆ ಕೌಳೂರು ಬಳಿ ನಡೆದದ್ದು ಎನ್ನಲಾದ ಪೊಲೀಸ್(Police) ವಾಹನದಲ್ಲಿದ್ದ ಕಾನ್ಸಟೇಬಲ್ ಹಣ ಪಡೆಯುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ(Social Media) ಹಬ್ಬಿ ಗಮನ ಸೆಳೆದಿತ್ತು. ಮರಳು ದಂಧೆಕೋರರಿಂದ ಗ್ರಾಮೀಣ ಠಾಣೆಯ ಪಿಎಸೈ ಸುರೇಶಕುಮಾರ್ ಹಾಗೂ ಕಾನ್ಸಟೇಬಲ್ ಪ್ರಭುಗೌಡ 50 ಸಾವಿರ ರು.ಗಳ ಲಂಚ ಪಡೆದಿದ್ದಾರೆಂಬ ಆರೋಪಗಳು ಕೇಳಿಬಂದಿದ್ದವು.
ಇಲಾಖೆಯ ಮುಜುಗರಕ್ಕೆ ಕಾರಣವಾದ ಈ ಹಿನ್ನೆಲೆಯಲ್ಲಿ, ಕಾನ್ಸಟೇಬಲ್ ಪ್ರಭುಗೌಡರನ್ನು ಎಸ್ಪಿ ಡಾ. ವೇದಮೂರ್ತಿ ಡಿ. 12 ರಂದು ಅಮಾನತು ಮಾಡಿ, ಆದೇಶ ಹೊರಡಿಸಿದ್ದರಲ್ಲದೆ, ಪಿಎಸೈಗೆ ಕಾರಣ ಕೇಳಿ ನೋಟೀಸ್(Notice) ನೀಡಿದ್ದರು. ಇದಕ್ಕೂ ಮುನ್ನ, ಜೂಜುಕೋರರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪರಾರಿಯಾಗಲೆತ್ನಿಸಿದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ(Suspiciously Death ಘಟನೆ ಮರೆಮಾಚುವಲ್ಲೇ ಹೈರಾಣಾದಂತಿದ್ದ ಖಾಕಿಪಡೆ, ಲಕ್ಷಾಂತರ ರು.ಗಳ ಹಣ ಸುರಿಸಿತ್ತು ಎನ್ನಲಾಗಿತ್ತಲ್ಲದೆ, ಈಗ ಮತ್ತದೇ ಗ್ರಾಮೀಣ ಠಾಣೆಯ ಲಂಚ ಆರೋಪದ ವಿಚಾರ ಮುಚ್ಚಿಹಾಕುವಲ್ಲಿ ಹರಸಾಹಸಕ್ಕಿಳಿದಂತಿತ್ತು.
ಆದರೆ, ಕಾನ್ಸಟೇಬಲ್ ಅಮಾನತುಗೊಳಿಸಿ, ಪಿಎಸೈಗೆ ನೋಟೀಸ್ ನೋಡಿದ ಎಸ್ಪಿ ಕ್ರಮಕ್ಕೆ ಇಲಾಖೆಯಲ್ಲೇ ಅಪಸ್ವರ ಕೇಳಿಬಂದಿತ್ತು. ದೊಡ್ಡವರ ಪಾರಾಗಿಸಲು ಸಣ್ಣವರ ಬಲಿ ಸಹಜ ಎಂಬುದಾಗಿ ಠಾಣೆಗಳಲ್ಲೇ ಪಿಸುಗುಟ್ಟಿದವು. ಈ ಹಿಂದೆ ಎರಡ್ಮೂರು ಪ್ರಕರಣಗಳಲ್ಲಿ ಪಿಎಸೈ ಅವರನ್ನು ಉಳಿಸಿಕೊಳ್ಳಲು ಶತಾಯುಗತಾಯು ಯತ್ನಿಸಿದ್ದ ಮೇಲಧಿಕಾರಿಗಳು, ಕೆಳಹಂತದ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಕೈತೊಳೆದುಕೊಂಡಿದ್ದರು. ಈಗಲೂ ಹಾಗೆಯೇ ಪಾರಾಗಿಸಲು ಹಾಗೂ ಈ ಆರೋಪದ ಮಜುಗರದಿಂದ ಪಾರಾಗಲು ಪ್ರಭುಗೌಡ ಅಮಾನತು ಮಾಡಿದ್ದಾರೆ ಎಂಬ ಸಹೋದ್ಯೋಗಿಗಳ ಮಾತುಗಳು ಮೂಡಿಬಂದವು.
ಭ್ರಷ್ಟಾಚಾರದ ಹಣದಿಂದ ಬಿಜೆಪಿ ಆಡಳಿತ : ಪ್ರಿಯಾಂಕ್ ಖರ್ಗೆ ಟೀಕೆ
ಹೀಗಾಗಿ, ಅದೇನು ಒತ್ತಡವಿತ್ತೋ ಎನ್ನುವಂತೆ, ಅಮಾನತು ಆದೇಶಿಸಿದ ಐದೇ ದಿನಗಳಲ್ಲಿ ಪ್ರಭುಗೌಡರನ್ನು ಗ್ರಾಮೀಣ ಠಾಣೆಯಿಂದ ಯಾದಗಿರಿ(Yadgir) ನಗರ ಠಾಣೆಗೆ ಮರು ನಿಯುಕ್ತಿಗೊಳಿಸಿರುವುದು ಖಾಕಿಪಡೆಯಲ್ಲೇ ತೀವ್ರ ಮತ್ತಷ್ಟೂ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೂ ಮುನ್ನ ದೂರುದಾರನಿಗೆ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಮಾತನಾಡಿ, ದೂರು ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದಾರೆ. ಮಾಮೂಲಿ ಕೊಡುವುದು ಕಾಮನ್ ಆಗಿದ್ದು, ದೂರು ವಾಪಸ್ ಪಡೆದರೆ ಮರಳು(Sand) ಸಾಗಿಸಲು ಅನುಮತಿ ಕೊಡಿಸುವುದಾಗಿ ಆಮಿಷ ಒಡ್ಡಿದ ಮಾತುಗಳಿವೆ. ಶುಕ್ರವಾರ ಸಂಜೆಯಿಡೀ ಎಸ್ಪಿ ಕಚೇರಿಯಲ್ಲಿ ದೂರುದಾರರ ಜೊತೆ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೈಡ್ರಾಮಾ ನಡೆಸಿದ್ದಾರೆ. ಅವರನ್ನು ಕುಳ್ಳಿರಿಸಿ ವೀಡಿಯೋ ಮಾಡಿ, ತ್ರಿಬ್ಬಲ್ ರೈಡಿಂಗ್ ಮಾಡುವಾಗ ಹಿಡಿದಿದ್ದರಿಂದ ಫೈನ್ ಕಟ್ಟಿದ್ದೇವೆ ಎಂದು ಹೇಳಿಕೆ ನೀಡಿಸಿ, ಪ್ರಕರಣಕ್ಕೆ ತೇಪೆ ಹಚ್ಚುವ ಯತ್ನ ನಡೆಸಿದಂತಿದೆ.
ಕೆಲವು ದೊಡ್ಡ ದೊಡ್ಡ ಅಧಿಕಾರಿಗಳಿಗೆ ಕೆಳಹಂತದ ಸಿಬ್ಬಂದಿಗಳ ಮೂಲಕ ಮಾಮೂಲಿ ತಲುಪುತ್ತಿದ್ದು, ಸಿಕ್ಕಿಬಿದ್ದರೆ ಅವರನ್ನೇ ಬಲಿಯಾಗಿಸುವುದು ದೊಡ್ಡವರ ತಂತ್ರದ ಭಾಗ ಇದಾಗಿದೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ ಹೆಸರೇಳಲಿಚ್ಛಿಸದ ಸಿಬ್ಬಂದಿಯೊಬ್ಬರು, ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ಎನ್ನುವ ಮೂಲಕ ಇಲಾಖೆಯ ಕಾರ್ಯವೈಖರಿ ಬಗ್ಗೆ ಬೇಸರ ಹೊರಹಾಕಿದರು.
ಬಹುದಿನಗಳವರೆಗೆ ಅಮಾನತ್ತಿನಲ್ಲಿಡಲಾಗದು, ಇಲಾಖಾ ವಿಚಾರಣಾ ಬಾಕಿಯಿರಿಸಿ ಮರು ನಿಯುಕ್ತಿ ಆದೇಶಿಸಲಾಗಿದೆ ಅಂತ ಯಾದಗಿರಿ ಎಸ್ಪಿ ಡಾ. ವೇದಮೂರ್ತಿ ತಿಳಿಸಿದ್ದಾರೆ.