ಹಸಿರು ವಲಯದಲ್ಲಿದ್ದ ಇದೀಗ ಮುಂಬೈ ಸಂಪರ್ಕ ದೊಡ್ಡ ಕಂಟಕವಾಗುತ್ತಿದೆ. ತಬ್ಲಿಘಿಗಳ ಶಾಕ್‌ನಿಂದ ಹೊರಬರುವ ಮುನ್ನವ ಮಲೆನಾಡಿನ ಮಂದಿಗೆ ಮುಂಬೈ ಸಂಪರ್ಕ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಮೇ.18): ಹಸಿರು ವಲಯದಲ್ಲಿ ನೆಮ್ಮದಿಯಾಗಿದ್ದ ಮಲೆನಾಡು ಜಿಲ್ಲೆ ಶಿವಮೊಗ್ಗಕ್ಕೀಗ ನಿತ್ಯ ಕೊರೋನಾ ಭೀತಿ ಎದುರಾಗುತ್ತಲೇ ಇದೆ. ಮೊದಲು ಅಹ್ಮದಾಬಾದ್‌ನಿಂದ ಬಂದ ತಬ್ಲಿಘಿಗಳಿಂದ ಕೊರೋನಾ ಆತಂಕ ಶುರುವಾದರೆ ಇದೀಗ ಮುಂಬೈ ಸಂಪರ್ಕ ದೊಡ್ಡ ಕಂಟಕವಾಗುತ್ತಿದೆ.
ಮೇ 10 ರಂದು ಮೊದಲ ಶಾಕ್ ಎದುರಾಗಿತ್ತು. ಭಾನುವಾರ ಮಧ್ಯಾಹ್ನ ಅಹ್ಮದಾಬಾದ್‌ನಿಂದ ಬಂದ 9 ಮಂದಿ ತಬ್ಲಿಘಿಗಳ ಪೈಕಿ 8 ಮಂದಿಯಲ್ಲಿ ಪಾಸಿಟೀವ್ ಕಾಣಿಸಿತ್ತು. ಇದರಿಂದ ಮಲೆನಾಡು ಬೆಚ್ಚಿ ಬಿದ್ದಿತು. ಲಾಕ್‌ಡೌನ್ ಸಂಕಷ್ಟದಿಂದ ಆಗಷ್ಟೇ ಸಹಜ ಜೀವನದೆಡೆ ಮರಳುತ್ತಿದ್ದ ಮಲೆನಾಡಿಗೆ ಇದು ದೊಡ್ಡ ಶಾಕ್. ಆದರೆ ಸರ್ಕಾರದ ಹೊಸ ಪಾಲಿಸಿಯಿಂದಾಗಿ ಹಸಿರುವಲಯ ಬದಲಾಗಲಿಲ್ಲ.
undefined
ಮೇ 15 ರಂದು ಇನ್ನೊಂದು ಅಘಾತ ಎದುರಾಗಿತ್ತು. ತೀರ್ಥಹಳ್ಳಿ ಮೂಲದ ವ್ಯಕ್ತಿಗೆ ಕೊರೋನಾ ಪಾಸಿಟೀವ್ ಕಾಣಿಸಿಕೊಂಡಿದ್ದು, ಈತ ಮುಂಬೈನಿಂದ ಪಾಸ್ ಇಲ್ಲದೆ ತಪ್ಪಿಸಿಕೊಂಡು ಬಂದಿದ್ದ. ಪಿ-995 ಗುರುತಿನ ಈತನ ಟ್ರಾವಲ್ ಹಿಸ್ಟರಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವು ತಂದಿದೆ. ಇದನ್ನು ಅರಗಿಸಿಕೊಳ್ಳುವಷ್ಟರಲ್ಲಿ ಮೇ 16 ಶನಿವಾರ ರಿಪ್ಪನ್‌ಪೇಟೆ ಮೂಲದ ಇಬ್ಬರಿಗೆ ಮತ್ತು ಸಾಗರ ಮೂಲದ ಒಬ್ಬ ಗರ್ಭೀಣಿಗೆ ಕೊರೋನಾ ಇರುವುದು ದೃಢಪಟ್ಟಿತ್ತು. ಪುನಃ ಭಾನುವಾರ ಎರಡು ಪಾಸಿಟೀವ್ ಪತ್ತೆಯಾಗಿದೆ. ಹೊಸನಗರ ಮತ್ತು ತೀರ್ಥಹಳ್ಳಿಗೆ ಮುಂಬೈನಿಂದ ಮರಳಿದ್ದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ ಇವರು ಕೂಡಾ ಕ್ವಾರಂಟೈನ್‌ನಲ್ಲಿ ಇದ್ದವರು ಎನ್ನುವುದು ಸಮಾಧಾನದ ಸಂಗತಿ.
ವಲಸಿಗರ ಕಾಟ:
ಮುಂಬೈ ಮೂಲದ ವಲಸಿಗರ ಕಾಟ ಇನ್ನೂ ಆರಂಭದ ಹಂತದಲ್ಲಿದೆ. ಅಲ್ಲಿಂದ ಇಲ್ಲಿಯವರೆಗೆ ಪಾಸ್ ತೆಗೆದುಕೊಂಡವರದ್ದು ಒಂದು ಕತೆಯಾದರೆ, ಪಾಸ್ ಇಲ್ಲದೆ ಬಂದವರದ್ದು ದೊಡ್ಡ ಸಮಸ್ಯೆ ಹುಟ್ಟಿಹಾಕಲಿದೆ. ಪಾಸ್ ತೆಗೆದುಕೊಂಡು ಬಂದವರ ಲೆಕ್ಕ ಜಿಲ್ಲಾಡಳಿತದಲ್ಲಿದೆ. ಎಲ್ಲರೂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಪಾಸ್ ಇಲ್ಲದೆ ಬಂದವರು ಎಷ್ಟುಮಂದಿ? ಹೇಗೆ ಬಂದಿರಬಹುದು? ಎಲ್ಲಿರಬಹುದು ಎಂಬಿತ್ಯಾದಿ ವಿಷಯಗಳ ಕುರಿತು ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿದೆ.
ಆರಂಭದಲ್ಲಿ ಪಾಸ್ ಸಿಗುವುದು ದುಸ್ತರವಾಗಿದ್ದ ಸಂದರ್ಭದಲ್ಲಿ ಸಾಕಷ್ಟುಮಂದಿ ಕದ್ದು ಮುಚ್ಚಿ ಬಂದು ಊರು ಸೇರಿಕೊಂಡಿದ್ದಾರೆ. ಎಷ್ಟೋ ಪ್ರಕರಣಗಳಲ್ಲಿ ಅಕ್ಕಪಕ್ಕದವರು ವಿಷಯ ತಿಳಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆದರೆ ಅಕ್ಕಪಕ್ಕದವರಿಗೂ ಗೊತ್ತಾಗದ ಹಾಗೆ ಸಾಕಷ್ಟುಮಂದಿ ಪ್ರವೇಶ ಪಡೆದಿರಬಹುದು ಎಂಬ ಸಂಶಯವಿದೆ.
ಅದಕ್ಕಿಂತ ಮುಖ್ಯವಾಗಿ ಹೀಗೆ ಪಾಸ್ ಇಲ್ಲದೆ ಒಳ ನುಗ್ಗುವವರ ಟ್ರಾವಲ್ ಹಿಸ್ಟರಿ ತೀವ್ರ ಆತಂಕ ಸೃಷ್ಟಿಸುತ್ತದೆ. ಪೊಲೀಸರಿಂದ ತಲೆ ಮರೆಸಿಕೊಳ್ಳುವ ಕಾರಣಕ್ಕೆ ರಾತ್ರೋ ರಾತ್ರಿ ಸಂಚರಿಸುತ್ತಿದ್ದಾರೆ. ಲಾರಿ ಮತ್ತಿತರ ವಾಹನ ಹಿಡಿದು ಅಲೆದಾಡಿದ್ದಾರೆ. ಹೀಗಾಗಿ ಇವರ ಜಾಡು ಹುಡುಕುವುದೇ ದೊಡ್ಡ ತಲೆ ನೋವು ತಂದಿದೆ.
ಮದ್ಯಕ್ಕೆ ಆರಂಭದ ಉತ್ಸಾಹ ಈಗಿಲ್ಲ: ಆದಾಯದಲ್ಲಿ ಭಾರೀ ಕುಸಿತ!
ಪೊಲೀಸ್ ಇಲಾಖೆ ಸಾಕಷ್ಟುಬಿಗು ಬಂದೋಬಸ್ತು ಮಾಡಿದ್ದರೂ ಕಳ್ಳದಾರಿಯಿಂದ ಒಳ ನುಗ್ಗಿದವರು ಇದ್ದಾರೆ. ಇದಕ್ಕೆ ಯಾರನ್ನು ದೂಷಿಸಬೇಕು, ಯಾರನ್ನು ಹೊಣೆಗಾರನ್ನಾಗಿ ಮಾಡಬೇಕು ಎಂದು ತಿಳಿಯುತ್ತಿಲ್ಲ. ಕೆಲವೊಮ್ಮೆ ಲಾರಿ ಚಾಲಕರ ಅಜಾಗರುಕತೆಯಿಂದ ಕೂಡ ಇದೆಲ್ಲ ನಡೆದಿದೆ. ಜೊತೆಗೆ ಸ್ವತಃ ಅವರೇ ತೊಂದರೆಗೂ ಸಿಲುಕಿದ್ದಾರೆ.
ಒಟ್ಟಾರೆ ಮುಂಬೈ ಸಂಪರ್ಕದಿಂದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚುತ್ತಿದೆ. ಅಲ್ಲಿಂದ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬೇರೆ ರಾಜ್ಯಕ್ಕಿಂತ ಮುಂಬೈ ಸಂಪರ್ಕವೇ ಹೆಚ್ಚು ಅಪಾಯ ತಂದಿಡುತ್ತಿದೆ. ಇದು ನಿಲ್ಲುವಂತೆಯೂ ಕಾಣುತ್ತಿಲ್ಲ.
ಹಳ್ಳಿಬೈಲ್ ಯುವಕನ ಟ್ರಾವಲ್ ಹಿಸ್ಟರಿ:
ತೀರ್ಥಹಳ್ಳಿ ತಾಲೂಕಿನ ಹಳ್ಳಿಬೈಲು ಗ್ರಾಮದ ಯುವಕನ ಟ್ರಾವಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ. ಸದ್ಯ ಸೋಂಕಿತನನ್ನು ಪಿ-995 ಎಂದು ಗುರುತಿಸಲಾಗಿದೆ.
ಮುಂಬೈನ ಧಾರಾವಿಯ ನಂಟು ಹೊಂದಿದ್ದ ಈತ ಲಾರಿ ಹಿಡಿದು ಹರಿಹರದವರೆಗೆ ಬಂದ. ಅಲ್ಲಿಂದ ಚೆನ್ನಗಿರಿಯ ಕಡೆ ನಡೆದುಕೊಂಡು ಹೊರಟ. ಜೊತೆಗೆ ಚೆನ್ನಗಿರಿ ತಾಲೂಕಿನ ಗುರುರಾಜಪುರದಲ್ಲಿನ ತನ್ನ ಸೋದರ ಸಂಬಂಧಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಸೋದರ ಸಂಬಂಧಿ ಬೈಕ್‌ನಲ್ಲಿ ಮಧ್ಯರಾತ್ರಿ ಮನೆಗೆ ಕರೆದುಕೊಂಡು ಹೋಗಿದ್ದಾನೆ. ರಾತ್ರಿ ಅಲ್ಲಿಯೇ ಕಳೆದು, ಬೆಳಗಾಗುವಾಗ ಸುತ್ತಮುತ್ತಲಿನ ಜನರಿಗೆ ವಿಷಯ ಗೊತ್ತಾಗಿ ಗಲಾಟೆ ಮಾಡಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ದು ಉಷ್ಣಾಂಶ ಪರೀಕ್ಷಿಸಿ ಬಿಡಲಾಗಿದೆ. ಆ ಬಳಿಕ ಅಲ್ಲಿಂದ ಶಿವಮೊಗ್ಗದ ಕಡೆಗೆ ಪ್ರಯಾಣಿಸಿದ್ದಾನೆ.
ಶಿವಮೊಗ್ಗ ಗಡಿಯನ್ನು ಹೇಗೆ ಪ್ರವೇಶಿಸಿದ ಎಂದು ಸರಿಯಾಗಿ ಗೊತ್ತಿಲ್ಲ. ನಂತರ ಇಲ್ಲಿನ ವಿದ್ಯಾನಗರದಲ್ಲಿ ಓಡಾಡಿ, ಬಳಿಕ ತೀರ್ಥಹಳ್ಳಿಯ ತನ್ನೂರಿನ ಕಡೆಗೆ ಲಾರಿಯೊಂದರಲ್ಲಿ ಪ್ರಯಾಣಿಸಿದ್ದಾನೆ. ಸೋಂಕಿತನ ಸ್ನೇಹಿತ ಆಟೋ ಚಾಲಕ. ಈತ ಪಿ-995 ವ್ಯಕ್ತಿಯ ಸಂಪರ್ಕದ ಬಳಿಕ ತೀರ್ಥಹಳ್ಳಿ ತುಂಬೆಲ್ಲ ಓಡಾಡಿದ್ದಾನೆ. ಪಿ-995 ಸೋಂಕಿತ ವ್ಯಕ್ತಿ ಚಿಕ್ಕಮಗಳೂರು ಜಿಲ್ಲೆಗೂ ಪ್ರವೇಶ ಮಾಡಿದ್ದಾನೆ ಎಂಬ ಸುದ್ದಿಯಿದೆ. ಈತನ ತಾಯಿ ಅಥವಾ ಪತ್ನಿ ನರೇಗಾ ಕೆಲಸಕ್ಕೆ ಹೋಗಿದ್ದು ಎಂದೂ ಹೇಳಲಾಗುತ್ತಿದೆ. ವಿಷಯ ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಾರೆ ಈತನ ಸಂಚಾರದ ಇತಿಹಾಸ ಸಾಕಷ್ಟುಆತಂಕ ಹುಟ್ಟಿಸುತ್ತದೆ.