
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಜೂ.24): ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನೌಕಾನೆಲೆ ಸಹಯೋಗದದೊಂದಿಗೆ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಯೋಜನೆಗೆ ಬಿಟ್ಟುಕೊಡುವ ಭೂಮಿಗೆ ಪರಿಹಾರ ನೀಡುವ ವಿಚಾರದಲ್ಲಿ ಹೊಂದಾಣಿಕೆಯಾಗದಿದ್ದರಿಂದ ಜನರು ಜಾಗ ನೀಡಲು ಹಿಂದೇಟು ಹಾಕಿದ್ದರು. ಇದೀಗ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕಾರವಾರ ಶಾಸಕರ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಲಾಗಿದ್ದು, ಉತ್ತಮ ಪರಿಹಾರದ ಭರವಸೆ ನೀಡಲಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ....
ಹೌದು, ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಭಾರತೀಯ ನೌಕಾಪಡೆ ಸಹಯೋಗದಲ್ಲಿ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಅದರಂತೆ ತಾಲ್ಲೂಕಿನ ಅಲಗೇರಿ ಹಾಗೂ ಬೇಲೆಕೇರಿ ಗ್ರಾಮದಲ್ಲಿ ಯೋಜನೆಗೆ ಅಗತ್ಯ ಭೂಮಿಯನ್ನು ಗುರುತಿಸಲಾಗಿದ್ದು, ನೌಕಾನೆಲೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ವಿಮಾನನಿಲ್ದಾಣಕ್ಕೆ ಅಗತ್ಯ ರನ್‌ವೇಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಬೇಕಿತ್ತು. ಆದರೆ, ಅಲಗೇರಿಯಲ್ಲಿ ಈ ಹಿಂದೆ ನೌಕಾನೆಲೆ ನಿರ್ಮಾಣಕ್ಕಾಗಿ ಜಾಗ ನೀಡಿ ನಿರಾಶ್ರಿತರಾದ ಕುಟುಂಬಸ್ಥರೇ ಇರುವುದರಿಂದ ಇದೀಗ ಮತ್ತೊಮ್ಮೆ ನಿರಾಶ್ರಿತರಾಗುವ ಬದಲು ಹೆಚ್ಚಿನ ಪರಿಹಾರಕ್ಕೆ ಗ್ರಾಮಸ್ಥರು ಬೇಡಿಕೆಯಿಟ್ಟಿದ್ದರು. ಆದರೆ, ಕಳೆದ ಮೂರು ವರ್ಷಗಳಿಂದಲೂ ಪರಿಹಾರದ ವಿಚಾರವಾಗಿ ಸಾಕಷ್ಟು ಸಭೆಗಳನ್ನು ನಡೆಸಲಾಗಿತ್ತಾದರೂ ಈವರೆಗೂ ಯಾವುದೂ ಹೊಂದಾಣಿಕೆಯಾಗದೇ ಭೂಸ್ವಾಧೀನ ಪ್ರಕ್ರಿಯೆಗೆ ಹಿನ್ನೆಡೆಯಾಗಿತ್ತು. ಇದೀಗ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಶಾಸಕ ಸತೀಶ್ ಸೈಲ್ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಉತ್ತಮ ಪರಿಹಾರದ ಭರವಸೆಯೊಂದಿಗೆ ಐದು ಅಂಶಗಳ ಬೇಡಿಕೆಯನ್ನು ಗ್ರಾಮಸ್ಥರಿಂದ ಪಡೆದುಕೊಂಡಿದ್ದಾರೆ.
ಸಾವಿಗೆ ಹೆದರದ ಕಾರ್ಯಕರ್ತರು ನಾವು, ಸೋಲಿಗೆ ಹೆದರುತ್ತೇವೆಯೇ?: ಸಿ.ಟಿ.ರವಿ
ಇನ್ನು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮಸ್ಥರ ಜಮೀನಿಗೆ ಗುಂಟೆಗೆ 2.75 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಹೇಳಿದ್ದು, ಸರ್ಕಾರದ ನಿಯಮದಂತೆ ಇದು ಸಾಧ್ಯವಿಲ್ಲರಲಿಲ್ಲ. ಅಲ್ಲದೇ, ಯೋಜನೆಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿರೋದಾಗಿ ತಿಳಿಸಿದ್ದು, ದಾಖಲೆಗಳಲ್ಲಿ ಯಾವುದೇ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರ ಜನರ ದಿಕ್ಕುತಪ್ಪಿಸಿ ಯೋಜನೆ ಜಾರಿಗೆ ಯತ್ನಿಸಿತ್ತು. ಆದರೆ, ಕಾಂಗ್ರೆಸ್ ಅವಧಿಯಲ್ಲಿ ಜನರ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಬದ್ಧರಾಗಿರೋದಾಗಿ ಶಾಸಕ ಸೈಲ್ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಜನರು ಮಾತ್ರ ಸಭೆಯಲ್ಲಿ ತೀರ್ಮಾನಿಸಿದಂತೆ ನಮ್ಮ ಬೇಡಿಕೆಗಳಲ್ಲಿ ಹೆಚ್ಚಿನ ಪಾಲು ಈಡೇರುವಂತೆ ಹೊಂದಾಣಿಕೆಯಾದಲ್ಲಿ ಮಾತ್ರ ಭೂಮಿ ನೀಡೋದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಮೂರು ವರ್ಷಗಳ ಬಳಿಕ ವಿಮಾನ ನಿಲ್ದಾಣ ಯೋಜನೆ ಜಾರಿಗೆ ಗ್ರಾಮಸ್ಥರೊಂದಿಗಿನ ಮಾತುಕತೆ ಫಲಪ್ರದವಾದಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ, ಮುಂದಿನ ದಿನಗಳಲ್ಲಿ ಸರ್ಕಾರ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಿ ಕೊಟ್ಟ ಮಾತು ಉಳಿಸಿಕೊಳ್ಳುತ್ತಾ ಅಥವಾ ಜನರ ಪಾಲಿಗೆ ಭರವಸೆ ಮಾತ್ರ ಉಳಿದುಕೊಳ್ಳುತ್ತಾ ಅಂತಾ ಕಾದುನೋಡಬೇಕಿದೆ.