
ಕೊರಟಗೆರೆ (ಏ.20): ಸೂರ್ಯ- ಚಂದ್ರ ಇರುವ ತನಕ ಎತ್ತಿನಹೊಳೆ ಯೋಜನೆಯ ನೀರು ಕೊರಟಗೆರೆ ಕ್ಷೇತ್ರದ 104 ಕೆರೆಗಳಿಗೆ ಹರಿಯುತ್ತೆ. ನಾನು ಕೊರಟಗೆರೆ ವಿಧಾನಸಭಾ ಕ್ಷೇತ್ರದ ರೈತರ ಮನೆಮಗ. 2 ವರ್ಷದ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ 750 ಕೋಟಿಗೂ ಅಧಿಕ ಅನುದಾನ ಬಂದಿದೆ. ಮುಂದಿನ 3 ವರ್ಷದ ಅವಧಿಯಲ್ಲಿ ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಯ ಚಿತ್ರಣ ಬದಲಾಗುವಂತೆ ಕೆಲಸ ಮಾಡುವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿ ಶ್ರೀಕ್ಷೇತ್ರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ೪೫೪ ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಅತಿಸೂಕ್ಷ್ಮ ಗೃಹ ಇಲಾಖೆಗೆ ನನ್ನನ್ನು ನೇಮಿಸಿದ್ದಾರೆ. ಹಳ್ಳಿಗಳಿಗೆ ನಾನು ಬರುವುದಕ್ಕೆ ಆಗುತ್ತಿಲ್ಲ, ಅದಕ್ಕಾಗಿ ನಾನು ಜನರಲ್ಲಿ ಕ್ಷಮೆ ಕೇಳುವೆ. ನಾನು ನಿಮ್ಮ ಮನೆಯ ಮಗನಾಗಿ ಪ್ರತಿಯೊಂದು ಹಳ್ಳಿಯಲ್ಲಿಯೂ ಅಭಿವೃದ್ಧಿಗೆ ಅನುದಾನ ತರುವೆ. ಗ್ಯಾರಂಟಿ ಯೋಜನೆಯ ಜೊತೆಯಲ್ಲೇ ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಯೂ ಆಗಲಿದೆ ಎಂದು ಭರವಸೆ ನೀಡಿದರು. ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಸಹ ಬೂಟಾಟಿಕೆ ಮಾಡಿದ ವ್ಯಕ್ತಿ ನಾನಲ್ಲ. ಅಭಿವೃದ್ಧಿಯೇ ನನ್ನನ್ನು ಟೀಕೆ ಮಾಡುವವರಿಗೆ ನಾನು ನೀಡುವ ಉತ್ತರ. ನರೇಗಾ ಯೋಜನೆಯಡಿ 3 ಕೋಟಿ ವೆಚ್ಚದಲ್ಲಿ 200ಕ್ಕೂ ಅಧಿಕ ಶಾಲೆಗಳ ಶೌಚಾಲಯ, ಆಟದ ಮೈದಾನ, ಕಾಂಪೌಂಡು ಮತ್ತು ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈಡೇರಿದ ರೈತರ ಬಹುದಿನಗಳ ಬೇಡಿಕೆ: ಕೊರಟಗೆರೆ ಕ್ಷೇತ್ರಕ್ಕೆ ನಾನು 2008ರಲ್ಲಿ ಚುನಾವಣೆಗೆ ಬಂದಾಗ ಕೋಡ್ಲಹಳ್ಳಿಯ ರೈತರು ನನ್ನ ಮುಂದೆ ನೀರಾವರಿಯ ಸವಾ0ಲು ಹಾಕಿದ್ದರು. ನೀವು ಭರವಸೆ ನೀಡಬೇಡಿ, ಜಾರಿಗೆ ತನ್ನಿ, ನಿಮ್ಮ ಜೊತೆ ಇರ್ತೀವಿ ಅಂದಿದ್ದರು. ಅದಕ್ಕಾಗಿಯೇ ಎತ್ತಿನಹೊಳೆ ಯೋಜನೆಗೆ ೨೦೧೩ರಲ್ಲಿ ಅಡಿಗಲ್ಲು ಹಾಕಿದೆ. ಈಗ ನಾನು ರೈತರಿಗೆ ನೀಡಿದ ನೀರಾವರಿ ಭರವಸೆ ೨೦೨೬ಕ್ಕೆ ಈಡೇರುತ್ತೆ. ಸೂರ್ಯ- ಚಂದ್ರ ಇರುವ ತನಕ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯುತ್ತದೆ ಎಂದರು. ಸಣ್ಣ ನೀರಾವರಿ ಸಚಿವ ಬೋಸರಾಜು ಮಾತನಾಡಿ, ಡಾ.ಜಿ.ಪರಮೇಶ್ವರ್ ಬೇಡಿಕೆಯಂತೆ ತುಮಕೂರು ಜಿಲ್ಲೆಯ ೧೦ ತಾಲೂಕಿನ ಅಂತರ್ಜಲ ಅಭಿವೃದ್ಧಿಗೆ ನನ್ನ ಇಲಾಖೆಯಿಂದ ೬೭೦ ಕೋಟಿ ನೀಡಲಾಗಿದೆ. ಈಗಾಗಲೇ ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ೫೨೬ ಕೊಳವೆಬಾವಿ ಹಾಕಿಸಿ ಪಂಪು, ಮೋಟಾರ್ ವಿತರಣೆ ಮಾಡಿದ್ದೇವೆ.
ಬಿಜೆಪಿ ಎಲ್ಲಾ ಆರೋಪ ಹೂರಣವಿಲ್ಲದ ಹೋಳಿಗೆಯಂತೆ ಕಳೆದು ಹೋದವು: ಸಚಿವ ಪ್ರಿಯಾಂಕ್ ಖರ್ಗೆ
ಜಿಲ್ಲೆಯ ಅಭಿವೃದ್ಧಿಗೆ ಗೃಹ ಸಚಿವರು ಏನೇ ಕೇಳಿದರೂ ನಮ್ಮ ಸರ್ಕಾರ ನೀಡಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಾವಗಡ ಶಾಸಕ ಎಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಎಸ್ಪಿ ಅಶೋಕ್, ಮಧುಗಿರಿ ಎಸಿ ಕೊಟ್ಟೂರು ಶಿವಪ್ಪ, ತಹಸೀಲ್ದಾರ್ ಮಂಜುನಾಥ, ಬೆಂಗಳೂರು ಸಣ್ಣ ನೀರಾವರಿ ಕಾರ್ಯದರ್ಶಿ ರಾಘವನ್, ಮುಖ್ಯ ಇಂಜಿನಿಯರ್ ಪ್ರಕಾಶ್ ಶ್ರೀಹರಿ, ಅಧೀಕ್ಷಕ ಇಂಜಿನಿಯರ್ ಸಂಜೀವರಾಜು, ತುಮಕೂರು ಕಾರ್ಯಪಾಲಕ ಇಂಜಿನಿಯರ್ ಮೂಡಲಗಿರಿಯಪ್ಪ, ಸಣ್ಣ ನೀರಾವರಿ ಎಇಇ ತಿಪ್ಪೇಸ್ವಾಮಿ, ಎಇ ರಮೇಶ್, ತಾಪಂ ಇಒ ಅಪೂರ್ವ, ಎಡಿಎ ಗುರುಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವತ್ಥ್ ನಾರಾಯಣ್, ತೀತಾ ಗ್ರಾಪಂ ಅಧ್ಯಕ್ಷೆ ಸುಮಂಗಳ, ಮುಖಂಡರಾದ ಮಹಾಲಿಂಗಪ್ಪ, ಎಂಎನ್‌ಜೆ ಮಂಜುನಾಥ, ಕುಮಾರ್ ಸೇರಿದಂತೆ ಇತರರು ಇದ್ದರು.