ಯಲಬುರ್ಗಾ: ನೀರಾವರಿ ಯೋಜನೆಗಳೇ ರಾಯರೆಡ್ಡಿಗೆ ಸವಾಲು..!

By Kannadaprabha News  |  First Published May 17, 2023, 1:57 PM IST

ಮಾಜಿ ಸಚಿವ ಹಾಲಪ್ಪ ಆಚಾರ ಅವರಿಗಿಂತ ಪ್ರತಿ ಗ್ರಾಮದಲ್ಲಿ ಹೆಚ್ಚಿನ ಲೀಡ್‌ ಪಡೆದಿರುವ ರಾಯರಡ್ಡಿ ಅವರಿಗೆ ಯಲಬುರ್ಗಾ ಕ್ಷೇತ್ರದಲ್ಲಿ ಹಲವಾರು ಸವಾಲುಗಳಿವೆ. ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡುವೆ ಎಂದಿರುವ ರಾಯರೆಡ್ಡಿ ಅವರಿಗೆ ಕೆಲವು ಆದ್ಯತೆ ಕೆಲಸಗಳು ಇವೆ.


ಕುಕನೂರು(ಮೇ.17):  6ನೇ ಬಾರಿ ಶಾಸಕರಾಗಿ ಆಯ್ಕೆಯಾದ ಬಸವರಾಜ ರಾಯರೆಡ್ಡಿ ಅವರಿಗೆ ಈ ಸಲ ಯಲಬುರ್ಗಾ ಕ್ಷೇತ್ರದಲ್ಲಿ ನೀರಾವರಿ ಹಾಗೂ ಕೆರೆ ತುಂಬಿಸುವ ಯೋಜನೆಗಳೇ ದೊಡ್ಡ ಸವಾಲು. ಅಲ್ಲದೆ ಈ ಸಲ ಚುನಾವಣೆಯಲ್ಲೂ ಸಹ ನೀರಾವರಿ ಹಾಗೂ ಕೆರೆ ತುಂಬಿಸುವ ಯೋಜನೆಗಳೇ ಅಸ್ತ್ರ ಆಗಿದ್ದವು. ಅವು ಈಗ ಸವಾಲಾಗಿ ಶಾಸಕ ಬಸವರಾಜ ರಾಯರೆಡ್ಡಿ ಅವರ ಮುಂದಿವೆ.

ಮಾಜಿ ಸಚಿವ ಹಾಲಪ್ಪ ಆಚಾರ ಅವರಿಗಿಂತ ಪ್ರತಿ ಗ್ರಾಮದಲ್ಲಿ ಹೆಚ್ಚಿನ ಲೀಡ್‌ ಪಡೆದಿರುವ ರಾಯರಡ್ಡಿ ಅವರಿಗೆ ಯಲಬುರ್ಗಾ ಕ್ಷೇತ್ರದಲ್ಲಿ ಹಲವಾರು ಸವಾಲುಗಳಿವೆ. ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡುವೆ ಎಂದಿರುವ ರಾಯರೆಡ್ಡಿ ಅವರಿಗೆ ಕೆಲವು ಆದ್ಯತೆ ಕೆಲಸಗಳು ಇವೆ.

Tap to resize

Latest Videos

undefined

KARNATAKA ELECTION RESULT 2023: ಬಿಜೆಪಿಯ ದುರಹಂಕಾರ, ದುರಾಡಳಿತದಿಂದ ಸೋಲು ಅನುಭವಿಸಿದೆ, ಜನಾರ್ದನ ರೆಡ್ಡಿ

ಕೃಷ್ಣಾ ಬೀ ಸ್ಕೀಂ ರಾಷ್ಟ್ರೀಕರಣ:

ಸುಪ್ರೀಂ ಕೊರ್ಟಿನಲ್ಲಿ ತಡೆಯಾಜ್ಞೆ ಇರುವುದರಿಂದ ಕೃಷ್ಣ ಬೀ ಸ್ಕೀಂ ನೀರಾವರಿ ಯೋಜನೆಯನ್ನು ಪರ್ಯಾಯ ಯೋಜನೆಯನ್ನಾಗಿಸಿ ಕೆರೆ ತುಂಬಿಸುವ ಕಾರ್ಯ ಜರುಗುತ್ತಿದೆ. ಶಾಸಕ ರಾಯರೆಡ್ಡಿ ಅವರಿಗೆ ಇದೊಂದು ದೊಡ್ಡ ಚಾಲೆಂಜ್‌ ಸಹ ಆಗಿದೆ. ಸುಪ್ರೀಂ ಕೊರ್ಟಿನಲ್ಲಿರುವ ತಡೆಯಾಜ್ಞೆ ತೆರವುಗೊಳಿಸಲು ರಾಜ್ಯ, ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ವಹಿಸುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಕೃಷ್ಣ ಬೀ ಸ್ಕೀಂ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿವರ್ತಿಸಲು ಮತ್ತು ಕ್ಷೇತ್ರದಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕಿದೆ.

ನೀರಾವರಿ ಯೋಜನೆಯ ಸಮರ್ಪಕ ಅನುಷ್ಠಾನದ ಮೊದಲು ಈಗಾಗಲೇ ಯಲಬುರ್ಗಾ ಕ್ಷೇತ್ರಕ್ಕೆ ಕೃಷ್ಣೆ ನೀರು ಬಂದಿದೆ. ಕ್ಷೇತ್ರದ 26 ಕೆರೆಗಳಿಗೆ ಶೀಘ್ರ ಕೃಷ್ಣ ನೀರು ಬಂದು ತಲುಪಬೇಕಿದೆ ಹಾಗೂ ತುಂಗಭದ್ರ ನದಿಯಿಂದ .263 ಕೋಟಿ ವೆಚ್ಚದಲ್ಲಿ ಜರುಗಿರುವ ನೀರಾವರಿ ಯೋಜನೆಯಿಂದ ಯಲಬುರ್ಗಾ ಕ್ಷೇತ್ರದ 10 ಕೆರೆಗಳಿಗೆ ನೀರು ಬರಬೇಕು.

ತಳಕಲ್‌ ಭಾಗದಲ್ಲಿ ಅನುಷ್ಠಾನ ಆಗುತ್ತಾ ಸಿಂಗಟಾಲೂರು ಏತ ನೀರಾವರಿ:

ಸಿಂಗಟಾಲೂರು ನೀರಾವರಿ ಯೋಜನೆಯಿಂದ ತಳಕಲ್ಲ ಮತ್ತು ಬನ್ನಿಕೊಪ್ಪ ಗ್ರಾಮಗಳ 15000 ಎಕರೆ ಭೂಮಿಗೆ ಹನಿ ನೀರಾವರಿ ಯೋಜನೆಗೆ .310 ಕೋಟಿಯನ್ನು ರಾಯರೆಡ್ಡಿಯವರೇ ಮಂಜೂರು ಮಾಡಿಸಿದ್ದರು, ಆದರೆ ಬಿಜೆಪಿ ಸರ್ಕಾರ ಅದನ್ನು ಮಧ್ಯಪ್ರದೇಶ ನೀರಾವರಿ ಯೋಜನೆ ಮಾದರಿಯಲ್ಲಿ ಮಾಡಲು ಆದೇಶಿಸಿದ್ದು, ಸದ್ಯ ನನೆಗುದಿಗೆ ಬಿದ್ದಿರುವ ಈ ಭಾಗದ ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನ ಆಗುತ್ತಾ ಕಾದು ನೋಡಬೇಕು.

763 ಕೋಟಿಯ ಮನೆ ಮನೆಗೆ ಶುದ್ಧ ಕುಡಿವ ನೀರು ಯೋಜನೆ:

ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕುಗಳ 359 ಗ್ರಾಮಗಳ ಎಲ್ಲ ಜನವಸತಿ ಪ್ರದೇಶಗಳಿಗೆ ಪ್ರತಿಯೊಬ್ಬರಿಗೆ ದಿನಂಪ್ರತಿ 85 ಲೀಟರ್‌ ಉಚಿತ ಕುಡಿಯುವ ನೀರು ಪೂರೈಕೆ ಮಾಡಲು 763 ಕೋಟಿಗಳ ವೆಚ್ಚದ ಬಹು ಗ್ರಾಮಯೋಜನೆಯಡಿ ಶುದ್ಧ ಕುಡಿಯುವ ನೀರು ಯೋಜನೆ ಕಾಮಗಾರಿ ಮಂಜೂರು ಮಾಡಿಸಿದ ಕೀರ್ತಿ ಬಸವರಾಜ ರಾಯರಡ್ಡಿ ಅವರದು. ಎಲ್‌ ಆಂಡ್‌ ಟೀ ಕಂಪನಿ ಕಳೆದ ಆರು ವರ್ಷದಿಂದ ಮಾಡುತ್ತಾ ಬಂದಿದೆ. ಆದರೆ ಇನ್ನೂ ಸಹ ಕಾಮಗಾರಿ ಪೂರ್ಣಗೊಂಡಿಲ್ಲ. ರಾಯರೆಡ್ಡಿ ಅವರು ಈ ಯೋಜನೆಯ ಸಮರ್ಪಕ ಅನುಷ್ಠಾನ ಮಾಡಿ ಕ್ಷೇತ್ರದ ಜನತೆಯ ಬಾಯಾರಿಕೆ ನೀಗಿಸಬೇಕಿದೆ.

ಗುನ್ನಾಳ ಪಾಲಿಟೆಕ್ನಿಕ್‌, ತಳಬಾಲಿನ ಡಿಗ್ರಿ ಕಾಲೇಜ್‌:

ಯಲಬುರ್ಗಾ ತಾಲೂಕಿನ ಗುನ್ನಾಳದಲ್ಲಿ 20 ಕೋಟಿ ವೆಚ್ಚದಲ್ಲಿ ವಸತಿಯುಕ್ತ ಪಾಲಿಟೆಕ್ನಿಕ್‌ ಕಾಲೇಜು ಕಟ್ಟಡ ಜರುಗುತ್ತಿದ್ದು, ಈಗಾಗಲೇ ಬಹುತೇಕವಾಗಿ ಪಾಲಿಟೆಕ್ನಿಕ್‌ ಕಟ್ಟಡ ಪೂರ್ಣವಾಗಿದೆ. ಹಾಗೇ ಕುಕನೂರು ತಾಲೂಕಿನ ತಳಬಾಳ್‌ನಲ್ಲಿ ವಸತಿಯುಕ್ತ ಸರ್ಕಾರಿ ಡಿಗ್ರಿ ಕಾಲೇಜು ಕಟ್ಟಡ ಸಹ ಪೂರ್ಣಗೊಂಡಿದ್ದು, ಇವೆರೆಡು ಆರಂಭವಾಗಬೇಕಿವೆ.

ಕೌಶಲ್ಯ ತರಬೇತಿ ಕೇಂದ್ರ ಆರಂಭ:

ತಳಕಲ್ಲಿನ ಕೌಶಲ್ಯ ಕೇಂದ್ರ ರಾಜ್ಯದಲ್ಲಿ ಬಹುದೊಡ್ಡ ತರಬೇತಿ ಕೇಂದ್ರ. ಇಲ್ಲಿ ಹೆಚ್ಚಿನ ರೀತಿಯಲ್ಲಿ ಕೌಶಲ್ಯ ಹಾಗು ಉದ್ಯೋಗಕ್ಕೆ ಆದ್ಯ ಸಿಗುವಂತೆ ರಾಯರೆಡ್ಡಿ ಅವರು ಮಾಡಬೇಕಿದೆ.

ಉದ್ಯೋಗಕ್ಕೆ ಆದ್ಯತೆ:

ಯುವಕರಿಗೆ ಉದ್ಯೋಗ ನೀಡಲು ಶಾಸಕ ರಾಯರಡ್ಡಿ ಅವರು ಕ್ಷೇತ್ರದಲ್ಲಿ ಎಸ್‌ಇಜಡ್‌ ಕೈಗಾರಿಕಾ ವಲಯ ಸ್ಥಾಪಿಸಿ, ಕಂಪನಿಗಳನ್ನು ಕರೆತಂದು ಉದ್ಯೋಗ ನೀಡುತ್ತಾರಾ ನೀಡಬೇಕು.

ಹೊಸ ಕರೆಗಳ ಸ್ಥಾಪನೆ:

ಶಾಸಕ ರಾಯರೆಡ್ಡಿ ಅವರು ಕ್ಷೇತ್ರದಲ್ಲಿ 60 ಹೊಸ ಕೆರೆಗಳನ್ನು ಸ್ಥಾಪಿಸಿ ಕೆರೆ ತುಂಬಿಸುವ ಆಶ್ವಾಸನೆಯನ್ನು ಚುನಾವಣೆ ಪ್ರಚಾರಕ್ಕೆ ಬಂದಿದ್ದ ಸಿದ್ದರಾಮಯ್ಯನವರ ಮುಂದೆಯೇ ಜನರಿಗೆ ಹೇಳಿದ್ದಾರೆ, ಇದನ್ನು ರಾಯರಡ್ಡಿ ಈಡೇರಿಸಬೇಕಿದೆ.

ಕುಕನೂರಿಗೆ ವೈದ್ಯರು, ಸಂತೆ ಸ್ಥಳಾಂತರ:

ಕುಕನೂರು ಆಸ್ಪತ್ರೆಗೆ ನುರಿತ ವೈದ್ಯರ ನೇಮಕ ಆಗಬೇಕಿದೆ ಹಾಗೂ ಹಳೆ ಸಂತೆ ಮಾರುಕಟ್ಟೆಸ್ಥಳದಲ್ಲಿ ಸಂಜೆ ವ್ಯಾಪಾರ ಜರುಗುವಂತೆ ರಾಯರೆಡ್ಡಿ ಮಾಡಬೇಕಿದೆ. ಅಲ್ಲದೆ ಕುಕನೂರಿನ ಕೋಳಿಪೇಟೆ ಜನರಿಗೆ ಮಹಿಳಾ ಶೌಚಾಲಯ ಕಟ್ಟಿಸಿಕೊಡಬೇಕಿದೆ.

ಮಿನಿವಿಧಾನಸೌಧ ಕಟ್ಟಡ:

ಮಾಜಿ ಸಚಿವ ಹಾಲಪ್ಪ ಆಚಾರ ಅವರು ಆಡಳಿತ ಸೌಧ ನಿರ್ಮಿಸಲು  9.95 ಕೋಟಿಯನ್ನು ಆಡಳಿತ ಸೌಧ ನಿರ್ಮಿಸಲು ಹಾಗು 5.39 ಕೋಟಿಯನ್ನು ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸಿದ್ದಾರೆ. ಶಾಸಕ ರಾಯರೆಡ್ಡಿ ನೂತನ ಕುಕನೂರು ತಾಲೂಕಿಗೆ ಮಾದರಿ ಮಿನಿವಿಧಾನಸೌಧ ಹಾಗು ಮಾದರಿ ತಾಲೂಕು ಕ್ರೀಡಾಂಗಣ ನಿರ್ಮಿಸಬೇಕಿದೆ.

Koppal Election Result 2023: ಬಿಜೆಪಿಗೆ ನೆರವಿಗೆ ಬಾರದ ಹನುಮ, ಕಾಂಗ್ರೆಸ್‌ ಹಂಗಾಮ!

ತಳಕಲ್ಲಿಗೆ ಪಪಂ ಹಾಗು ಬೇವೂರಿಗೆ ಹೋಬಳಿ ಭಾಗ್ಯ:

ಕುಕನೂರು ತಾಲೂಕಿನ ಬಹುದೊಡ್ಡ ಗ್ರಾಮ ತಳಕಲ್ಲಿಗೆ ಪಪಂ ಹಾಗು ಯಲಬುರ್ಗಾ ತಾಲೂಕಿನ ಬೇವೂರಿಗೆ ಹೋಬಳಿ ಕೇಂದ್ರದ ಭಾಗ್ಯ ರಾಯರಡ್ಡಿ ನೀಡಬೇಕಿದೆ.

ರೈಲ್ವೆ ಓಡಾಟ:

ಈಗಾಗಲೇ ತಳಕಲ್ಲಿನಿಂದ ಯಲಬುರ್ಗಾದವರೆಗೆ ಗದಗ ವಾಡಿ ರೈಲ್ವೆ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ರಾಯರಡ್ಡಿ ಅವರೇ ಗದಗ ವಾಡಿ ರೂವಾರಿಗಳಾಗಿದ್ದು, ಇವರು ಅವಧಿಯಲ್ಲಿ ರೈಲು ಓಡಾಟ ಆಗಬೇಕಿದೆ.

ಈ ಹಿಂದೆ ನಾನು ಸಚಿವನಾಗಿದ್ದಾಗ ಕ್ಷೇತ್ರಕ್ಕೆ ತಂದ ಅನೇಕ ಕಾಮಗಾರಿಗಳು ಈ ಐದು ವರ್ಷದಲ್ಲಿ ನನೆಗುದಿಗೆ ಬಿದ್ದಿವೆ. ಅವುಗಳ ಪೂರ್ಣ ಅನುಷ್ಠಾನ ಮಾಡುವೆ. ಜತೆಗೆ ನಾನು ನೀಡಿರುವಂತೆ ಎಲ್ಲ ಭರವಸೆಗಳನ್ನು ಈಡೇರಿಸುವ ಜತೆಗೆ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಅಭಿವೃದ್ಧಿಯನ್ನೇ ಮಾನದಂಡವನ್ನಾಗಿಸಿಕೊಂಡಿದ್ದೇನೆ ಅಂತ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ. 

click me!