Kodagu: ಮಗ್ಗುಲಲ್ಲೇ ಜಲಾಶಯವಿದ್ದರೂ ಬೇಸಿಗೆ ಬೆಳೆಗೆ ನೀರು ಹರಿಸದ ನೀರಾವರಿ ಇಲಾಖೆ

Published : Feb 14, 2025, 09:43 PM ISTUpdated : Feb 14, 2025, 09:44 PM IST
Kodagu: ಮಗ್ಗುಲಲ್ಲೇ ಜಲಾಶಯವಿದ್ದರೂ ಬೇಸಿಗೆ ಬೆಳೆಗೆ ನೀರು ಹರಿಸದ ನೀರಾವರಿ ಇಲಾಖೆ

ಸಾರಾಂಶ

ಎತ್ತೇಚ್ಛವಾಗಿ ಮಳೆ ಸುರಿಯುವ ಕೊಡಗು ಜಿಲ್ಲೆಯಲ್ಲಿ ಹಲವು ನದಿಗಳು ಹುಟ್ಟಿ ಬೇರೆ ಬೇರೆ ಜಿಲ್ಲೆಗಳಿಗೆ ಹರಿದು ಅವುಗಳನ್ನು ಸಮೃದ್ಧಿಗೊಳಿಸುತ್ತಿವೆ. ಆದರೆ ಅವುಗಳಿಂದ ಕೊಡಗು ಜಿಲ್ಲೆಗೆ ಆಗಿರುವ ಉಪಯೋಗ ಮಾತ್ರ ತೀರಾ ಕಡಿಮೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಫೆ.14): ಎತ್ತೇಚ್ಛವಾಗಿ ಮಳೆ ಸುರಿಯುವ ಕೊಡಗು ಜಿಲ್ಲೆಯಲ್ಲಿ ಹಲವು ನದಿಗಳು ಹುಟ್ಟಿ ಬೇರೆ ಬೇರೆ ಜಿಲ್ಲೆಗಳಿಗೆ ಹರಿದು ಅವುಗಳನ್ನು ಸಮೃದ್ಧಿಗೊಳಿಸುತ್ತಿವೆ. ಆದರೆ ಅವುಗಳಿಂದ ಕೊಡಗು ಜಿಲ್ಲೆಗೆ ಆಗಿರುವ ಉಪಯೋಗ ಮಾತ್ರ ತೀರಾ ಕಡಿಮೆ. ಹೀಗಾಗಿ ಹಾರಂಗಿ ಜಲಾಶಯದ ಎಡದಂಡೆ ನಾಲೆಯ ಮೂಲಕ ಹಾರಂಗಿಯಿಂದ ಕೊಡಗಿನ ಗಡಿಭಾಗ ಶಿರಂಗಾಲದವರೆಗೆ 1400 ಹೆಕ್ಟೇರ್ ಪ್ರದೇಶದ ಭೂಮಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಶಿರಂಗಾಲ ಸಮೀಪದ ನಲ್ಲೂರಿನಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಿ ಚೆಕ್ ಡ್ಯಾಂ ಕೂಡ ನಿರ್ಮಿಸಲಾಗಿದೆ. ಈ ಚೆಕ್ ಡ್ಯಾಮಿನಲ್ಲಿ ನೀರು ಸಂಗ್ರಹಿಸಿ ರೈತರ ಬೇಸಿಗೆ ಬೆಳೆಗೆ ನೀರು ಹರಿಸುವ ಕೆಲಸವನ್ನು ಮಾತ್ರ ನೀರಾವರಿ ಇಲಾಖೆ ಮಾಡುತ್ತಿಲ್ಲ. 

ನಿಯಮದಂತೆ ಕಟ್ಟುಪದ್ಧತಿಯಲ್ಲಿ ನೀರು ಕೊಡುತ್ತದೆ ಎಂದು ನಂಬಿಕೊಂಡಿರುವ ಸಾವಿರಾರು ರೈತರು ಜೋಳ, ಅಲಸಂದೆ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳ ಬಿತ್ತನೆ ಮಾಡಿ ನೀರಿಗಾಗಿ ಕಾಯುತ್ತಿದ್ದಾರೆ. ಆದರೆ ನೀರಾವರಿ ಇಲಾಖೆ ಕಾಲುವೆಗಳಲ್ಲಿ ನೀರು ಹಾಯಿಸದೇ ಇರುವುದರಿಂದ ರೈತರ ಬೆಳೆಗಳು ಸಂಪೂರ್ಣ ಒಣಗಿ ಹೋಗುತ್ತಿವೆ. ಇನ್ನೊಂದೆರೆಡು ವಾರಗಳಲ್ಲಿ ನೀರು ಹರಿಸದೇ ಇದ್ದಲ್ಲಿ, ಬೆಳೆಗಳು ಸಂಪೂರ್ಣ ಹಾಳಾಗಲಿವೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಹಾರಂಗಿ ಜಲಾಶಯದಲ್ಲಿ ಇಂದಿಗೂ ಉತ್ತಮ ನೀರಿನ ಸಂಗ್ರಹವಿದೆ. ಆದರೂ ನೀರಾವರಿ ಇಲಾಖೆಯಾಗಲಿ, ಕಾಡಾ ಸಂಸ್ಥೆಯಾಗಲಿ ಅಥವಾ ಜಿಲ್ಲೆಯ ಶಾಸಕರು, ಸಚಿವರಾಗಲಿ ಯಾವುದೇ ಗಮನ ಹರಿಸುತ್ತಿಲ್ಲ. 

ಜಲಾಶಯ ನಿರ್ಮಾಣವಾಗಿದ್ದು ಕೊಡಗು ಜಿಲ್ಲೆಯಿಂದ ಸಾವಿರಾರು ಕ್ಯೂಸೆಕ್ ನೀರನ್ನು ಮೈಸೂರು, ಮಂಡ್ಯ ಮತ್ತು ಬೆಂಗಳೂರು ಜೊತೆಗೆ ತಮಿಳುನಾಡಿಗೆ ಹರಿಸಲಾಗುತ್ತಿದೆ. ಕೊಡಗಿನಲ್ಲಿ ಅಷ್ಟೊಂದು ತೊಂದರೆಯಾಗಿ ಸಂಗ್ರಹವಾದರೂ ಅದು ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಗೆ ಮಾತ್ರ ಉಪಯೋಗವಾಗುತ್ತಿದೆ. ಆದರೆ ಕೊಡಗು ಜಿಲ್ಲೆಗೆ ಸಣ್ಣ ಉಪಯೋಗವೂ ಆಗುತ್ತಿಲ್ಲ ಎಂದು ನೀರು ಬಳಕೆದಾರರ ಸಂಘದ ಅಧ್ಯಕ್ಷ ಪಾಂಡುರಂಗ ಅಸಮಧಾನ ಹೊರಹಾಕಿದ್ದಾರೆ. ಕೊಡಗಿನ ರೈತರಿಗೆ ಅನುಕೂಲವಾಗಬೇಕು ಎನ್ನುವ ದೃಷ್ಟಿಯಿಂದಲೇ ನೀರು ಹಂಚಿಕೆ ನಿಯಮಗಳಲ್ಲಿ ತಿದ್ದುಪಡಿ ಮಾಡಿ ಹಾರಂಗಿಯಿಂದ ಕೊಡಗು ಜಿಲ್ಲೆಯ ಶಿರಂಗಾಲದವರೆಗೆ ಕಟ್ಟುಪದ್ಧತಿಯಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸಬೇಕೆಂಬ ನಿಯಮವಿದೆ. ಆದರೂ ಯಾರೊಬ್ಬರೂ ಗಮನಹರಿಸುತ್ತಿಲ್ಲ. ಇನ್ನಾದರೂ ಗಮನಹರಿಸಿ ಕಾಲುವೆಗಳಲ್ಲಿ ನೀರು ಹರಿಸಬೇಕು. 

ಕಟ್ಟೆಮಾಡು ಮಹಾಮೃತ್ಯುಂಜಯ ದೇವಾಲಯದ ಸಾಂಪ್ರದಾಯಿಕ ವಸ್ತ್ರ ನಿರ್ಬಂಧಕ್ಕೆ ಹೈಕೋರ್ಟ್ ತಡೆ

ಇಲ್ಲದಿದ್ದರೆ ನಾವು ತೀವ್ರ ಸ್ವರೂಪದ ಪ್ರತಿಭಟನೆ ಮಾಡುವುದು ಶತಸಿದ್ಧ ಎಂದು ರೈತ ಮುಖಂಡ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ. ಕಾಲುವೆಗಳಲ್ಲಿ ನೀರು ಹರಿಸಿದರೆ ನಮ್ಮ ಬೆಳೆಗಳಿಗೆ ಅಷ್ಟೇ ಅಲ್ಲ, ಜಾನುವಾರುಗಳಿಗೂ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಈಗಾಗಲೇ ಬೇಸಿಗೆ ಆರಂಭವಾಗುತ್ತಿದ್ದು ದನ, ಕರುಗಳಿಗೆ ಕುಡಿಯುವ ನೀರಿಗೂ ಆಹಾಕಾರ ಶುರುವಾಗಿದೆ. ಜೊತೆಗೆ ಕೊಳವೆ ಬಾವಿಗಳಲ್ಲಿ ಅಂತರ್ಜಲ ತಗ್ಗಿದೆ. ಆದ್ದರಿಂದ ಕಾಲುವೆಗಳಲ್ಲಿ ನೀರು ಹರಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ನೀರು ಹರಿಸದೇ ಇದ್ದರೆ ತೀವ್ರ ಹೋರಾಟವನ್ನು ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಪಂಚಾಯಿತಿ ವ್ಯಾಪ್ತಿಗಳ ನೀರು ಬಳಕೆದಾರರ ಸಂಘಗಳು ಆಗ್ರಹಿಸಿವೆ. ಒಟ್ಟಿನಲ್ಲಿ ದೀಪದ ಕೆಳಗೆ ಕತ್ತಲು ಎನ್ನುವ ಹಾಗೆ ಕೊಡಗಿನ ರೈತರ ಸ್ಥಿತಿ ಇದೆ.

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ