ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ಆರೋಪ| ನೇಮಕಾತಿ ನಿಯಮ ಉಲ್ಲಂಘಿಸಿದ ಆರ್‌ಸಿಯು| ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ಆರೋಪ|
ಬೆಳಗಾವಿ(ಅ.15): ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಂಘ, ಸಂಸ್ಥೆಗಳು ಹಾಗೂ ವಿಶ್ವ ವಿದ್ಯಾಲಯಗಳಿಗೆ ನಿಯಮ ಪಾಲನೆ ಕಡ್ಡಾಯ. ಆದರೆ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ನೇಮಕಾತಿಯಲ್ಲಿ ಯಾವುದೇ ನಿಯಮಗಳ ಪಾಲನೆ ಮಾಡದೇ ಬೇಕಾಬಿಟ್ಟಿ ನೇಮಕಾತಿ ಮಾಡಿಕೊಂಡಿರುವ ಆರೋಪದ ಜತೆಗೆ ಸರ್ಕಾರದ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡಿಲ್ಲದಂತಾಗಿದೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ 2014 ಅ.16ರಂದು ಉನ್ನತ ಶಿಕ್ಷಣ ಇಲಾಖೆ ಸರ್ಕಾರ ಪ್ರಧಾನ ಕಾರ್ಯದರ್ಶಿ ಅವರು ಅಧೀನ ಕಾರ್ಯದರ್ಶಿ ಸಂಧ್ಯಾ ಎಲ್.ನಾಯಕ್ ಅವರಿಂದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದಿದ್ದಾರೆ.
ಆದರೆ ನೇಮಕಾತಿಯಲ್ಲಿ ಅಷ್ಟೇ ಅಲ್ಲದೇ ತನಿಖಾ ತಂಡ ರಚಿಸುವಲ್ಲಿಯೂ ಸರ್ಕಾರದ ಕಣ್ಣಿಗೆ ಮಣ್ಣೆರಚುವ ಮೂಲಕ ಸರ್ಕಾರ ಹಾಗೂ ಯುಜಿಸಿ ನಿಯಮ ಗಾಳಿ ತೂರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ. ಆದ್ದರಿಂದ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಬೆಳಗಾವಿಯ ಸ್ವಾಮಿ ವಿವೇಕಾನಂದ (ಯುವ) ವಾಲಂಟರಿ ಆರ್ಗನೈಜೇಶನ್ ಅಧ್ಯಕ್ಷ ಪಿ.ಡಿ.ಕಾಕಟ್ಕರ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಧಾನ ಕಾರ್ಯದರ್ಶಿಗಳು ಆರ್‌ಸಿಯು ಕುಲಸಚಿವರಿಗೆ ಪತ್ರ ಬರೆದು ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ, ಒಂದು ವಾರದಲ್ಲಿ ತನಿಖಾ ವರದಿ ಸಲ್ಲಿಸುವಂತೆ ತಿಳಿಸಿದ್ದರು.
ಯಡಿಯೂರಪ್ಪ ಅಸಮರ್ಥ ಎಂಬ ಡಿಕೆಶಿ ಆರೋಪಕ್ಕೆ ಡಿಸಿಎಂ ಸವದಿ ಪ್ರತಿಕ್ರಿಯೆ
ಸರ್ಕಾರ ಪ್ರಧಾನ ಕಾರ್ಯದರ್ಶಿಯವರ ನಿರ್ದೇಶನದಂತೆ 2014 ನವೆಂಬರ್ 5ರಂದು ಆರ್‌ಸಿಯು ಕುಲಚಿವರು, ನಿವೃತ್ತ ನ್ಯಾಯಮೂರ್ತಿಗಳ ಬದಲಾಗಿ, ವಿವಿಯ ಹಣಕಾಸು ಅಧಿಕಾರಿ ಪ್ರೊ.ಎಚ್.ವೈ.ಕಾಂಬಳೆ ಅಧ್ಯಕ್ಷತೆಯಲ್ಲಿ ಪ್ರಾಧ್ಯಾಪಕರಾದ ಪ್ರೊ.ಟಿ.ವೆಂಕಟೇಶ ಹಾಗೂ ಪ್ರೊ ಜಿ.ಕೆ.ಬೂದೇಪ್ಪ ಅವರನ್ನೊಳಗೊಂಡ ಸಮಿತಿ ರಚಿಸುವ ಮೂಲಕ ಸರ್ಕಾರದ ಆದೇಶವನ್ನು ಕಡೆಗಣಿಸಿರುವುದು ಬೆಳಕಿಗೆ ಬಂದಿದೆ.
ಜತೆಗೆ ರಾಣಿ ಚನ್ನಮ್ಮ ವಿವಿಯಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿಯೂ ಯುಜಿಸಿ ನಿಯಮ ಗಾಳಿಗೆ ತೂರುವ ಮೂಲಕ ಸರ್ವಾಧಿಕಾರಿ ಧೊರಣೆ ಅನುಸರಿಸುತ್ತಿರುವ ಕುರಿತು ವಿಶ್ವ ವಿದ್ಯಾಲಯ ಸ್ಥಾಪನೆ ಆದಾಗಿನಿಂದಲೂ ಚರ್ಚೆ ನಡೆಯುತ್ತಿದೆ. ಅಲ್ಲದೇ ಸರ್ಕಾರದ ನಿರ್ದೇಶನದಂತೆ ತನಿಖೆ ನಡೆಸಿ ವರದಿ ಸಲ್ಲಿಸಲು ವಿಶ್ವವಿದ್ಯಾಲಯ ಹಿಂದೇಟು ಹಾಕುತ್ತಿರುವುದು ಹಲವು ಅನುಮಾನ ಹುಟ್ಟುಹಾಕಿದೆ.