ಐಪಿಎಸ್ ಅಧಿಕಾರಿಯ ಕೌಟುಂಬಿಕ ಕಲಹ ಬೀದಿಗೆ ಬಂದಿದೆ. ಐಎಫ್‌ಎಸ್ ಅಧಿಕಾರಿಯೂ ಆಗಿರುವ ತಮ್ಮ ಪತಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ದೂರು ನೀಡಿದ್ದಾರೆ.
ಬೆಂಗಳೂರು (ಫೆ.07): ರಾಜ್ಯದಲ್ಲಿ ಮತ್ತೊಬ್ಬ ಐಪಿಎಸ್ ಅಧಿಕಾರಿಯ ಕೌಟುಂಬಿಕ ಕಲಹ ಬೀದಿಗೆ ಬಂದಿದೆ. ಐಎಫ್‌ಎಸ್ (ವಿದೇಶಾಂಗ) ಅಧಿಕಾರಿಯೂ ಆಗಿರುವ ತಮ್ಮ ಪತಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ಕಬ್ಬನ್ ಪಾರ್ಕ್ ಠಾಣೆಗೆ ರಾಜ್ಯ ಅಪರಾಧ ದಾಖಲಾತಿ ವಿಭಾಗದ (ಎಸ್‌ಸಿಆರ್‌ಬಿ) ಎಸ್ಪಿ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ.
ಈ ದೂರು ಆಧರಿಸಿ ವರ್ತಿಕಾ ಪತಿ, ವಿದೇಶಾಂಗ ಇಲಾಖೆ ಅಧಿಕಾರಿ ನಿತೀನ್ ಸುಭಾಷ್, ಮಾವ ಸುಭಾಷ್ ಯೆಯೊಲಾ, ಅತ್ತೆ ಅಮೋಲ್ ಯೆಯೊಲಾ, ಸಂಬಂಧಿಗಳಾದ ಸುನೀತಾ ಯೆಯೊಲಾ, ಸಚಿನ್ ಯೆಯೊಲಾ, ಪ್ರಜಾಕ್‌್ತ ಯೆಯೊಲಾ, ಪ್ರಡ್ಯಾ ಯೆಯೊಲಾ ಹಾಗೂ ಇತರೆ ಏಳು ಮಂದಿ ವಿರುದ್ಧ ವರದಕ್ಷಿಣೆ ನಿರ್ಬಂಧ ಕಾಯ್ದೆ, ವರದಕ್ಷಿಣೆ ಕಿರುಕುಳ, ಹಲ್ಲೆ, ಜೀವ ಬೆದರಿಕೆ ಹಾಗೂ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಫೆ.1ರಂದು ವರ್ತಿಕಾ ದೂರು ನೀಡಿದ್ದಾರೆ.
undefined
ಹುಬ್ಬಳ್ಳಿ: ಆಸ್ಟ್ರೇಲಿಯಾ ಮಹಿಳೆ ಪರದಾಟ, ಸ್ವದೇಶಕ್ಕೆ ಕಳುಹಿಸಿ ಮಾನವೀಯತೆ ಮೆರೆದ SP ಕಟಿಯಾರ್ ...
2009ನೇ ಸಾಲಿನ ಮಹಾರಾಷ್ಟ್ರ ಮೂಲದ ಐಎಫ್‌ಎಸ್ ಅಧಿಕಾರಿ ನಿತೀನ್ ಹಾಗೂ 2010ನೇ ಸಾಲಿನ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರು 2011ರಲ್ಲಿ ವಿವಾಹವಾಗಿದ್ದರು. ದೆಹಲಿಯಲ್ಲಿ ವಿದೇಶಾಂಗ ಸಚಿವಾಲಯದಲ್ಲಿ ನಿತೀನ್ ಸೇವೆ ಸಲ್ಲಿಸುತ್ತಿದ್ದಾರೆ. ಕೊಡಗು, ಧಾರವಾಡ ಹಾಗೂ ಹುಬ್ಬಳ್ಳಿಯ ಎಸ್ಪಿ ಆಗಿದ್ದ ವರ್ತಿಕಾ ಅವರು, ಪ್ರಸ್ತುತ ರಾಜ್ಯ ಅಪರಾಧ ದತ್ತಾಂಶ ವಿಭಾಗ (ಎಸ್‌ಸಿಆರ್‌ಬಿ)ಯಲ್ಲಿ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಕೌಟುಂಬಿಕ ಸಮಸ್ಯೆ ಸಂಬಂಧ ಐಪಿಎಸ್ ದಂಪತಿಯೊಂದು ಹೈಗ್ರೌಂಡ್ಸ್ ಠಾಣೆ ಮೆಟ್ಟಿಲೇರಿತ್ತು. ಕೊನೆಗೆ ರಾಜಿ ಸಂಧಾನ ನಡೆದು ಪರಿಸ್ಥಿತಿ ಕೊನೆಗೊಂಡಿತ್ತು.
ಎಫ್‌ಐಆರ್‌ನಲ್ಲೇನಿದೆ?: ‘2011ರಲ್ಲಿ ನನ್ನ ಪೋಷಕರು ನಿತೀನ್ ಹಾಗೂ ಅವರ ಕುಟುಂಬದ ಇಚ್ಛೆಯಂತೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆ ಸಂದರ್ಭದಲ್ಲಿ ನಮ್ಮ ಪೋಷಕರಿಂದ ನಿತೀನ್ ಕುಟುಂಬದವರು ಬಲವಂತವಾಗಿ ಹಣ ಹಾಗೂ ಒಡವೆ ಪಡೆದಿದ್ದರು. ಮದುವೆ ನಂತರ ಸಣ್ಣಪುಟ್ಟವಿಚಾರಗಳನ್ನು ಮುಂದಿಟ್ಟು ನನ್ನನ್ನು ಕೆಟ್ಟಭಾಷೆಯಲ್ಲಿ ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ದೈಹಿಕ ಹಿಂಸೆ ಸಹ ಆಗಿದೆ. ವಿವಾಹವಾದ ಮೂರು ತಿಂಗಳಿನಲ್ಲೇ ಮತ್ತೆ ಹಣಕ್ಕಾಗಿ ನಿತೀನ್ ಕುಟುಂಬ ಕಾಡಲಾರಂಭಿಸಿತು. ಇದಾದ ಬಳಿಕ ಹಣಕ್ಕಾಗಿ ಹಲವು ಬಾರಿ ಗಲಾಟೆ ಮಾಡಿತು. ಪತಿ ಕೇಳಿದಾಗಲೆಲ್ಲ ನಾನೇ ಹಣ ಕೊಟ್ಟಿದ್ದೇನೆ. ಒಂದು ಹಂತದಲ್ಲಿ ವೈವಾಹಿಕ ಸಂಬಂಧ ಮುರಿದುಕೊಳ್ಳುವ ಬೆದರಿಕೆ ಸಹ ಹಾಕಿದ್ದರು. ಹೀಗಿರುವಾಗ 2012ರಲ್ಲಿ ಉತ್ತರಪ್ರದೇಶದಲ್ಲಿರುವ ನನ್ನ ಅಜ್ಜಿ ಮನೆಗೆ ಹೋಗಿ ನಿತೀನ್ ಒತ್ತಾಯಪೂರ್ವಕವಾಗಿ .5 ಲಕ್ಷ ಪಡೆದಿದ್ದರು. ಈ ವಿಚಾರಕ್ಕೆ ನಾನು ವಿರೋಧ ವ್ಯಕ್ತಪಡಿಸಿದೆ. ಕೊನೆಗೆ ನಾನು ದುಡ್ಡು ಕೊಡುತ್ತೇನೆ, ನನ್ನ ಅಜ್ಜಿಯ ಹಣ ಮರಳಿಸಿ ಎಂದು ಹೇಳಿದೆ. ಅದರಂತೆ ಆತ ನಮ್ಮಜ್ಜಿಗೆ ಐದು ಲಕ್ಷ ರು. ಚೆಕ್ ನೀಡಿದ್ದರು. ಆದರೆ, ನಿತೀಶ್ ಕೊಟ್ಟಿದ್ದ 5 ಲಕ್ಷ ರು. ಚೆಕ್ ಬೌನ್ಸ್ ಆಗಿತ್ತು’ ಎಂದು ದೂರಿದ್ದಾರೆ.
‘ಪತಿ ನಿತೀನ್ ವಿಪರೀತ ಧೂಮಪಾನಿ ಹಾಗೂ ಮದ್ಯ ವ್ಯಸನಿ. ಇದಕ್ಕೆ ಆಕ್ಷೇಪಿಸಿದ್ದಕ್ಕೆ ನನ್ನ ಮೇಲೆ ಅವರು ಹಲ್ಲೆ ನಡೆಸಿದ್ದರು. 2016ರಲ್ಲಿ ಕೊಲಂಬೋಗೆ ತೆರಳಿದ್ದಾಗ ನನಗೆ ಹೊಡೆದು ಕೈ ಮುರಿದಿದ್ದರು. 2018ರ ದೀಪಾವಳಿ ಹಬ್ಬಕ್ಕೆ ನನ್ನ ತಂದೆಯ ಕುಟುಂಬದವರು ಉಡುಗೊರೆ ಕಳುಹಿಸಲಿಲ್ಲ ಎಂದು ಪತಿಯ ಕುಟುಂಬಸ್ಥರು ಜಗಳ ಮಾಡಿ ವಿಚ್ಛೇದನ ಕೊಡಿಸುವುದಾಗಿ ಬೆದರಿಸಿದ್ದರು. ಕೆಲ ತಿಂಗಳಿಂದ ಮನೆ ಖರೀದಿಸಲು 35 ಲಕ್ಷ ಹಣ ಕೊಡುವಂತೆ ಪತಿ ಹಾಗೂ ಮಾವನ ಮನೆಯವರು ಪೀಡಿಸಲಾರಂಭಿಸಿದ್ದರು. ಇದರಿಂದ ನನಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆಯಾಗಿದೆ. ಹೀಗಾಗಿ ಪತಿ ಹಾಗೂ ಅವರ ಕುಟುಂಬದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ವರ್ತಿಕಾ ಕಟಿಯಾರ್ ದೂರಿನಲ್ಲಿ ತಿಳಿಸಿದ್ದಾರೆ.
ನಿತೀಶ್ ಕುಟುಂಬದವರು ದೆಹಲಿಯಲ್ಲಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ದೆಹಲಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ.