ಅಕ್ರಮ ಭೂ ಮಂಜೂರಾತಿ ಹಗರಣ: ಬಗೆದಷ್ಟು ಅಕ್ರಮಗಳು ಬಯಲು, ತನಿಖಾ ತಂಡಕ್ಕೆ ಶಾಕ್ ..!

By Girish Goudar  |  First Published Sep 9, 2023, 8:11 PM IST

ಕಳೆದ 5 ವರ್ಷಗಳ ಅವಧಿಯ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿದ್ದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜೇಂದ್ರ ಕುಮಾರ್ ಕಠಾರಿಯಾ ತನಿಖೆಯ ಸಮಗ್ರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಕಳೆದ 15 ದಿನಗಳಿಂದ ತಂಡ ನಿರಂತರ ತನಿಖೆ ನಡೆಸಿ ಕಡತಗಳನ್ನು ಜಾಲಾಡಿಸಿದ್ದು, ಬಗೆದಷ್ಟು ಅಕ್ರಮಗಳು ಬಯಲಾಗುತ್ತಲೇ ಹೋಗುತ್ತಿದ್ದು ತನಿಖಾ ತಂಡಕ್ಕೆ ಶಾಕ್ ಆಗಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಸೆ.09):  ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣದ ತನಿಖೆ ಇನ್ನೆರಡು ದಿನದಲ್ಲಿ ಮುಗಿಯುವ ಸಾಧ್ಯತೆ ಇದೆ. 15 ತಹಸಿಲ್ದಾರ್ ನೇತೃತ್ವದ ತನಿಖಾ ತಂಡ ಮೂಡಿಗೆರೆ ತಾಲೂಕಿನಲ್ಲಿ 2000 ಹಾಗೂ ಕಡೂರು ತಾಲೂಕಿನಲ್ಲಿ 2240 ಕಡತಗಳನ್ನು ಪರಿಶೀಲಿಸಿದೆ. ಮೂಡಿಗೆರೆಯಲ್ಲಿ 1320 ಪ್ರಕರಣಗಳಲ್ಲಿ 3700 ಎಕರೆ ಹಾಗೂ ಕಡೂರು ತಾಲೂಕಿನಲ್ಲಿ1030 ಪ್ರಕರಣಗಳಲ್ಲಿ 2500 ಎಕರೆ ಜಮೀನು ನೀತಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮಂಜೂರು ಮಾಡಿರುವುದು ಪತ್ತೆಯಾಗಿದೆ.

Tap to resize

Latest Videos

undefined

ಭೂಮಾಫಿಯಾದ ಇನ್ನೊಂದು ಮುಖ ಅನಾವರಣ : 

ಕಳೆದ 5 ವರ್ಷಗಳ ಅವಧಿಯ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿದ್ದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜೇಂದ್ರ ಕುಮಾರ್ ಕಠಾರಿಯಾ ತನಿಖೆಯ ಸಮಗ್ರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಕಳೆದ 15 ದಿನಗಳಿಂದ ತಂಡ ನಿರಂತರ ತನಿಖೆ ನಡೆಸಿ ಕಡತಗಳನ್ನು ಜಾಲಾಡಿಸಿದ್ದು, ಬಗೆದಷ್ಟು ಅಕ್ರಮಗಳು ಬಯಲಾಗುತ್ತಲೇ ಹೋಗುತ್ತಿದ್ದು ತನಿಖಾ ತಂಡಕ್ಕೆ ಶಾಕ್ ಆಗಿದೆ. ತನಿಖೆ ಬಹುತೇಕ ಅಂತಿಮ ಘಟ್ಟ ತಲುಪಿದ್ದು, ಕಡತಗಳನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿ ಇಟ್ಟು ಬೀಗ ಹಾಕಲಾಗುತ್ತಿದೆ.  ಈ ಪೆಟ್ಟಿಗೆಗಳು ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಬೆಂಗಳೂರಿಗೆ ರವಾನೆ ಆಗಲಿವೆ.

ಕಾಂಗ್ರೆಸ್ಸಿಗೆ ಭಾರತ ಅಂದ್ರೆ ಅಸಹನೆ: ಸಿ.ಟಿ.ರವಿ

ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು, ತಹಸಿಲ್ದಾರರು, ಬೆರಳಚ್ಚುಗಾರರು ಹೀಗೆ ಕಂದಾಯ ಇಲಾಖೆಯಲ್ಲಿ ಬೀಡು ಬಿಟ್ಟಿದ್ದ ಭೂ ಮಾಫಿಯಾದ ಇನ್ನೊಂದು ಮುಖ ತನಿಖೆಯಿಂದ ಅನಾವರಣಗೊಂಡಿದೆ.

ಮಂಜೂರು ಮಾಡಿ ಕೊಟ್ಟವರಿಗೆ ನಡುಕ : 

ಲಕ್ಷ ಲಕ್ಷ ಕೊಟ್ಟು ಭೂಮಿ ಖರೀದಿ ಮಾಡಿದವರಿಗೆ, ಲಕ್ಷ ಲಕ್ಷ ಪಡೆದು ಅಕ್ರಮವಾಗಿ ಭೂಮಿ ಮಂಜೂರು ಮಾಡಿಕೊಟ್ಟವರಿಗೆ ಸಹಜವಾಗಿಯೇ ನಡುಕ ಆರಂಭಗೊಂಡಿದೆ. ಈ ನಡುವೆ ಬಲಾಢ್ಯ ಭೂಗಳ್ಳರು ತನಿಖೆಯ ದಿಕ್ಕನ್ನು ತಪ್ಪಿಸಲು ಯತ್ನಿಸಿರುವುದರ ಜೊತೆಗೆ ವಿವಿಧ ವಲಯಗಳಿಂದ ರಾಜಕೀಯ ಪ್ರಭಾವವನ್ನು ಬೀರುತ್ತಿರುವುದು ಸುಳ್ಳಲ್ಲ.

ಯಾವುದೇ ರೀತಿಯ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಕಠಾರಿಯ ಈಗಾಗಲೇ ಸ್ಪಷ್ಟಪಡಿಸಿದ್ದರೂ ಸರ್ಕಾರದ ಮುಂದಿನ ನಿರ್ಧಾರದ ಬಗ್ಗೆ ಸಂಶಯಗಳು ವ್ಯಕ್ತವಾಗುತ್ತಿವೆ. ಇಷ್ಟೆಲ್ಲಾ ಶ್ರಮಪಟ್ಟು ತನಿಖೆ ನಡೆಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎನ್ನುವುದು ತನಿಖಾ ತಂಡದ ಅಭಿಪ್ರಾಯವೂ ಆಗಿದೆ. ಆದರೆ ಈ ಹಿಂದೆ ನಡೆದ ಅನೇಕ ಹಗರಣಗಳ ಫಲಿತಾಂಶ ನೋಡಿದಾಗ, ಈ ಹಗರಣವೂ ಅದೇ ಹಾದಿಯಲ್ಲಿ ಎಲ್ಲಿ ಹಳ್ಳ ಹಿಡಿಯುತ್ತದೆಯೋ ಎನ್ನುವ ಸಂಶಯ -ಆತಂಕವು ವ್ಯಕ್ತವಾಗುತ್ತಿದೆ.ಭೂ ಹಗರಣದ ತನಿಖೆಗೆ ಸಂಬಂಧಿಸಿದಂತೆ  ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ರೈತ ಸಂಘ ಹಾಗೂ ಇತರ ಕೆಲವು ಸಂಘಟನೆಗಳು ಒತ್ತಾಯಿಸಿವೆ.

click me!