ಬೆಂಗಳೂರು: ಬಿಜೆಪಿ ಸರ್ಕಾರದ ಬಿಬಿಎಂಪಿ ಕಾಮಗಾರಿಗಳ ‘ಪರೀಕ್ಷೆ’!

Published : Jul 25, 2023, 06:19 AM IST
ಬೆಂಗಳೂರು: ಬಿಜೆಪಿ ಸರ್ಕಾರದ ಬಿಬಿಎಂಪಿ ಕಾಮಗಾರಿಗಳ ‘ಪರೀಕ್ಷೆ’!

ಸಾರಾಂಶ

ಪ್ರಿಯಕೃಷ್ಣ ಪತ್ರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಿಲ್‌ ಪಾವತಿಗೂ ಮುನ್ನ ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ನಡೆಸುವಂತೆ ಬಿಬಿಎಂಪಿ ತನಿಖಾ ವಿಭಾಗ ಟಿವಿಸಿಸಿಗೆ ಸೂಚಿಸಿದ್ದಾರೆ. 

ಗಿರೀಶ್‌ ಗರಗ

ಬೆಂಗಳೂರು(ಜು.25):  ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳಿಗೆ ಇಲಾಖಾವಾರು ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಅದರ ಜತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರವಾರು ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ಅಂದರೆ 2019-20ರಿಂದ 2022-23ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ತನಿಖೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮನಸ್ಸು ಮಾಡಿದ್ದರು. ಅದಕ್ಕಾಗಿ ಘನತ್ಯಾಜ್ಯ ನಿರ್ವಹಣೆ ಕಾಮಗಾರಿ, ರಸ್ತೆ ಅಭಿವೃದ್ಧಿ ಕಾಮಗಾರಿ, ಬೃಹತ್‌ ನೀರುಗಾಲುವೆ ಕಾಮಗಾರಿ, ಕೆರೆ ಅಭಿವೃದ್ಧಿ ಕಾಮಗಾರಿ, ಒಎಫ್‌ಸಿ ಅಳವಡಿಕೆ ಅನುಮತಿ, ವಾರ್ಡ್‌ ಮಟ್ಟದ ಕಾಮಗಾರಿಗಳಿಗೆ ಐಎಎಸ್‌ ಅಧಿಕಾರಿಗಳ ತಂಡ ರಚಿಸಿ ಪ್ರತ್ಯೇಕ ತನಿಖೆ ನಡೆಸಲು ಮುಂದಾಗಿದ್ದರು. ಆದರೆ, ಆ ವಿಚಾರ ಚರ್ಚೆಗೆ ಬಂದು ಹಾಗೆಯೇ ನಿಲ್ಲಿಸಲಾಗಿತ್ತು. ಇದೀಗ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಗುಣಮಟ್ಟಪರೀಕ್ಷೆಗೆ ಒಳಪಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಆ ಮೂಲಕ ಕಾಮಗಾರಿ ಅನುಷ್ಠಾನದಲ್ಲಿ ಅಕ್ರಮ ನಡೆದಿದೆಯೇ ಎಂಬುದನ್ನು ಪತ್ತೆ ಹಚ್ಚಲು ನಿರ್ಧರಿಸಲಾಗಿದೆ. 

ಬೆಂಗಳೂರು ಅಭಿವೃದ್ಧಿಗೆ ವರ್ಲ್ಡ್ ಡಿಸೈನ್ ಪ್ರೊಟೊಪೊಲಿಸ್ ಒಪ್ಪಂದಕ್ಕೆ ಡಿಸಿಎಂ ಸಹಿ: ಏನಿದರ ವಿಶೇಷ..

ಗೋವಿಂದರಾಜನಗರದ ಕಾಮಗಾರಿ ಪರಿಶೀಲನೆ

ಕಳೆದ ಅವಧಿಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿ.ಸೋಮಣ್ಣ ಶಾಸಕರಾಗಿದ್ದರು. ಈ ಬಾರಿ ಕಾಂಗ್ರೆಸ್‌ನ ಪ್ರಿಯಕೃಷ್ಣ ಆಯ್ಕೆಯಾಗಿದ್ದಾರೆ. ಹೀಗಾಗಿ ಪ್ರಿಯಕೃಷ್ಣ ಅವರಿಗೆ ಕಳೆದ 5 ವರ್ಷಗಳಲ್ಲಿ ಗೋವಿಂದರಾಜನಗರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಕಳಪೆ ಕಾಮಗಾರಿ ಮಾಡಿದ್ದು, ಕಾಮಗಾರಿಗಳ ಬಿಲ್ಲುಗಳನ್ನು ತಯಾರಿಸಿ ಹಣ ಪಾವತಿಗೆ ಬಿಬಿಎಂಪಿಗೆ ಸಲ್ಲಿಸಲಾಗಿದೆ. ಹೀಗಾಗಿ ಎಲ್ಲ ಕಾಮಗಾರಿಗಳ ಗುಣಮಟ್ಟಪರೀಕ್ಷೆ ನಡೆಸಬೇಕು. ಅಲ್ಲಿಯವರೆಗೆ ಯಾವುದೇ ಕಾಮಗಾರಿಯ ಬಿಲ್‌ ಪಾವತಿಸಬಾರದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್‌ ಅವರಿಗೆ ಪತ್ರ ಬರೆದಿದ್ದರು.

12 ಕಿ.ಮೀ. ಕೆಂಪೇಗೌಡ ಪಾರಂಪರಿಕ ಕಾರಿಡಾರ್‌; ಡಿಪಿಆರ್ ಸಿದ್ಧಪಡಿಸಲು ಸೂಚನೆ

245 ಕಾಮಗಾರಿ ಪರಿಶೀಲನೆ

ಪ್ರಿಯಕೃಷ್ಣ ಪತ್ರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಿಲ್‌ ಪಾವತಿಗೂ ಮುನ್ನ ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ನಡೆಸುವಂತೆ ಬಿಬಿಎಂಪಿ ತನಿಖಾ ವಿಭಾಗ ಟಿವಿಸಿಸಿಗೆ ಸೂಚಿಸಿದ್ದಾರೆ. ಅದರಂತೆ ಟಿವಿಸಿಸಿ ವಿಭಾಗವು 245 ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವುಗಳ ಸಂಪುರ್ಣ ಕಡತವನ್ನು ನೀಡುವಂತೆ ಪಶ್ಚಿಮ ವಲಯದ ಯೋಜನಾ ವಿಭಾಗದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದೆ. ಕಾಮಗಾರಿಯ ಮೂಲ ಕಡತ, ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಬಿಆರ್‌ ವಹಿ, ಕಾಮಗಾರಿಗಳ ಅಂದಾಜು ಪಟ್ಟಿ, ಅಳತೆ ಪುಸ್ತಕ ಸೇರಿ ಇನ್ನಿತರ ದಾಖಲೆಗಳನ್ನು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಟಿವಿಸಿಸಿ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಪರೀಕ್ಷೆ ನಂತರವೇ ಬಿಲ್‌ ಪಾವತಿ

ಶಾಸಕ ಪ್ರಿಯಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ ಕಾಮಗಾರಿಗಳ ಪೈಕಿ ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿಗಳಿಗೆ ಸಲ್ಲಿಕೆಯಾಗಿರುವ ಬಿಲ್‌ಗಳ ಪಾವತಿಗೆ ಸದ್ಯ ತಡೆ ನೀಡಲಾಗಿದೆ. ಎಲ್ಲ ಬಿಲ್‌ಗಳನ್ನು ಮರುಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಪ್ರಮುಖವಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಮೈದಾನ ನವೀಕರಣ ಕಾಮಗಾರಿ, ಹೈಟೆಕ್‌ ಆಸ್ಪತ್ರೆ ನಿರ್ಮಾಣ ಕಾಮಗಾರಿ ಬಿಲ್‌ ಸೇರಿದಂತೆ ಬಹುತೇಕ ಕಾಮಗಾರಿಗಳ ಬಿಲ್‌ಗಳನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ದೊಡ್ಡ ಕಾಮಗಾರಿಗಳಿಂದ ಸಣ್ಣ ಕಾಮಗಾರಿಗಳ ಗುಣಮಟ್ಟವನ್ನೂ ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ಸಫಲವಾದ ನಂತರವಷ್ಟೇ ಬಿಲ್‌ ಪಾವತಿಸಲು ಮುಖ್ಯ ಆಯುಕ್ತರು ಬಿಬಿಎಂಪಿ ಹಣಕಾಸು ವಿಭಾಗಕ್ಕೆ ಸೂಚಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!