ಭಯ ಹುಟ್ಟಿಸುವುದೇ ನಿಜವಾದ ಭಯೋತ್ಪಾದನೆ: ಪೇಜಾವರ ಶ್ರೀ

By Kannadaprabha News  |  First Published Jan 5, 2024, 10:45 PM IST

ಗೋಧ್ರಾ ಮಾದರಿಯ ಗಲಾಟೆ ಸೃಷ್ಟಿಸುವ ಹುನ್ನಾರವಿದೆ ಎನ್ನುವ ಮಾಜಿ ಕೇಂದ್ರ ಸಚಿವ ಬಿ.ಕೆ. ಹರಿಪ್ರಸಾದ ಹೇಳಿಕೆಯೇ ಭಯ ಹುಟ್ಟಿಸುವಂತಹದು. ಹೀಗೆ ಮಾತನಾಡುವುದು ಸಾಧುವಲ್ಲ. ಇವರ ಬಳಿ ಮಾಹಿತಿ ಇದ್ದರೆ ತನಿಖಾ ಸಂಸ್ಥೆಗಳಿಗೆ ನೀಡಬೇಕು. ಅದು ಬಿಟ್ಟು ಹೀಗೆ ಭಯ ಹುಟ್ಟಿಸುವ ಮಾತನಾಡಬಾರದು. ಹೀಗೆ ಮಾಡುವುದೇ ನಿಜವಾದ ಭಯೋತ್ಪಾದನೆ ಎಂದು ವಾಗ್ದಾಳಿ ನಡೆಸಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮೀಜಿ


ವಿಜಯಪುರ(ಜ.05):  ಕೆಲವು ಯುವಕರು ರಾಮ ಮಂದಿರ ಕೆಡುವುದಾಗಿ ಹೇಳಿಕೆ ನೀಡಿದ್ದಾರೆ, ತಪ್ಪು ದಾರಿ ತುಳಿಯುತ್ತಿರುವ ಇಂತಹವರಿಗೆ ಬುದ್ಧಿವಾದ ಹೇಳಬೇಕು ಎಂದು ಪೇಜಾವರ ಅಧೋಕ್ಷ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮೀಜಿ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಬದಲಾದ ನಂತರ ರಾಮಮಂದಿರ ಕೆಡವುತ್ತೇವೆ ಎಂದು ಕೆಲವು ಯುವಕರು ಹೇಳಿಕೆ ಹರಿಬಿಟ್ಟಿದ್ದಾರೆ. ಹೀಗಾಗಿ ದಾರಿ ತಪ್ಪಿದ ಯುವಕರಿಗೆ ಆಯಾ ಸಮಾಜದ ಹಿರಿಯರು ಬುದ್ಧಿವಾದ ಹೇಳಬೇಕು. ರಾಮಮಂದಿರ ನಿರ್ಮಾಣ ವಿಷಯ ಸಂಘರ್ಷಕ್ಕೆ ಯಾವುದೇ ಕಾರಣವಿಲ್ಲ. ಹಿಂದುಗಳು ಸಂವಿಧಾನಕ್ಕೆ ಬದ್ಧರಾಗಿ ನಡೆಸಿದ ಹೋರಾಟ, ಸುಪ್ರೀಂಕೋರ್ಟ್ ತೀರ್ಪಿನ ಫಲವಾಗಿ ಮಂದಿರ ನಿರ್ಮಾಣವಾಗುತ್ತಿದೆ. ಇದಕ್ಕೆ ವಿರೋಧ ಇದೆ ಎಂದು ನನಗೆ ತೋರಿಲ್ಲ ಎಂದರು.

Tap to resize

Latest Videos

ರೌಡಿಶೀಟರ್ ಪರ ಬಿಜೆಪಿ ಹೋರಾಡುತ್ತಿರುವುದು ನಾಚಿಕೆಗೇಡು : ಸಚಿವ ಎಂ.ಬಿ.ಪಾಟೀಲ್‌

ಮಕ್ಕಳ ಬಾಯಿಂದ ಕೆಡವುವ ಮಾತು ಬರಬಾರದು, ಆ ಸಮಾಜದ ಹಿರಿಯರು ಬುದ್ಧಿವಾದ ಹೇಳಬೇಕು. ತಿಳಿಹೇಳುವ ಕೆಲಸ ನಡೆಯಬೇಕು. ಎಲ್ಲರೂ ಏಕತೆ,ಏಕಭಾವದಿಂದ ಇರಬೇಕು. ನಾವು ಹಿಂದುಗಳು. ಹಿಂದು ದೇಶ ಎಂದು ಹೇಳಿಕೊಳ್ಳಲು ಸಂಕೋಚವೇಕೆ ಎಂದು ಪ್ರಶ್ನಿಸಿದ ಅವರು, ಹಿಂದು ರಾಷ್ಟ್ರದಲ್ಲಿ ಎಲ್ಲರೂ ಇದ್ದಾರೆ, ಎಲ್ಲರಿಗೂ ಆಶ್ರಯ ನೀಡಲಾಗಿದೆ. ಸರ್ವೇ ಜನ ಸುಖಿನೋ ಭವಂತು ಎನ್ನುವ ದೇಶ ನಮ್ಮದು ಎಂದು ಹೇಳಿದರು.

ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ವಿದೇಶಿಗರು ಸಹ ದೇಣಿಗೆ ನೀಡಿದ್ದಾರೆ, ಎಲ್ಲರೂ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಂದಿರ ಪರಿಸರ ಇಕ್ಕಟ್ಟಾದ ಕಾರಣ ಎಲ್ಲರೂ ಭಾಗವಹಿಸಲು ಸಾಧ್ಯವಿಲ್ಲ. ಹೀಗಾಗಿ ಸೀಮಿತವಾಗಿ ಧಾರ್ಮಿಕ ನೆಲೆಯಲ್ಲಿ ಮಾತ್ರ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ತಮಗೆ ಕರೆದಿಲ್ಲ ಎಂದು ಹೇಳಿದ್ದಕ್ಕೆ ಹೀಗೆ ಪ್ರತಿಕ್ರಿಯಿಸಿದ ಶ್ರೀಗಳು, ಭಕ್ತರು ತಮ್ಮ ಗ್ರಾಮ ಮಂದಿರದಲ್ಲಿ ಬೃಹತ್ ಎಲ್ ಇಡಿ ಪರದೆಯಲ್ಲಿ ಮಂದಿರ ಲೋಕಾರ್ಪಣೆ ಕ್ಷಣ ಕಣ್ತುಂಬಿಕೊಳ್ಳಬೇಕು. ಈ ವೇಳೆ ಪೂಜೆ, ಪಾರಾಯಣ, ಯಜ್ಞ, ಪ್ರಸಾದ ವಿತರಣೆ ಎಲ್ಲೆಡೆ ನಡೆಯಬೇಕು. ಆ ಮೂಲಕ ಮಂದಿರ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಮುರುಳಿ ಮನೋಹರ ಜೋಶಿ ಅವರಿಗೆ ಆಹ್ವಾನ ಹೋಗಿದೆ ಎಂದರು.

ರಾಮಮಂದಿರ ಉದ್ಘಾಟನೆಗೆ ನಮಗೆ ಆಹ್ವಾನ ಇಲ್ಲ ಎಂಬ ವಿರೋಧ ಪಕ್ಷಗಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಸಿ, ಯಾರಿಗೂ ತೊಂದರೆಯಾಗಬಾರದು ಎಂಬ ಕಳಕಳಿಯಿಂದ ಸೀಮಿತವಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ. ಇಂಥ ನಡವಳಿಕೆ ಸರಿಯಲ್ಲ. ರಾಮ ರಾಜಕೀಯ ವಸ್ತುವಲ್ಲ, ಶ್ರೀರಾಮ ಮಂದಿರ ವ್ಯಾಜ್ಯ ಜನ್ಮತಾಳಿದ್ದು 500 ವರ್ಷಗಳ ಹಿಂದೆ. ಸ್ವಾತಂತ್ರ‍್ಯ ಬಂದು 75 ವರ್ಷಗಳಾಯಿತು. ದೇಶದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಸರ್ಕಾರ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.

ಅಡ್ಡಗಾಲು ಹಾಕುತ್ತಾರೆ:

ಶ್ರೀರಾಮ ಮಂದಿರ ನಿರ್ಮಿಸಿ ಎಂದು ಅವರ ಬಳಿ ಹಲವಾರು ಬಾರಿ ಕೇಳಲಾಗಿತ್ತು. ನೀವು ಮಾಡಲಿಲ್ಲ, ಯಾರಾದರೂ ಮಾಡಿದರೆ ಅದಕ್ಕೂ ಅಡ್ಡಗಾಲು ಹಾಕುತ್ತಾರೆ. ವಿವಾದಿತ ಸ್ಥಳದಲ್ಲಿ ಶ್ರೀರಾಮನ ಪೂಜೆಗೆ ಅವಕಾಶ ಕೊಟ್ಟಿದ್ದೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂಬ ಕಾಂಗ್ರೆಸ್ಸಿಗರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದರಿಂದ ಏನು ಇವಾಗ ಎಂದ ಶ್ರೀಗಳು ರಾಮ ರಾಜ್ಯ ಮಾಡದೆ ಇರೋ ಅಪವಾದವನ್ನು ಅವರು ಹಂಚಿಕೊಳ್ಳಲು ತಯಾರಿದ್ದಾರಾ ಎಂದು ಪ್ರಶ್ನಿಸಿದರು. ಲಾಭ ಇದ್ದರೆ ನಮಗೆ, ತಪ್ಪುಗಳಿದ್ದರೆ ಅವರಿಗೆ ಮಾತ್ರ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಾತನಾಡುವುದೇ ಭಯೋತ್ಪಾದನೆ:

ಗೋಧ್ರಾ ಮಾದರಿಯ ಗಲಾಟೆ ಸೃಷ್ಟಿಸುವ ಹುನ್ನಾರವಿದೆ ಎನ್ನುವ ಮಾಜಿ ಕೇಂದ್ರ ಸಚಿವ ಬಿ.ಕೆ. ಹರಿಪ್ರಸಾದ ಹೇಳಿಕೆಯೇ ಭಯ ಹುಟ್ಟಿಸುವಂತಹದು. ಹೀಗೆ ಮಾತನಾಡುವುದು ಸಾಧುವಲ್ಲ. ಇವರ ಬಳಿ ಮಾಹಿತಿ ಇದ್ದರೆ ತನಿಖಾ ಸಂಸ್ಥೆಗಳಿಗೆ ನೀಡಬೇಕು. ಅದು ಬಿಟ್ಟು ಹೀಗೆ ಭಯ ಹುಟ್ಟಿಸುವ ಮಾತನಾಡಬಾರದು. ಹೀಗೆ ಮಾಡುವುದೇ ನಿಜವಾದ ಭಯೋತ್ಪಾದನೆ ಎಂದು ವಾಗ್ದಾಳಿ ನಡೆಸಿದರು.

ವಿಜಯಪುರ: ದಲಿತರ ಮನೆಗಳಿಗೆ ಮಂತ್ರಾಕ್ಷತೆ ವಿತರಿಸಿದ ಪೇಜಾವರ ಶ್ರೀಗಳು

ಇದು ಸರಿಯಾದ ಸಮಯವಲ್ಲ:

ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ತಪ್ಪಿತಸ್ಥನಾಗಿದ್ದರೆ ಶಿಕ್ಷಿಸುವುದು ತಪ್ಪಲ್ಲ. ಆದರೆ, ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬಂಧಿಸಿರುವುದು ತಪ್ಪು ಸಂದೇಶ ಕೊಡುತ್ತದೆ ಎಂದು ವಿಶ್ವ ಪ್ರಸನ್ನ ತೀರ್ಥ ಶ್ರೀ ಹೇಳಿದರು.
ಮಂದಿರ ಲೋಕಾರ್ಪಣೆ ಸಮಯದಲ್ಲಿ ಈ ಪ್ರಹಸನ ಸೃಷ್ಟಿ ಮಾಡಿರುವುದು ಸರಿಯಲ್ಲ. ₹ 10 ಕೋಟಿ ಧನ ಸಂಗ್ರಹಿಸಿ ರಾಮ ಮಂದಿರಕ್ಕೆ ಕೊಟ್ಟಿದ್ದೇವೆ. ಆದರೂ ನಮಗೆ ಆಹ್ವಾನ ಬಂದಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ದೊಡ್ಡ ಮೊತ್ತದ ದೇಣಿಗೆ ಕೊಟ್ಟವರು ಬಹಳ ಮಂದಿ ಇದ್ದಾರೆ. ಎಲ್ಲರನ್ನೂ ಕರೆದು ಕೂಡಿಸುವ ವ್ಯವಸ್ಥೆ ಅಲ್ಲಿ ಇಲ್ಲ. ಕೆಲವರನ್ನು ಕರೆದರೆ ಮಾತ್ರ ಕಾರ್ಯಕ್ರಮ ನಡೆಸಲು ಸಾಧ್ಯ ಆಗಲಿದೆ. ಆ ದಿನ ಬರಲು ಅವಕಾಶ ಸಿಗದವರಿಗೆ ಮುಂದಿನ ದಿನ ಹೋಗಲು ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದು ಹೇಳಿದರು.

ನಾವು ಹಿಂದುಗಳು. ಹೀಗಾಗಿ ಭಾರತ ಹಿಂದು ದೇಶ ಎಂದು ಹೇಳಿಕೊಳ್ಳಲು ಸಂಕೋಚವೇಕೆ ? ಹಿಂದು ರಾಷ್ಟ್ರದಲ್ಲಿ ಎಲ್ಲರೂ ಇದ್ದಾರೆ, ಎಲ್ಲರಿಗೂ ಆಶ್ರಯ ನೀಡಲಾಗಿದೆ. ಸರ್ವೇ ಜನ ಸುಖಿನೋ ಭವಂತು ಎನ್ನುವ ದೇಶ ನಮ್ಮದು. ಇಲ್ಲಿ ಸೌಹಾರ್ದತೆ ಇದೆ. ರಾಮ ಮಂದಿರ ಸಂವಿಧಾನ ಬದ್ಧವಾಗಿಯೇ ನಿರ್ಮಾಣವಾಗಿದೆ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮೀಜಿ ತಿಳಿಸಿದ್ದಾರೆ. 

click me!