
ಖಾಜು ಸಿಂಗೆಗೋಳ
ಇಂಡಿ(ಜ.05): ರಾಜ್ಯದ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ನಿರ್ಮಾಣಗೊಂಡಿರುವ ಆಸರೆ ಮನೆಗಳಿಂದ ಫಲಾನುಭವಿಗಳಿಗೆ ಇರಲು ಆಸರೆಯೇನೋ ಸಿಕ್ಕಿದೆ. ಆದರೆ, ಬೆಳಕು ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುವ ಪರಿಸ್ಥಿತಿ ಬಂದೊದಗಿದೆ. ಸಂಗೋಗಿ ಗ್ರಾಪಂ ವ್ಯಾಪ್ತಿಯ ತೆಗ್ಗಿಹಳ್ಳಿ ಗ್ರಾಮದ ಆಸರೆ ಮನೆಗಳಲ್ಲಿ ವಾಸಿಸುವ ಕುಟುಂಬಗಳ ಕರುಣಾಜನಕ ಸ್ಥಿತಿ ಇದು. ಗ್ರಾಮ ಪಂಚಾಯಿತಿ ಹಾಗೂ ಹೆಸ್ಕಾಂ ನಡುವಿನ ಗುದ್ದಾಟದಲ್ಲಿ ಆಸರೆ ಬಡಾವವಣೆಯಲ್ಲಿರುವ ಕುಟುಂಬಗಳಿಗೆ ನಿರಂತರ ಜ್ಯೋತಿ ಭಾಗ್ಯ ಸಿಕ್ಕಿಲ್ಲ.
2009ರಲ್ಲಿ ಸುರಿದ ಮಹಾಮಳೆಯಿಂದ ಭೀಮಾನದಿಗೆ ಪ್ರವಾಹ ಉಂಟಾಗಿ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳು ಜಲಾವೃತ್ತಗೊಂಡು ಹಲವು ಜನರು ನಿರಾಶ್ರಿತರಾಗಿದ್ದರು. ಪ್ರತಿವರ್ಷ ಪ್ರವಾಹದಿಂದ ಸಂಕಷ್ಟ ಅನುಭವಿಸುವ ಜನರಿಗೆ ಶಾಶ್ವತ ಸೂರು ಕಲ್ಪಿಸುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಆಸರೆ ಯೋಜನೆ ಜಾರಿಗೊಳಿಸಿದರು.
ಭಾರತವನ್ನು ಪಾಕಿಸ್ತಾನ ಮಾಡಲು ಸಿದ್ಧತೆ ನಡೆಸಲಾಗುತ್ತಿದೆಯೇ? ಯತೀಂದ್ರ ಹೇಳಿಕೆಗೆ ಪೇಜಾವರಶ್ರೀ ತಿರುಗೇಟು!
ಆಸರೆ ಯೋಜನೆಯಡಿ ತಾಲೂಕಿನಾದ್ಯಂತ ಪ್ರವಾಹಕ್ಕೆ ತುತ್ತಾದ ಗ್ರಾಮಗಳ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಅದರಲ್ಲಿ ತೆಗ್ಗಿಹಳ್ಳಿ ಗ್ರಾಮವೂ ಒಂದು. ಪ್ರವಾಹಕ್ಕೆ ನಿರಾಶ್ರಿತರಾದ ಸುಮಾರು 280 ಕುಟುಂಬಗಳಿಗೆ ಸೂರು ಕಲ್ಪಿಸಲು 280 ಮನೆ ನಿರ್ಮಿಸಲಾಗಿದೆ. ಖಾಲಿ ಉಳಿದ ಜಾಗದಲ್ಲಿ ಮನೆ ಇಲ್ಲದವರಿಗೆ ನಿವೇಶನ ನೀಡಿದ್ದು, ಸದ್ಯ 400 ಕುಟುಂಬಗಳು ಇಲ್ಲಿ ವಾಸವಾಗಿವೆ. ತಾಲೂಕು ಆಡಳಿತ 2011ರಲ್ಲಿ ನಿರಾಶ್ರಿತರ ಕುಟುಂಬಗಳಿಗೆ ಮನೆಗಳ ವಿತರಿಸಿ ಬೀಗದ ಕೈ ನೀಡಲಾಗಿದೆ. ಮನೆಗಳಿಗೆ ವಿದ್ಯುತ್ ಸಂಪರ್ಕ ಸಹ ಅಳವಡಿಸಲು ವಿದ್ಯುತ್ ಕಂಬ, ಸರ್ವಿಸ್ ವಾಯರ್ ಸಹ ಅಳವಡಿಸಲಾಗಿದೆ. ಆದರೆ, ನಿರಂತರ ಜ್ಯೋತಿ ಯೋಜನೆ ಅಡಿಯಿಂದ ಈ ಆಸರೆ ಬಡವಾಣೆ ವಂಚಿತಗೊಂಡಿದೆ.
ಈ ಕುಟುಂಬಗಳಿಗೆ ಆಸರೆಯೋನೋ ಸಿಕ್ಕಿದೆ. ಆದರೆ, ಬೆಳಕು ಸಿಗದಿರುವುದು ಜನರ ಸಂಕಷ್ಟಕ್ಕೆ ಕಾರಣವಾಗಿದೆ. ಆಸರೆ ಮನೆಗಳಿಗೆ ಜಮೀನುಗಳಿಗೆ ನೀಡುವ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಆದರೆ, ರೈತರ ಪಂಪಸೆಟ್‌ಗಳಿಗೆ ರಾತ್ರಿ ವೇಳೆ ಕೇವಲ ಐದು ಗಂಟೆ ವಿದ್ಯುತ್ ಒದಗಿಸುತ್ತಿದ್ದು, ವಿದ್ಯುತ್ ಇಲ್ಲದೆ ಕತ್ತಲೆಯ ಕಾರಣ ಹುಳ, ಹುಪ್ಪಟೆಗಳ ಭಯದಲ್ಲೇ ಬದುಕು ಸಾಗಿಸಬೇಕಿದೆ. ಶಾಲಾ ಮಕ್ಕಳಂತೂ ಚಿಮಣಿ ಹಚ್ಚಿಕೊಂಡು ಅಭ್ಯಾಸ ಮಾಡುವ ಪರಿಸ್ಥಿತಿ ಉಂಟಾಗಿದೆ.
ಪ್ರವಾಹದಿಂದ ತತ್ತರಿಸಿರುವ ನಿರಾಶ್ರಿತ ಕುಟುಂಬಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂಬ ಅಂದಿನ ಸರ್ಕಾರದ ಆಶಯ ಮಣ್ಣುಪಾಲಾಗಿದೆ.
ತೆಗ್ಗಿಹಳ್ಳಿ ಗ್ರಾಮದ ಯುವ ಮುಖಂಡ ತೆಗ್ಗಿಹಳ್ಳಿ ಗ್ರಾಮದ ಆಸರೆ ಮನೆಗಳ ಬಡಾವಣೆಗೆ ನಿರಂತರ ಜ್ಯೋತಿ ವಿದ್ಯುತ್ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಅಕ್ಟೋಬರ್ 2023ರಂದು ಮನವಿ ನೀಡಲಾಗಿದೆ. ಹೆಸ್ಕಾಂ ಶಾಖಾಧಿಕಾರಿ, ಹೆಸ್ಕಾಂ ಎಇಇ ಅವರಿಗೆ ನವೆಂಬರ್ 31ರಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ನೀಡಿದ ಮನವಿಯ ಉಲ್ಲೇಖದನ್ವಯ ಪತ್ರ ಬರೆದಿದ್ದಾರೆ. ಡಿ.14ರಂದು ಹೆಸ್ಕಾಂ ಎಇಇ ಅವರು ಅಂದಾಜು ಪತ್ರಿಕೆ ತಯಾರಿಸಿ ಹೆಸ್ಕಾಂ ಇಇ ಅವರಿಗೆ ಸಲ್ಲಿಸಿದ್ದಾರೆ. ಆದರೆ 12 ವರ್ಷ ಕಳೆದರೂ ಇದು ಅನುಷ್ಠಾನಕ್ಕೆ ಬಂದಿಲ್ಲ..
ತೆಗ್ಗಿಹಳ್ಳಿ ಗ್ರಾಮ ಪ್ರವಾಹದಿಂದ ಹಲವು ಕುಟುಂಬಗಳು ಬೀದಿ ಪಾಲಾಗಿದ್ದವು. ಸುಮಾರು 400 ಕುಟುಂಬ ಗುರುತಿಸಿ ಆಸರೆ ಬಡವಾವಣೆ ನಿರ್ಮಿಸಿ 2011ರಲ್ಲಿ ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದಾರೆ. ಆ ಮನೆಗಳಿಗೆ ಜಮೀನುಗಳಿಗೆ ವಿತರಣೆ ಮಾಡುವ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ರಾತ್ರಿ ವೇಳೆ 5 ತಾಸು ಮಾತ್ರ ವಿದ್ಯುತ್ ಬರುತ್ತಿರುವುದರಿಂದ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಬಡಾವಣೆಗೆ ನಿರಂತರ ಜ್ಯೋತಿ ಯೋಜನೆ ಅಳವಡಿಸಬೇಕು ಎಂದು ಗ್ರಾಪಂಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಬಡಾವಣೆಯ ಕುಟುಂಬಗಳು ಕತ್ತಲೆಯಲ್ಲಿ ಕಾಲಕಳೆಯಬೇಕಾಗಿದೆ ಎಂದು ಆರ್‌ಪಿಐ,ಯುವ ಘಟಕದ ಇಂಡಿ ತಾಲೂಕು ಅಧ್ಯಕ್ಷ (ತೆಗ್ಗಿಹಳ್ಳಿ) ಬಾಬು ಕಾಂಬಳೆ ತಿಳಿಸಿದ್ದಾರೆ.
ರೌಡಿಶೀಟರ್ ಪರ ಬಿಜೆಪಿ ಹೋರಾಡುತ್ತಿರುವುದು ನಾಚಿಕೆಗೇಡು : ಸಚಿವ ಎಂ.ಬಿ.ಪಾಟೀಲ್
ಸಂಗೋಗಿ ಗ್ರಾಪಂ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡು 2-3 ತಿಂಗಳಾಗಿದೆ. ತೆಗ್ಗಿಹಳ್ಳಿ ಗ್ರಾಮದ ಆಸರೆ ಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯ ವಿದ್ಯುತ್ ಸೌಲಭ್ಯ ಇಲ್ಲದ ಕುರಿತು ಗಮನಕ್ಕೆ ಬಂದ ಮೇಲೆ ಹೆಸ್ಕಾಂ ಇಲಾಖೆಗೆ ಪತ್ರ ಬರೆದಿದ್ದೇನೆ. ಹೆಸ್ಕಾಂನವರು ಕಾಮಗಾರಿ ಮಾಡಲು ಗ್ರಾಪಂ ಅನುದಾನ ನೀಡಬೇಕು ಎಂದು ಕೇಳಿದ್ದಾರೆ. ಗ್ರಾಪಂಗೆ ಕಡಿಮೆ ಅನುದಾನ ಇದ್ದು, ಅಷ್ಟು ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಸ್ಕಾಂಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ನಿರಂತರ ಜ್ಯೋತಿ ವಿದ್ಯುತ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಗೋಗಿ ಗ್ರಾಪಂ ಪಿಡಿಒ ಅಶೋಕ ಹೊನವಾಡ ಹೇಳಿದ್ದಾರೆ.
ತೆಗ್ಗಿಹಳ್ಳಿ ಗ್ರಾಮದ ಆಸರೆ ಬಡಾವಣೆಗೆ ನಿರಂತರ ಜ್ಯೋತಿ ಯೋಜನೆ ಸೌಲಭ್ಯ ಒದಗಿಸುವ ಕುರಿತು ಗ್ರಾಪಂ ವತಿಯಿಂದ ಪತ್ರ ಬಂದಿದೆ. ಅಂದಾಜು ಪತ್ರಿಕೆ ತಯಾರಿಸಲಾಗಿದೆ. ಇದಕ್ಕೆ ತಗಲುವ ವೆಚ್ಚದಲ್ಲಿ ಶೇ.10ರಷ್ಟು ಗ್ರಾಪಂ ನೀಡಿದರೆ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು. ಆಸರೆ ಮನೆಗಳ ನಿರ್ಮಾಣ ಮಾಡಿದ ಗುತ್ತಿಗೆದಾರರೇ ಈ ಮನೆಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಬೇಕಾಗಿತ್ತು. ಗುತ್ತಿಗೆದಾರರು ಅಂದು ಏಕೆ ಈ ಕೆಲಸ ಮಾಡಿಲ್ಲ ಎಂಬ ಮಾಹಿತಿ ಇಲ್ಲ ಎಂದು ಇಂಡಿ ಹೆಸ್ಕಾಂ ಎಇಇ ಎಸ್.ಆರ್.ಮೇಡೆಗಾರ ತಿಳಿಸಿದ್ದಾರೆ.