Chikkamagaluru: ಬೀರೂರು ರೈಲ್ವೆ ಸ್ಟೇಷ​ನ್‌ನಲ್ಲಿ ಕಡೆಗೂ ಲಿಫ್ಟ್ ಅಳ​ವ​ಡಿ​ಕೆ

Published : Jul 28, 2022, 11:29 PM IST
Chikkamagaluru: ಬೀರೂರು ರೈಲ್ವೆ ಸ್ಟೇಷ​ನ್‌ನಲ್ಲಿ ಕಡೆಗೂ ಲಿಫ್ಟ್ ಅಳ​ವ​ಡಿ​ಕೆ

ಸಾರಾಂಶ

ಇಲ್ಲಿನ ರೈಲು ನಿಲ್ದಾಣದಲ್ಲಿ ಲಿಫ್ಟ್‌ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಕಳೆದ ವಾರ ಲಿಫ್ಟ್ ಕಾರ್ಯಾರಂಭ ಮಾಡಿದೆ. ಈ ಸೌಲಭ್ಯ ಒದಗಿಸಿದಕ್ಕಾಗಿ ಪ್ರಯಾಣಿಕರು ಈಗ ನೆಮ್ಮ​ದಿಯ ನಿಟ್ಟು​ಸಿರು ಬಿಟ್ಟಿ​ದ್ದಾ​ರೆ.

ಎನ್‌.ಗಿರೀಶ್‌, ಬೀರೂರು

ಬೀರೂರು (ಜು.28): ಇಲ್ಲಿನ ರೈಲು ನಿಲ್ದಾಣದಲ್ಲಿ ಲಿಫ್ಟ್‌ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಕಳೆದ ವಾರ ಲಿಫ್ಟ್ ಕಾರ್ಯಾರಂಭ ಮಾಡಿದೆ. ಈ ಸೌಲಭ್ಯ ಒದಗಿಸಿದಕ್ಕಾಗಿ ಪ್ರಯಾಣಿಕರು ಈಗ ನೆಮ್ಮ​ದಿಯ ನಿಟ್ಟು​ಸಿರು ಬಿಟ್ಟಿ​ದ್ದಾ​ರೆ. ರಾಜ್ಯದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಬೀರೂರು ಕೂಡ ಒಂದಾಗಿದೆ. 160 ವರ್ಷಕ್ಕೂ ಹೆಚ್ಚಿನ ಇತಿಹಾಸ ಇರುವ ಹಳೆಯ ಜಂಕ್ಷನ್‌ ಇದಾಗಿದೆ. ನವದೆಹಲಿ, ಚೆನ್ನೈ, ಜೋಧಪುರ, ಜೈಪುರ, ಮುಂಬೈ, ಅಹಮದಾಬಾದ್‌ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ರೈಲುಗಳಿಗೆ ಇಲ್ಲಿ ನಿಲುಗಡೆಯೂ ಇದೆ. 

ನಿಲ್ದಾಣ ನವೀಕರಣ ಸಂದರ್ಭದಲ್ಲಿ ಪಕ್ಕದ ಪ್ಲಾಟ್‌ ಫಾರಂಗಳಿಗೆ ತೆರಳಲು ಹಳೆಯ ಮೇಲುಸೇತುವೆ ತೆಗೆದು ಹೊಸ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಅದು ವೃದ್ಧರು, ರೋಗಿಗಳು, ಅಶಕ್ತರಿಗೆ ನೆರವಾಗುವ ಬದಲು ಪ್ರಯಾಸಕರವಾಗಿ ಪರಿಣಮಿಸಿತ್ತು. ಇತ್ತೀಚೆಗೆ ಬೀರೂರು- ಹೊಸದುರ್ಗ ನಿಲ್ದಾಣಗಳ ನಡುವೆ ವಿದ್ಯುತ್‌ ಚಾಲಿತ ರೈಲು ಸಂಚಾರ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಈ ವರ್ಷದ್ದು ಅಂತ್ಯದ ವೇಳೆಗೆ ತುಮಕೂರು- ಹುಬ್ಬಳ್ಳಿ ನಡುವೆ ವಿದ್ಯುತ್‌ ರೈಲು ಸಂಚಾರ ಆರಂಭದ ನಿರೀಕ್ಷೆ ಗರಿಗೆದರಿಸಿದೆ. ಈಗ ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಪ್ಲಾಟ್‌ಫಾರಂಗಳಲ್ಲಿ ಲಿಫ್ಟ್‌ ಅಳವಡಿಸಿ ಕಾರ್ಯ ಆರಂಭ ಮಾಡಿರುವುದು ನಾಗರಿಕರಲ್ಲಿ ಹರ್ಷ ಮೂಡಿಸಿದೆ.

ಪ್ರವೀಣ್ ಹತ್ಯೆಗೆ ಭುಗಿಲೆದ್ದ ಆಕ್ರೋಶ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅಲ್ಲಲ್ಲಿ ಭಾರೀ ಪ್ರತಿಭಟನೆ

ಹಲವು ಬೇಡಿಕೆ ಈಡೇರಿರುವ ಸಂತಸದ ನಡುವೆಯೇ ಪ್ರಯಾಣಿಕರ ಕೋಚ್‌ ನಿಲುಗಡೆ ಡಿಜಿಟಲ್‌ ಪಟ್ಟಿಕೆಲಸ ಸ್ಥಗಿತಗೊಳಿಸಿದೆ. ಇದರಿಂದ ರಾತ್ರಿ ವೇಳೆ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಸಮ​ಸ್ಯೆ ಉಂಟಾಗುತ್ತಿದೆ. ವೇಗದ ರೈಲುಗಳಿಗೆ ಎರಡು ನಿಮಿಷ ಮಾತ್ರ ನಿಲುಗಡೆ ಇದ್ದು, ಹೊರ ರಾಜ್ಯಗಳಿಗೆ ಪ್ರಯಾಣಿಸುವ, ಲಗೇಜ್‌ ಹೆಚ್ಚು ಇರುವವರ ಪಾಡು ಸಂಕಷ್ಟಕ್ಕೆ ಸಿಲುಕಿದೆ. ತಮಗೆ ನಿಗದಿಯಾದ ರೈಲು ಡಬ್ಬಿ ಎಲ್ಲಿ ನಿಲ್ಲುತ್ತದೆ ಎನ್ನುವ ಅರಿವು ಸಿಗದೇ ಸಮಸ್ಯೆ ಆಗಿದೆ ಎನ್ನುವುದು ಹಲವರ ದೂರು.

ಇದೇ ವೇಳೆ ಬೆಳಗ್ಗಿನ ಚಿಕ್ಕಮಗಳೂರು- ಶಿವಮೊಗ್ಗ, ಶಿವಮೊಗ್ಗ -ತಿರುಪತಿ ರೈಲುಗಳನ್ನು ನಾಲ್ಕನೇ ಪ್ಲಾಟ್‌ ಫಾರಂನಲ್ಲಿ ಹಾಕುತ್ತಿದ್ದು, ಪ್ರಯಾಣಿಕರ ಅನುಕೂಲಕ್ಕಿಂತ ಇಲಾಖೆ ತನ್ನ ಅನುಕೂಲಕ್ಕೆ ಆದ್ಯತೆ ನೀಡುತ್ತಿದೆ. ಈ ರೈಲುಗಳಲ್ಲಿ ವಯಸ್ಕರು, ರೋಗಿಗಳು, ಸ್ತ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದಾರೆ. ಲಿಫ್ಟ್‌ ಇದ್ದರೂ ಪ್ರಯೋಜನಕ್ಕೆ ಬಾರದಂತೆ ಆಗಿದೆ. ಅನಿವಾರ್ಯ ಸಂದರ್ಭ ಹೊರತುಪಡಿಸಿ, ಎರಡು ಅಥವಾ ಮೂರನೇ ಪ್ಲಾಟ್‌ ಫಾರಂನಲ್ಲಿ ಈ ರೈಲುಗಳಿಗೆ ನಿಲುಗಡೆ ಕೊಟ್ಟರೆ ಅನುಕೂಲ ಎನ್ನುವುದು ನಾಗರಿಕರ ಒತ್ತಾಯ. ಹಿರಿಯ ಅಧಿಕಾರಿಗಳು ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಜತೆಗೆ ಪ್ರಯಾಣಿಕರ ಅನುಕೂಲಗಳ ಬಗ್ಗೆಯೂ ಗಮನಹರಿಸಬೇಕು ಎನ್ನುವುದು ಪ್ರಯಾಣಿಕರ ಮನವಿ.

11 ತಿಂಗಳ ಬಳಿಕ ಲಿಫ್ಟ್‌ ಸೌಲ​ಭ್ಯ!: ‘ಕನ್ನಡಪ್ರಭ’ದಲ್ಲಿ 2021ರ ಆಗಸ್ಟ್‌ 21ರಂದು ‘ಬೀರೂರು ರೈಲ್ವೆ ಮೇಲ್ಸೇತುವೆ ಪ್ರಯಾಣಿಕರು ಸುಸ್ತೋ ಸುಸ್ತು’ ಶೀರ್ಷಿಕೆಯಡಿ ವರದಿ ಪ್ರಕಟಿಸಿ, ಸಮ​ಸ್ಯೆ​ಯನ್ನು ಅನಾ​ವ​ರ​ಣ​ಗೊ​ಳಿ​ಸಿತ್ತು. ಈಗ ಹನ್ನೊಂದು ತಿಂಗಳ ಬಳಿಕವಾದರೂ ರೈಲ್ವೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿ​ದ್ದಾರೆ. ಸಾರ್ವ​ಜ​ನಿ​ಕರ ಪರ​ದಾಟ ಅರಿತು ಲಿಫ್‌್ಟಕಾಮಗಾರಿ ಪ್ರಾರಂಭಿಸಿ ಮುಗಿ​ಸಿ​ದ್ದಾರೆ. ಇದಕ್ಕೆ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದು, ಪತ್ರಿಕೆ ವರ​ದಿಗೆ ಸೂಕ್ತ ಸ್ಪಂದನೆ ಸಿಕ್ಕಂತಾ​ಗಿದೆ.

Vikranth Rona: ಸಿನಿಮಾ ನೋಡಲು ಬಂದವರು ಸಿನಿಮಾ ಸ್ಟೈಲಲ್ಲಿ ಹೊಡೆದಾಡಿ ಆಸ್ಪತ್ರೆ ಸೇರಿದ್ರು..!

ಬೀರೂರು ರೈಲ್ವೆ ನಿಲ್ದಾಣ ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾಗಿದ್ದಾಗಿದೆ. ಇಲ್ಲಿ ಸಂಚರಿಸುವ ಪ್ರಯಾಣಿಕರ ಹಿತದೃಷ್ಠಿಯಿಂದ ‘ಕನ್ನಡಪ್ರಭ’ದಲ್ಲಿ ಲಿಫ್ಟ್ ಸೌಲ​ಭ್ಯದ ಅಗ​ತ್ಯ​ತೆಯ ಬಗ್ಗೆ ವರದಿ ಮಾಡಲಾ​ಗಿತ್ತು. ಇದರ ಪರಿಣಾಮ ಈಗ ಪ್ರಯಾಣಿಕರಿಗೆ ಎರಡೂ ಪ್ಲಾಟ್‌ ಫಾರಂಗ​ಳಲ್ಲಿ ಲಿಫ್ಟ್ ಅಳ​ವ​ಡಿಕೆ ಕಾರ್ಯವಾಗಿ​ದೆ. ಇದ​ರಿಂದ ಇಲ್ಲಿ ಸಂಚರಿಸುವ ವೃದ್ಧರು, ಅಂಗ​ವಿ​ಕಲ​ರಿಗೆ ಅನೂಕೂಲವಾಗಲಿ​ದೆ. ‘ಕನ್ನಡಪ್ರಭ’ ಪತ್ರಿಕೆ ಕಾಳ​ಜಿಗೆ ಧನ್ಯವಾದಗಳು
- ಸುನೀತಾ ಮಲ್ಲೇಶಪ್ಪ, ಬೀರೂರು

PREV
Read more Articles on
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!