ವಾಹನ ಬಿಡುವ ವಿಚಾರಕ್ಕೆ ಇನ್‌ಸ್ಪೆಕ್ಟರ್‌, ಎಎಸ್‌ಐ ಭಾರೀ ಜಗಳ: ವಿಡಿಯೋ ವೈರಲ್‌

By Kannadaprabha NewsFirst Published Oct 29, 2022, 10:02 AM IST
Highlights

ಬೆಂಗಳೂರಿನ ಏರ್‌ಪೋರ್ಟ್‌ ಠಾಣೆ ಇನ್‌ಸ್ಪೆಕ್ಟರ್‌-ದೇವನಹಳ್ಳಿ ಸಂಚಾರ ಠಾಣೆ ಎಎಸ್‌ಐ ಗುದ್ದಾಟ

ಬೆಂಗಳೂರು(ಅ.29):  ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌(ಪಿಐ) ಮತ್ತು ಸಂಚಾರ ಪೊಲೀಸ್‌ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌(ಎಎಸ್‌ಐ) ಪರಸ್ಪರ ಬೈದಾಡಿಕೊಂಡಿರುವ ಆಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಸಂಚಾರ ಉತ್ತರ ವಿಭಾಗದ ಡಿಸಿಪಿ ಎಸ್‌.ಸವಿತಾ ಅವರು ಈ ವೈರಲ್‌ ಆಡಿಯೋ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಂಚಾರ ಈಶಾನ್ಯ ಉಪವಿಭಾಗದ ಎಸಿಪಿಗೆ ಸೂಚಿಸಿದ್ದಾರೆ. 2.47 ನಿಮಿಷದ ಮೊಬೈಲ್‌ ಸಂಭಾಷಣೆಯ ಆಡಿಯೋ ರೆಕಾರ್ಡ್‌ನಲ್ಲಿ ಸಂಭಾಷಣೆ ನಡೆಸಿದವರು ಏರ್‌ಪೋರ್ಚ್‌ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮುತ್ತುರಾಜ್‌ ಮತ್ತು ದೇವನಹಳ್ಳಿ ಸಂಚಾರ ಠಾಣೆ ಎಎಸ್‌ಐ ವೆಂಕಟೇಶ್‌ ಎನ್ನಲಾಗಿದೆ.

ಎಎಸ್‌ಐಗೆ ಕರೆ ಮಾಡಿರುವ ಇನ್‌ಸ್ಪೆಕ್ಟರ್‌ ಮುತ್ತುರಾಜ್‌, ‘ಇನ್‌ಸ್ಪೆಕ್ಟರ್‌ ಯಾರು ಎಂಬುದು ಗೊತ್ತಿಲ್ವಾ ನಿನಗೆ? ಯಾವ ಇನ್‌ಸ್ಪೆಕ್ಟರ್‌ ಗೊತ್ತಿಲ್ಲ ಎನ್ನುತ್ತಿಯಾ? ಇನ್‌ಸ್ಪೆಕ್ಟರ್‌ ಕರೆ ಮಾಡಿದರೆ ಫೋನ್‌ ತೆಗೆದುಕೊಳ್ಳಲ್ವಾ ನೀನು? ನಿನಗೆ ಕೇಸ್‌ ಎಲ್ಲಿಗೆ ಹೇಳಬೇಕೋ ಅಲ್ಲಿ ಹೇಳುತ್ತೇನೆ ಬಾ. ನಿನ್ನಂಥೋರು ನನಗೂ ಬೇಕು ಬಾ. ನಿಂಗೆ ಎಲ್ಲಿ ತೋರಿಸಬೇಕೋ ಅಲ್ಲಿ ತೋರುಸ್ತೀನಿ ಬಾ’ ಎಂದು ಏರು ದನಿಯಲ್ಲಿ ರೇಗಾಡಿದ್ದಾರೆ.

Bengaluru: ಹಾಫ್ ಹೆಲ್ಮೆಟ್ ಧರಿಸಿದ ಪೇದೆಗೂ ದಂಡ: ಆದರೂ ಜನರ ತರಾಟೆ

ಇದಕ್ಕೆ ಸಂಚಾರ ಎಎಸ್‌ಐ ವೆಂಕಟೇಶ್‌ ಕೌಂಟರ್‌ ನೀಡಿದ್ದು, ‘ನೀವು ಯಾರು ಅಂತಾ ನನಗೆ ಗೊತ್ತಿರಲಿಲ್ಲ. ಆ ವಾಹನದ ಮೇಲೆ .41,500 ದಂಡ ಬಾಕಿ ಇತ್ತು. ಬೆದರಿಕೆ ಹಾಕಬೇಡಿ. ಏನು? ನನ್ನ ಜೈಲಿಗೆ ಕಳುಸ್ತೀರಾ? ಕೊಲೆ ಮಾಡುತ್ತೀರಾ? ನೋಡುತ್ತೇನೆ ಎಂದರೆ, ಏನ್‌ ನೋಡುತ್ತೀರಾ? ನಾನೂ ನಿಮ್ಮನ್ನು ನೋಡುತ್ತೇನೆ ಬನ್ನಿ. ಚಾಲೆಂಜ್‌ ಮಾಡಬೇಡಿ. ರೆಸ್ಪೆಕ್ಟ್ ಕೊಟ್ಟು ಮಾತನಾಡಿ. ನಾನು ತಿರುಗಿಸಿ ಮಾತನಾಡಿದರೆ ಸರಿ ಬರಲ್ಲ’ ಎಂದು ಇನ್‌ಸ್ಪೆಕ್ಟರ್‌ ಮಾತಿಗೆ ತಿರುಗೇಟು ನೀಡಿದ್ದಾರೆ.

ಇನ್‌ಸ್ಪೆಕ್ಟರ್‌ ಪರಿಚಿತರ ವಾಹನಕ್ಕೆ ದಂಡ?

ಇನ್‌ಸ್ಪೆಕ್ಟರ್‌ ಮುತ್ತುರಾಜ್‌ ಅವರ ಪರಿಚಿತರ ವಾಹನವನ್ನು ಸಂಚಾರ ಎಎಸ್‌ಐ ವೆಂಕಟೇಶ್‌ ಹಿಡಿದು ದಂಡ ಹಾಕಿದ್ದಾರೆ. ಈ ವೇಳೆ ವಾಹನದ ಮಾಲಿಕರು ಇನ್‌ಸ್ಪೆಕ್ಟರ್‌ ಮುತ್ತುರಾಜ್‌ಗೆ ಕರೆ ಮಾಡಿ ವಾಹನ ಬಿಡಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಫೋನ್‌ ಎಎಸ್‌ಐಗೆ ಕೊಡುವಂತೆ ಮುತ್ತುರಾಜ್‌ ಹೇಳಿದ್ದಾರೆ. ಆಗ ವೆಂಕಟೇಶ್‌, ಫೋನ್‌ ಪಡೆದುಕೊಳ್ಳಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್‌ ಮುತ್ತುರಾಜ್‌ ಅವರು ಎಎಸ್‌ಐ ವೆಂಕಟೇಶ್‌ಗೆ ಕರೆ ಮಾಡಿದ್ದಾಗ ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದಾರೆ ಎನ್ನಲಾಗಿದೆ.
 

click me!