ಬಳ್ಳಾರಿ–ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ವಂದೇ ಭಾರತ ರೈಲು, ಹೊಸಪೇಟೆಯಲ್ಲಿ ಪರಿಶೀಲನೆ

By Suvarna NewsFirst Published Sep 12, 2023, 3:12 PM IST
Highlights

ಬಳ್ಳಾರಿ–ಗುಂತಕಲ್ ಮಾರ್ಗವಾಗಿ ಹೊಸಪೇಟೆ-ಬೆಂಗಳೂರು ನಡುವೆ ಪ್ರತಿಷ್ಠಿತ ವಂದೇ ಭಾರತ್ ರೈಲು ಆರಂಭಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೇ ವಲಯವು ಪರಿಶೀಲನೆ ನಡೆಸಿದೆ.

ಹೊಸಪೇಟೆ (ಸೆ.12): ಬಳ್ಳಾರಿ–ಗುಂತಕಲ್ ಮಾರ್ಗವಾಗಿ ಹೊಸಪೇಟೆ-ಬೆಂಗಳೂರು ನಡುವೆ ಪ್ರತಿಷ್ಠಿತ ವಂದೇ ಭಾರತ್ ರೈಲು ಆರಂಭಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೇ ವಲಯವು ಪರಿಶೀಲನೆ ನಡೆಸಿದ್ದು, ರೈಲು ಆರಂಭಕ್ಕೆ ಆಗತ್ಯವಿರುವ ಮೂಲಸೌಕರ್ಯಗಳ ಲಭ್ಯತೆ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್‌, ಕಾರ್ಯದರ್ಶಿ ಕುಡುತಿನಿ ಮಹೇಶ್ ತಿಳಿಸಿದ್ದಾರೆ.

Vande Bharat Express: ತಿರುವನಂತಪುರಂ-ಮಂಗಳೂರು ನಡುವೆ ವಂದೇ ಭಾರತ್‌ ರೈಲು?

ಹೊಸಪೇಟೆ ಭಾಗದಲ್ಲಿ ಗಂಟೆಗೆ 100 ರಿಂದ 130 ಕಿಮಿ ವೇಗದಲ್ಲಿ ಸಂಚರಿಸುವ ರೈಲಿನ ವೇಗಕ್ಕೆ ತಕ್ಕಂತೆ ಒತ್ತಡ ತಡೆದುಕೊಳ್ಳುವ ಹೆಚ್ಚು ಸಾಮರ್ಥ್ಯವಿರುವ ರೈಲ್ವೆ ಹಳಿ ಮಾರ್ಗ ನಿರ್ಮಿಸಲಾಗಿದ್ದು, ಹೊಸಪೇಟೆ-ಬೆಂಗಳೂರು ನಡುವೆ ಈ ಮಾರ್ಗ ಸಂಪೂರ್ಣವಾಗಿ ವಿದ್ಯುದೀಕರಣವಾಗಿದ್ದು, ಜೋಡಿ ರೈಲು ಮಾರ್ಗದ ಸಂಪರ್ಕವಿದೆ ಹಾಗೂ ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಕೋಚ್‌ಗಳಿಗೆ ನೀರು ತುಂಬಿಸುವ ಸೌಲಭ್ಯವಿದೆ.ಅಲ್ಲದೇ ಹೊಸಪೇಟೆಯು ಪ್ರಮುಖ ಪ್ರವಾಸಿ ಹಾಗೂ ಕೈಗಾರಿಕೆಗಳ ತಾಣವಾಗಿರುವುದರಿಂದ ಎರಡು ನಗರಗಳ ನಡುವೆ ಪ್ರಯಾಣಿಕರ ದಟ್ಟಣೆ ಅಧಿಕವಾಗುತ್ತಾ ಸಾಗಿದೆ ಎಂದೂ ತಿಳಿಸಿದ್ದಾರೆ.

ವಂದೇ ಭಾರತ್‌ ನಿಲುಗಡೆಗೆ ರೈಲ್ವೆ ಸಚಿವರ ಜತೆ ಚರ್ಚೆ

ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನ ನಿರ್ಮಿತ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಫೆಬ್ರವರಿ ೨೦೧೯ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಪ್ರಸ್ತುತ ನಮ್ಮ ರಾಜ್ಯದಲ್ಲಿ ಧಾರವಾಡ-ಬೆಂಗಳೂರು ಮತ್ತು ಮೈಸೂರು-ಬೆಂಗಳೂರು-ಚೆನ್ನೈ ನಡುವೆ ರೈಲು ಸಂಚರಿಸುತ್ತದೆ. ಈ ರೈಲಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬೆಂಗಳೂರು ಮತ್ತು ಪ್ರವಾಸಿ ತಾಣಗಳ ನಡುವೆ ರೈಲು ಆರಂಭಿಸಲು ರೈಲ್ವೆ ಸಚಿವಾಲಯ ಉತ್ಸುಕವಾಗಿದೆ. ಆದಷ್ಟು ಬೇಗನೆ ಹೊಸಪೇಟೆಯು ವಂದೇ ಭಾರತ್ ರೈಲು ಸಂಪರ್ಕದ ನಕಾಶೆಗೆ ಸೇರಲಿ ಹಾಗೂ ಉದ್ದೇಶಿತ ರೈಲು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊಸಪೇಟೆಯಿಂದ ನಿರ್ಗಮಿಸಿ ಬೆಂಗಳೂರು ತಲುಪಿ ಅಲ್ಲಿಂದ 3 ಗಂಟೆಗೆ ನಿರ್ಗಮಿಸಿ ಹೊಸಪೇಟೆಯನ್ನು ರಾತ್ರಿ ೧೦ಗಂಟೆಗೆ ತಲುಪುವಂತೆ ವೇಳಾಪಟ್ಟಿ ತಯಾರಿಸಬೇಕು ಎಂದು ಒತ್ತಾಯಿಸಿದ್ದಾರೆ.

click me!