ರಾಸಲೀಲೆ ಪ್ರಕರಣ: 'ರಾಜ್ಯದಲ್ಲಿ ಸಚಿವರಿಂದಲೇ ಮಹಿಳೆಯ ಮೇಲೆ ದಬ್ಬಾಳಿಕೆ'

By Kannadaprabha NewsFirst Published Apr 15, 2021, 3:40 PM IST
Highlights

ಮಹಿಳೆಗೆ ಕೆಲಸ ಕೊಡಿಸುವ ಆಮಿಷ ಒಡ್ಡಿ ಏನೆಲ್ಲಾ ನಡೆದಿದೆ ಎನ್ನುವುದು ಎಲ್ಲರಿಗೆ ಗೊತ್ತಿದೆ| ಸರ್ಕಾರ ಎಲ್ಲವನ್ನು ಅರಿತಿದ್ದರೂ ಕ್ರಮ ಏಕೆ ಇಲ್ಲ ಎಂದು ಪ್ರಶ್ನಿಸಿದ ವೀಣಾ ಕಾಶಪ್ಪನವರ| ಕಾಶಪ್ಪನವರ ಮತ್ತು ನಿರಾಣಿ ಕುಟುಂಬದ ನಡುವೆ ವೈಮನಸ್ಸು ಇಲ್ಲ. ಧರ್ಮದ ವಿಷಯದಲ್ಲಿ ಕೆಲವು ಭಿನ್ನಾಭಿಪ್ರಾಯಗಳಷ್ಟೇ ಇವೆ: ವೀಣಾ| 

ಬಾಗಲಕೋಟೆ(ಏ.15): ರಾಜ್ಯದಲ್ಲಿ ಮಹಿಳೆಯರಿಗೆ ಭದ್ರತೆಯಿಲ್ಲವಾಗಿದೆ. ರಾಜ್ಯ ಸರ್ಕಾರದಿಂದ ಮಹಿಳೆಯರ ಸುಭದ್ರತೆ ಹಾಗೂ ರಕ್ಷಣೆಯ ಬಗ್ಗೆ ಯಾವ ಕ್ರಮಗಳು ಇಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷೆಯೂ ಆಗಿರುವ ಮಹಿಳಾ ಕಾಂಗ್ರೆಸ್‌ನ ರಾಜ್ಯ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಸಚಿವರಾದವರೆ ಮಹಿಳೆಯ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಮಹಿಳೆಗೆ ಕೆಲಸ ಕೊಡಿಸುವ ಆಮಿಷ ಒಡ್ಡಿ ಏನೆಲ್ಲಾ ನಡೆದಿದೆ ಎನ್ನುವುದು ಎಲ್ಲರಿಗೆ ಗೊತ್ತಿದೆ. ಸರ್ಕಾರ ಎಲ್ಲವನ್ನು ಅರಿತಿದ್ದರೂ ಕ್ರಮ ಏಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ.

ಮಹಿಳೆಯರಿಗೆ ಅಭದ್ರತೆ:

ಸರ್ಕಾರವು ಕಳೆದ ಒಂದೂವರೆ ತಿಂಗಳಿನಿಂದ ಪ್ರಕರಣದ ರೂವಾರಿಯನ್ನು ಬಂಧನ ಮಾಡಿಲ್ಲ. ಅರೆಸ್ಟ್‌ ಮಾಡಿ ಅಂತಾ ನಾವು ಪ್ರತಿಭಟನೆ ನಡೆಸಿದರೆ ನಮ್ಮನ್ನೆ ಅರೆಸ್ಟ್‌ ಮಾಡಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ಭದ್ರತೆ ನೀಡದ ಸರ್ಕಾರವಿದೆ. ಯಾವ ವರ್ಗಕ್ಕೂ ಅನುಕೂಲವಾಗದ ಸರ್ಕಾರ ಈ ಬಿಜೆಪಿ ಸರ್ಕಾರವಾಗಿದೆ. ಮಹಿಳೆಯವರ ಮೇಲೆ ಸಾಕಷ್ಟು ಕಡೆ ದೌರ್ಜನ್ಯ ನಡೆಯುತ್ತಿದ್ದು, ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ವಹಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಸಿದ್ದರಾಮಯ್ಯ ಸ್ಥಿಮಿತ ಕಳೆದುಕೊಂಡಿದ್ದಾರೆ: ಕಟೀಲ್‌

ಮಾಜಿ ಸಚಿವರ ಬೆನ್ನಿಗೆ ಸರ್ಕಾರ:

ಸಿಡಿ ಪ್ರಕರಣದ ರೂವಾರಿಯು ಆದ ಮಾಜಿ ಸಚಿವರ ಬೆನ್ನಿಗೆ ಸರ್ಕಾರ ನಿಂತಿದೆ. ಸರ್ಕಾರದಲ್ಲಿ ಮಹಿಳೆಯರಿಗೆ ನ್ಯಾಯ ಸಿಗುತ್ತಿಲ್ಲ. ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸಿಗರನ್ನೇ ಅರೆಸ್ಟ್‌ ಮಾಡಿದ್ದಾರೆ. ಆದರೆ ಸಿಡಿ ಪ್ರಕರಣದ ರೂವಾರಿಯನ್ನು ಬಂ​ಧಿಸುವ ಮನಸು ಮಾಡಲಿಲ್ಲ. ಮಾಜಿ ಸಚಿವರನ್ನು ಅರೆಸ್ಟ್‌ ಮಾಡಿದರೆ ಎಲ್ಲಿ ಸರ್ಕಾರ ಉರುಳುತ್ತದೆ ಎನ್ನುವ ಭಯದಲ್ಲಿ ಮುಖ್ಯಮಂತ್ರಿಗಳು ಇದ್ದಾರೆ. ಈ ಸರ್ಕಾರದಲ್ಲಿ ನೊಂದ ಮಹಿಳೆಯರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಹೇಳಿದರು.
ಸಾರಿಗೆ ನೌಕರರ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿದ ವೀಣಾ ಕಾಶಪ್ಪನವರ, ಸಾರಿಗೆ ನೌಕರರ ಕುಟುಂಬ ಬೀದಿಗೆ ಬಿದ್ದಿದೆ. ಸರ್ಕಾರ ಮಾತ್ರ ಉಪ ಚುನಾವಣೆಯಲ್ಲೇ ಬ್ಯುಸಿಯಾಗಿದೆ. ಸರ್ಕಾರವು ರಾಜ್ಯದ ಜನತೆಯ ಹಿತ ಕಾಯುವಲ್ಲಿ ವಿಫಲವಾಗಿದೆ. ಸಾರಿಗೆ ನೌಕರರ ಕುಟುಂಬ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದೆ. ಕೇಂದ್ರ ಸರ್ಕಾರ ಇಡೀ ದೇಶವನ್ನೇ ಖಾಸಗೀಕರಣ ಮಾಡಲು ಹೊರಟಿದ್ದು, ಅದು ರಾಜ್ಯ ರಸ್ತೆ ಸಾರಿಗೆ ನೌಕರರ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿಯು ಉಪಚುನಾವಣೆಯಲ್ಲಿ ದುಡ್ಡು ಹಂಚುವದರಲ್ಲಿ ಬ್ಯೂಸಿಯಾಗಿದೆ. ಯುಗಾದಿ ಹಬ್ಬ ಆಚರಿಸಲು ಸಾರಿಗೆ ನೌಕರರಿಗಾಗಲಿಲ್ಲ. ಮುಷ್ಕರದಲ್ಲಿ ಸಾರಿಗೆ ನೌಕರರು ತೊಡಗಿದ್ದಾರೆ. ಅವರನ್ನು ಕರೆದು ಮಾತುಕತೆ ನಡೆಸುವ ಸೌಜನ್ಯತೆಯೂ ಸರ್ಕಾರಕ್ಕಿಲ್ಲ. ಸರ್ಕಾರಕ್ಕೆ ಕಣ್ಣಿಲ್ಲ, ಕಿವಿಯಿಲ್ಲ, ಬಾಯಿಲ್ಲ. ಬಿಜೆಪಿ ರಾಜ್ಯದಲ್ಲಿ ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದೆ ಎಂದು ಹೇಳಿದರು.

'ಬಿಎಸ್‌ವೈ ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕಾದ ಹೈಕಮಾಂಡ್‌ ಬಾಯಿಮುಚ್ಚಿ ಕುಳಿತಿದೆ'

ವಿಫಲ ಸರ್ಕಾರ:

ಕೇಂದ್ರ ಸರ್ಕಾರವು ಕೂಡಾ ರೈತರ ಪ್ರತಿಭಟನೆ ಬಗ್ಗೆನೂ ಸ್ಪಷ್ಟ ನಿಲುವು ಪ್ರಕಟಿಸುತ್ತಿಲ್ಲ. ಕೃಷಿ ಕಾಯ್ದೆ ಜಾರಿಯಿಂದ ರೈತನ ಬದುಕು ಬೀದಿಗೆ ಬಂದಿದೆ. ಅದಾನಿ, ಅಂಬಾನಿ ಸರ್ಕಾರ ಕೇಂದ್ರ ಸರ್ಕಾರವಾಗಿದೆ, ಕೊರೋನಾ ಎರಡನೇ ಅಲೆ ನಿಯಂತ್ರಣದಲ್ಲೂ ಸರ್ಕಾರ ವೈಪಲ್ಯ ಕಂಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಲ್ಲ ಹಂತದಲ್ಲಿಯು ವೈಫಲ್ಯ ಕಂಡಿವೆ ಎಂದರು.

ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಅವರು ಜಿಲ್ಲೆಯ ಜನರ ಸಮಸ್ಯೆಯನ್ನು ಅರಿತುಕೊಳ್ಳುವಲ್ಲಿ ಹಾಗೂ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸದ ಸಂಸದರ ವರ್ತನೆ ನಿಜಕ್ಕೂ ಬೇಸರದ ವಿಷಯವಾಗಿದೆ ಎಂದು ಹೇಳಿದರು. ಕಾಶಪ್ಪನವರ ಮತ್ತು ನಿರಾಣಿ ಕುಟುಂಬದ ನಡುವೆ ವೈಮನಸ್ಸು ಇಲ್ಲ. ಧರ್ಮದ ವಿಷಯದಲ್ಲಿ ಕೆಲವು ಭಿನ್ನಾಭಿಪ್ರಾಯಗಳಷ್ಟೇ ಇವೆ ಎಂದು ಸ್ಪಷ್ಟಪಡಿಸಿದರು.

ಜಿಪಂ ಚುನಾವಣೆಗೆ ಸ್ಪ​ರ್ಧಿಸಲು ಸಿದ್ಧ

ಕಳೆದ ಅವ​ಧಿಯಲ್ಲಿ ಜಿಪಂ ಸದಸ್ಯೆಯಾಗಿ, ಅಧ್ಯಕ್ಷೆಯಾಗಿ ಉತ್ತಮ ಕಾರ್ಯ ನಿರ್ವಹಿಸಿರುವ ನನಗೆ ಜನತೆ ಮತ್ತೆ ಜಿಪಂ ಚುನಾವಣೆಗೆ ನಿಲ್ಲಲು ಭಯಸಿದರೆ ಮತ್ತೆ ಜಿಪಂ ಚುನಾವಣೆಗೆ ಸ್ಪ​ರ್ಧಿಸಲು ಸಿದ್ಧ ಎಂದು ವೀಣಾ ಕಾಶಪ್ಪನವರ ಹೇಳಿದರು. ಕಳೆದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
 

click me!