Kodagu: ಬಾಳುಗೋಡು ಹಾಡಿ ಜನರಿಗೆ ಅನ್ಯಾಯ: ನೈಜ ಹೋರಾಟಗಾರರ ಸಂಘ ಆಕ್ರೋಶ

By Govindaraj SFirst Published Nov 24, 2023, 10:03 PM IST
Highlights

ಜಿಲ್ಲೆಯ ಆದಿವಾಸಿ ಬುಡಕಟ್ಟು ಜನರ ಹಾಡಿಗಳ ಜನರ ಬದುಕು ಶೋಚನೀಯವಾಗಿದ್ದು ಅಧಿಕಾರಿಗಳು ಅವರಿಗೆ ಮೂಲಭೂತ ಸೌಕರ್ಯ ಒದಗಿಸದೆ ಅನ್ಯಾಯ ಎಸಗುತ್ತಿದ್ದಾರೆ ಎಂದು ನೈಜ ಹೋರಾಟಗಾರರ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ನ.24): ಜಿಲ್ಲೆಯ ಆದಿವಾಸಿ ಬುಡಕಟ್ಟು ಜನರ ಹಾಡಿಗಳ ಜನರ ಬದುಕು ಶೋಚನೀಯವಾಗಿದ್ದು ಅಧಿಕಾರಿಗಳು ಅವರಿಗೆ ಮೂಲಭೂತ ಸೌಕರ್ಯ ಒದಗಿಸದೆ ಅನ್ಯಾಯ ಎಸಗುತ್ತಿದ್ದಾರೆ ಎಂದು ನೈಜ ಹೋರಾಟಗಾರರ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಇತಿಹಾಸ ತಜ್ನ ನಂಜರಾಜೇಅರಸ್ ನೇತೃತ್ವದಲ್ಲಿ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು ಹಾಡಿಗೆ ಭೇಟಿ ನೀಡಿರುವ ತಂಡ ಅಲ್ಲಿನ ಜನರ ಬದುಕಿನ ಬವಣೆಯನ್ನು ಕಂಡು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 22 ಕುಟುಂಬಗಳು ವಾಸವಾಗಿದ್ದು ಎಲ್ಲಾ ಕುಟುಂಬಗಳು ಕನಿಷ್ಠ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಎರಡು ಕಿಲೋಮೀಟರ್ ದೂರದಿಂದ ನೀರು ಹೊತ್ತು ತಂದು ಕುಡಿಯಬೇಕಾಗಿದೆ. 

ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲ. ಧರ್ಮಸ್ಥಳ ಸಂಘದಿಂದ ಸೋಲಾರ್ ಲೈಟ್ ಒದಿಸಲಾಗಿದ್ದು ಅದಕ್ಕೆ ಧರ್ಮಸ್ಥಳ ಸಂಘದಿಂದ ಪ್ರತೀ ವಾರ ಮಿತಿಮೀರಿದ ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಅವರು ಧನಾಧಿಕಾರಿಯಾಗಿ ಬದಲಾವಣೆಯಾಗಿದ್ದಾರೆ ಎಂದು ನಂಜರಾಜ ಅರಸ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮಾಧಿಕಾರಿ ಅವರು ಜನರಿಗೆ ಸಾಕಷ್ಟು ಅನುಕೂಲ ಮಾಡುತ್ತಿದ್ದಾರೆ ಎಂದು ನಂಬಿ ಪ್ರಧಾನಿ ಮೋದಿ ಅವರು ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದಾರೆ. ಆದರೆ ಅವರು ಮಾಡುತ್ತಿರುವುದು ಏನು. 

ಬೇಸಿಗೆಗೂ ನಾಲ್ಕು ತಿಂಗಳು ಮೊದಲೇ ಬತ್ತಿದ ಚಿಕ್ಲಿಹೊಳೆ ಜಲಾಶಯ: ರೈತರಲ್ಲಿ ಆತಂಕ

ಅವರ ಸಂಘದಿಂದಲೇ ಈ ಸೋಲಾರ್ ವಿದ್ಯುತ್ ಲೈಟ್ಗಳನ್ನು ಒದಗಿಸಲಾಗಿದ್ದು, ಅದಕ್ಕೆ ಪ್ರತೀ ವಾರ ಬಡ್ಡಿ ವಸೂಲಿ ಮಾಡುತ್ತಿರುವುದಕ್ಕೆ ಹಾಡಿಗೆ ಭೇಟಿಕೊಟ್ಟ ತಂಡ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಬ್ಯಾಂಕುಗಳಲ್ಲಿಯೂ ಇಷ್ಟೊಂದು ಬಡ್ಡಿಯನ್ನು ವಸೂಲಿ ಮಾಡುವುದಿಲ್ಲ. ಇವರು 21 ರಿಂದ 22 ಪರ್ಸೆಂಟ್ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಇಲ್ಲಿನ ಜನರಿಂದ ಬಡ್ಡಿ ವಸೂಲಿ ಮಾಡಬಾರದು. ಅದಕ್ಕೆ ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಅಸಮಾಧಾನ ವ್ಯಕ್ತಪಡಿದ್ದಾರೆ. 

ಅಧಿಕ ಬಡ್ಡಿ ವಸೂಲಿ ಮಾಡುತ್ತಿರುವುದು ಧರ್ಮಾಧಿಕಾರಿ ಅವರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಅವರಿಗೆ ಗೊತ್ತಿಲ್ಲದೆ ಯಾವುದೂ ಆಗುವುದಕ್ಕೆ ಸಾಧ್ಯವಿಲ್ಲ. ಹೀಗೆ ಬಡ್ಡಿ ವಸೂಲಿ ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ನಂಜರಾಜ್ ಅರಸ್ ಒತ್ತಾಯಿಸಿದ್ದಾರೆ.  ಸಾಕಷ್ಟು ಹೋರಾಟದ ಬಳಿಕ ಅವರಿಗೆ ಟಾರ್ಪಲ್ ವಿತರಿಸಲಾಗಿದೆ. ಅಲ್ಲಿ 15 ಕ್ಕೂ ಹೆಚ್ಚು ಮಕ್ಕಳಿದ್ದು, ಅವರಿಗೆ ಅಲ್ಲಿನ ವಿದ್ಯಾರ್ಥಿನಿಯೊಬ್ಬಳು ಪಾಠ ಹೇಳಿ ಕೊಟ್ಟರೆ ಅದಕ್ಕೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಅಡ್ಡಿಪಡಿಸಿದ್ದಾರೆ. ಇವರಿಗೆ ಸೌಲಭ್ಯಗಳನ್ನು ಕೊಡಲು ಆಗುವುದಿಲ್ಲ ಸೌಲಭ್ಯ ನೀಡಿದವರ ವಿರುದ್ಧ ನಕ್ಸಲರು ಎನ್ನುವ ಹಣೆಪಟ್ಟಿಯನ್ನು ಕಟ್ಟುತ್ತಿದ್ದಾರೆ ಎಂದು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನಮ್ಮಲ್ಲಿ ಯಾವುದೇ ಬಣ ಇಲ್ಲ, ಕಾಂಗ್ರೆಸ್ ಬಣವೇ ಬಣ ಅಷ್ಟೇ: ಸಚಿವ ಬೋಸರಾಜು

ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತಂಡ ಕೂಡಲೇ ಇವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿತು. ಜೊತೆಗೆ ಧರ್ಮಸ್ಥಳ ಸಂಘದಿಂದ ಅಧಿಕ ಬಡ್ಡಿ ವಸೂಲಿ ಮಾಡದಂತೆ ಕೂಡಲೇ ಪತ್ರ ಬರೆಯಬೇಕು. ಇಲ್ಲಿದಿದ್ದರೆ ಇಲ್ಲಿರುವ ಕುಟುಂಬಗಳು ಮುಂದೆ ಜೀತದಾಳುಗಳಾಗಿ ಬದುಕಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಆಗ್ರಹಿಸಿದರು. ಬಳಿಕ ಮಡಿಕೇರಿಗೆ ಆಗಮಿಸಿದ ತಂಡ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಈ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿತು. ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ತಿಳಿಸಿತು.

click me!