ಟ್ರಾಫಿಕ್ ತಪ್ಪಿಸಿ ಹಳದಿ ಮೆಟ್ರೋ ಬಳಸಿ, ಉದ್ಯೋಗಿಗಳಿಗೆ ಇನ್ಫೋಸಿಸ್ ಸೂಚನೆ

Published : Aug 12, 2025, 07:09 PM IST
lucknow metro

ಸಾರಾಂಶ

ಬೆಂಗಳೂರಿನಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಹಳದಿ ಮೆಟ್ರೋ ಮಾರ್ಗವನ್ನು ಬಳಸಲು ಇನ್ಫೋಸಿಸ್ ತನ್ನ ಉದ್ಯೋಗಿಗಳನ್ನು ಪ್ರೋತ್ಸಾಹಿಸುತ್ತಿದೆ. ELCITA ಫೀಡರ್ ಶಟಲ್‌ಗಳು ಮೆಟ್ರೋ ನಿಲ್ದಾಣದಿಂದ ಇನ್ಫೋಸಿಸ್ ಕಚೇರಿಗಳಿಗೆ ಸಂಪರ್ಕ ಕಲ್ಪಿಸುತ್ತವೆ.

ಬೆಂಗಳೂರು: ಆಗಸ್ಟ್ 10 ರಂದು ಬೆಂಗಳೂರಿಗರ ಬಹುದಿನಗಳ ಕನಸು ನನಸಾಗಿತ್ತು. ಬಹುನಿರೀಕ್ಷಿತ ಹಳದಿ ಮೆಟ್ರೋ ಮಾಡರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಲೋಕಾರ್ಪಣೆ ಮಾಡಿದ್ದರು. ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗಲು ಇನ್ಫೋಸಿಸ್ ತನ್ನ ಉದ್ಯೋಗಿಗಳನ್ನು ಹೊಸ ಹಳದಿ ಮೆಟ್ರೋ ಮಾರ್ಗವನ್ನು ಬಳಸಲು ಪ್ರೋತ್ಸಾಹಿಸಿದೆ. ಸಂಸ್ಥೆಯು ಕಳುಹಿಸಿದ ಆಂತರಿಕ ಇಮೇಲ್‌ನಲ್ಲಿ, ವಿಶೇಷವಾಗಿ ಪೀಕ್ ಅವಧಿಯಲ್ಲಿ ಈ ಮಾರ್ಗವನ್ನು “ದಕ್ಷ” ಎಂದು ವರ್ಣಿಸಿ, ಟ್ರಾಫಿಕ್-ಮುಕ್ತ ಪ್ರಯಾಣಕ್ಕೆ ಶಿಫಾರಸು ಮಾಡಲಾಗಿದೆ.

ELCITA ನಿರ್ವಹಿಸುವ ಫೀಡರ್ ಶಟಲ್‌ಗಳು ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದಿಂದ ಎಲೆಕ್ಟ್ರಾನಿಕ್ಸ್ ಸಿಟಿ ಹಾಗೂ ಇತರ ಸ್ಥಳಗಳಲ್ಲಿರುವ ಇನ್ಫೋಸಿಸ್ ಉಪಕಚೇರಿಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಈ ಶಟಲ್‌ಗಳ ಸಮಯವನ್ನು ರೈಲು ಆಗಮನಗಳಿಗೆ ಹೊಂದುವಂತೆ ಪೀಕ್ ಅವಧಿಯಲ್ಲಿ ನಿಗದಿಪಡಿಸಲಾಗಿದೆ. ಮೆಟ್ರೋ ನಿಲ್ದಾಣದ ನಿರ್ಗಮನದಿಂದ ಸ್ಕೈವಾಕ್ ನೇರವಾಗಿ ಇನ್ಫೋಸಿಸ್ ಮೆಟ್ರೋ ಪ್ಲಾಜಾಗೆ ಕೊಂಡೊಯ್ಯುತ್ತದೆ. ಅಲ್ಲಿ ನೌಕರರು ಕ್ಯಾಂಪಸ್ ಪ್ರವೇಶಿಸಲು ತಮ್ಮ ಗುರುತಿನ ಚೀಟಿಗಳನ್ನು ತೋರಿಸಬೇಕಾಗುತ್ತದೆ.

ಮೊದಲ ದಿನವೇ ಓಡಾಡಿದ 56 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು!

ಹಳದಿ ಮೆಟ್ರೋ ಮಾರ್ಗದ ಉದ್ಘಾಟನೆಯ ಮೊದಲ ದಿನವೇ ಮೂರು ರೈಲುಗಳು ಸಂಪೂರ್ಣ ಭರ್ತಿಯಾಗಿ ಸಂಚರಿಸಿದ್ದು, ಹೊಸ ಮಾರ್ಗದಲ್ಲಿ ಪ್ರಯಾಣಿಸಿದ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ರಾತ್ರಿ 9 ಗಂಟೆಯವರೆಗೆ ಸುಮಾರು 56 ಸಾವಿರಕ್ಕೂ ಹೆಚ್ಚು ಮಂದಿ ಈ ಮಾರ್ಗದಲ್ಲಿ ಸಂಚರಿಸಿದ್ದಾರೆ. ಬೆಳಗ್ಗೆ 6.30ಕ್ಕೆ ಆರ್‌.ವಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಚೀನಾದ ಸಿಆರ್‌ಆರ್‌ಸಿ ಕಂಪನಿ ಪೂರೈಸಿದ ರೈಲು ಸಂಚಾರ ಆರಂಭವಾಯಿತು. ಬೊಮ್ಮಸಂದ್ರ ದಿಕ್ಕಿನಿಂದ ತಿತಾಘರ್‌ನಲ್ಲಿ ತಯಾರಾದ ರೈಲು ಹೊರಟಿತು. ಹೊಸ ಮಾರ್ಗ ಮತ್ತು ಹೊಸ ಮಾದರಿಯ ರೈಲಿನಲ್ಲಿ ಪ್ರಯಾಣಿಸಲು ಹಲವರು ಕುತೂಹಲದಿಂದ ಬಂದಿದ್ದರು. ವಿಶೇಷವಾಗಿ ಎಲೆಕ್ಟ್ರಾನಿಕ್‌ ಸಿಟಿಗೆ ದಿನನಿತ್ಯ ಪ್ರಯಾಣಿಸುವ ಐಟಿ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೈಲಿಗೆ ಏರಿದರು. ಬೆಳಗ್ಗೆ ಮತ್ತು ಸಂಜೆ ಪೀಕ್ ಅವಧಿಯಲ್ಲಿ ದಟ್ಟಣೆ ಹೆಚ್ಚಿತ್ತು. ಅನೇಕರು ಹೊಸ ರೈಲು ಮತ್ತು ನಿಲ್ದಾಣಗಳ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದರು.

ಹಸಿರು-ಹಳದಿ ಮಾರ್ಗಗಳ ಇಂಟರ್‌ಚೇಂಜ್‌ ಕೇಂದ್ರವಾಗಿ ಆರ್‌.ವಿ.ರಸ್ತೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಹಸಿರು ಮಾರ್ಗದಿಂದ ಬರುವವರು ಇಲ್ಲಿ ಇಳಿದು ಹಳದಿ ಮಾರ್ಗಕ್ಕೆ ಬದಲಾಯಿಸುತ್ತಿದ್ದರು. ಹಳದಿ ಮಾರ್ಗಕ್ಕೆ 3ನೇ ಪ್ಲಾಟ್‌ಫಾರ್ಮ್‌ ಮೂಲಕ ಪ್ರವೇಶ ನೀಡಲಾಗುತ್ತಿದ್ದು, ಭದ್ರತಾ ಸಿಬ್ಬಂದಿ ಮಾರ್ಗದರ್ಶನ ಮಾಡುತ್ತಿದ್ದರು.

ರೈಲು ಕೊರತೆಯ ತೊಂದರೆ

ಹೊಸ ಮಾರ್ಗದಲ್ಲಿ ಪ್ರಯಾಣಿಕರು 25-30 ನಿಮಿಷಗಳವರೆಗೆ ರೈಲು ಬರುವ ನಿರೀಕ್ಷೆಯಲ್ಲಿ ಕಾದು ನಿಂತರು. ಎಲೆಕ್ಟ್ರಾನಿಕ್‌ ಸಿಟಿ, ಬೊಮ್ಮಸಂದ್ರ, ಜಯದೇವ, ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಈ ಸಮಸ್ಯೆ ಎದುರಾಯಿತು. “ಇನ್ನಷ್ಟು ರೈಲುಗಳನ್ನು ಶೀಘ್ರ ಸೇರ್ಪಡೆ ಮಾಡಬೇಕು, ನಿಲ್ದಾಣಗಳಲ್ಲಿ ಆಸನ ವ್ಯವಸ್ಥೆ ಕಲ್ಪಿಸಬೇಕು” ಎಂದು ಪ್ರಯಾಣಿಕ ಮಧುಕುಮಾರ್‌ ಆಗ್ರಹಿಸಿದರು.

ಪಿಸಿಡಿ ವ್ಯವಸ್ಥೆ ಇಲ್ಲದೆ ಅಸಮಾಧಾನ

ಹಳದಿ ಮಾರ್ಗದಲ್ಲಿಯೂ ಹಳಿ ಮತ್ತು ಪ್ಲಾಟ್‌ಫಾರ್ಮ್‌ ನಡುವೆ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ (PCD) ಅಳವಡಿಸಿಲ್ಲ. ಬಿಎಂಆರ್‌ಸಿಎಲ್‌ ಸುರಕ್ಷತೆಗಾಗಿ ಪಿಸಿಡಿ ಅಳವಡಿಸಲಾಗುತ್ತದೆ ಎಂದು ಪೂರ್ವದಲ್ಲಿ ತಿಳಿಸಿದ್ದರೂ, ಇದೀಗ ಅದು ಕಾಣದಿರುವುದರಿಂದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸ ರೈಲಿನ ವಿಶೇಷತೆಗಳು

ಹಳದಿ ಮಾರ್ಗದ ಹೊಸ ರೈಲಿನಲ್ಲಿ ಡಿಜಿಟಲ್‌ ಬೋರ್ಡ್‌ಗಳಿದ್ದು, ಎಲ್ಲಾ ನಿಲ್ದಾಣಗಳ ಮಾಹಿತಿ ತೋರಿಸಲಾಗುತ್ತದೆ. ಸದ್ಯದ ನಿಲ್ದಾಣ, ಮುಂದಿನ ಮತ್ತು ಹಿಂದಿನ ನಿಲ್ದಾಣಗಳ ವಿವರಗಳು ಸ್ಪಷ್ಟವಾಗಿ ಪ್ರದರ್ಶವಾಗುತ್ತವೆ. ಜಾಹೀರಾತು ಮತ್ತು ಸೂಚನೆಗಳಿಗಾಗಿ ಪ್ರತ್ಯೇಕ ಡಿಜಿಟಲ್‌ ಬೋರ್ಡ್‌ಗಳಿವೆ. ಮೊಬೈಲ್‌ ಚಾರ್ಜಿಂಗ್‌ ಪೋರ್ಟ್‌ ಹಾಗೂ ಯುಎಸ್‌ಬಿ ಸೌಲಭ್ಯ, ಸುಧಾರಿತ ಸಿಸಿ ಕ್ಯಾಮೆರಾ ಮತ್ತು ಹ್ಯಾಂಡಲ್‌ಗಳು ಅಳವಡಿಸಲಾಗಿದೆ.

PREV
Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?