'ಸಿದ್ಧರಾಮಯ್ಯ ಅವರೇ ಸ್ವಾಭಿಮಾನ ಎಲ್ಲೋಯ್ತ, ಗುಲಾಮಗಿರಿ ಏನು ಅಂತಾ ಗೊತ್ತಾಯ್ತಾ?' ಸಿಎಂಗೆ ತಿವಿದ ಸಿಟಿ ರವಿ!

Published : Aug 12, 2025, 11:00 AM IST
ct ravi

ಸಾರಾಂಶ

ಸಚಿವ ಕೆ.ಎನ್. ರಾಜಣ್ಣ ಅವರ ವಜಾಗೆ ಸಿ.ಟಿ. ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಸ್ವಾಭಿಮಾನವನ್ನು ಪ್ರಶ್ನಿಸಿದ ರವಿ, ರಾಜಣ್ಣ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಜಾತಿ ತಾರತಮ್ಯದ ಆರೋಪವನ್ನೂ ಮಾಡಿದ್ದಾರೆ.

ಬೆಂಗಳೂರು (ಆ.12): ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಬಿಜೆಪಿ ನಾಯಕ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೆಂಗಲ್‌ ಗೇಟ್‌ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ "ಸ್ವಾಭಿಮಾನ"ದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ನಾನು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳೋದಕ್ಕೆ ಇಷ್ಟ ಪಡ್ತೀನಿ. ಎಲ್ಲಿ ಹೋಯ್ತು ನಿಮ್ಮ ಸ್ವಾಭಿಮಾನ . ನೀವು ಮಾತು ಎತ್ತಿದ್ರೆ ಬಿಜೆಪಿಯಲ್ಲಿ ಗುಲಾಮಗಿರಿ ಇದೆ ಹೈ ಕಮಾಂಡ್ ಪ್ರಶ್ನೆ ಮಾಡೋದಕ್ಕೆ ಆಗೋದಿಲ್ಲ ಅಂತಾ ಹೇಳ್ತಾ ಇದ್ರಿ. ಈಗ ನೀವು ಏನ್ ಮಾಡಿದ್ರಿ . ನಿಮ್ಮ ಹಿಂಬಾಲಕನನ್ನು‌ ಕಾಪಾಡಿಕೊಳ್ಳೋದಕ್ಕೆ ಆಗಲಿಲ್ಲ. ಇದಕ್ಕೆ ಗುಲಾಮಗಿರಿ ಅಂತಾರೆ ಎಂದು ಹೇಳಿದ್ದಾರೆ.

ರಾಜಣ್ಣ ಇದುವರೆಗೂ ಹೆಚ್ಚು ಮಾತನಾಡಿರೋದು ನಿಮ್ಮ ಪರವಾಗಿಯೇ. ಚುನಾವಣೆ ನಡೆದಾಗ ಕೆಲಸ ಮಾಡೋದು‌ ಯಾರು ? ಅಧಿಕಾರದಲ್ಲಿ ಇದ್ದೊರು ಯಾರು ? ರಾಜ್ಯ ಸರ್ಕಾರದ ನೌಕರರೇ ಚುನಾವಣೆಯಲ್ಲಿ ಕೆಲಸ ಮಾಡೋದು. ಅಕ್ರಮ ನಡೆದಿರೋದು ನಿಜವಾಗಿದ್ರೆ ಅದಕ್ಕೆ ಹೊಣೆ ರಾಜ್ಯ ಸರ್ಕಾರ ಹೊಣೆ. ರಾಜಣ್ಣ ಈ ಪ್ರಶ್ನೆ ಎತ್ತಿದ್ದು ಇದಕ್ಕೆ ಉತ್ತರ ಕೊಡಲು ಆಗದೆ ಅವರನ್ನು ವಜಾ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿ.ಟಿ. ರವಿ ಅವರು ಕಾಂಗ್ರೆಸ್‌ನಲ್ಲಿ ಜಾತಿ ತಾರತಮ್ಯವಿದೆ ಎಂದು ಆರೋಪಿಸಿದ್ದಾರೆ. "ರಾಜಣ್ಣ ಎಸ್ಟಿ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಅವರನ್ನು ವಜಾ ಮಾಡಲಾಗಿದೆ. ಕೆ.ಜೆ. ಜಾರ್ಜ್‌ ಅವರ ಮೇಲೆ ಸ್ಮಾರ್ಟ್‌ ಮೀಟರ್ ಹಗರಣದ ಆರೋಪ ಬಂದಾಗ ಯಾವುದೇ ಕ್ರಮ ಕೈಗೊಂಡಿಲ್ಲ. ಜಾರ್ಜ್ ಅವರು ಕೇಳಿದ್ದಕ್ಕಿಂತ ಹೆಚ್ಚು ಕಪ್ಪಕಾಣಿಕೆ ಕಳುಹಿಸುತ್ತಾರೆ ಎಂಬ ವದಂತಿ ಇದೆ. ಆದರೆ, ರಾಜಣ್ಣ ಸತ್ಯ ಹೇಳಿದ್ದಕ್ಕೆ ಬಲಿ ತೆಗೆದುಕೊಂಡಿದ್ದಾರೆ" ಎಂದು ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಲ್ಮೀಕಿ ನಿಗಮದ ಹಣ ವರ್ಗಾವಣೆಯಾದಾಗ ಸಚಿವ ನಾಗೇಂದ್ರ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಏಕೆ ಸೂಚಿಸಲಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ. ರಾಜಕೀಯದಲ್ಲಿ ಷಡ್ಯಂತ್ರ, ತಂತ್ರ ಇರುತ್ತೆ, ಆದರೆ ಇದು ತಪ್ಪು ಎಂದು ರವಿ ಖಂಡಿಸಿದ್ದಾರೆ.

ಘಟನೆಯ ಹಿನ್ನೆಲೆ: ರಾಜಣ್ಣ ಅವರು ಇತ್ತೀಚೆಗೆ 'ಮತಗಳ್ಳತನ ಆರೋಪ ಮಾಡಲು ನಾಚಿಕೆಯಾಗಬೇಕು' ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್, ಅವರನ್ನು ಸಂಪುಟದಿಂದ ವಜಾ ಮಾಡಿದೆ. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

PREV
Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ