ಸರ್ಕಾರ ಅನುದಾನ ನೀಡುವವರೆಗೆ ಪಾಲಿಕೆಯ ವಿವಿಧ ಅಭಿವೃದ್ಧಿ ಯೋಜನೆಗೆ ಮೀಸಲಿಟ್ಟಅನುದಾನವನ್ನು ಮರು ಹೊಂದಾಣಿಕೆ ಮಾಡಿಕೊಂಡು ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡಲಾಗುತ್ತದೆ.
ಬೆಂಗಳೂರು [ಸೆ.01]: ಇಂದಿರಾ ಕ್ಯಾಂಟೀನ್‌ಗೆ ಸರ್ಕಾರ ಅನುದಾನ ನೀಡುವವರೆಗೆ ಪಾಲಿಕೆಯ ಹಣದಲ್ಲಿ ನಿರ್ವಹಣೆ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.
ಶನಿವಾರ ನಡೆದ ವಿಷಯಾಧಾರಿತ ಕೌನ್ಸಿಲ್ ಸಭೆಯಲ್ಲಿ ಬಿಬಿಎಂಪಿಯ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ರಾಜ್ಯ ಸರ್ಕಾರದ ಪೂರಕ ಬಜೆಟ್‌ನಲ್ಲಿ ಅನುದಾನ ಒದಗಿಸುವುದಕ್ಕೆ ಮನವಿ ಸಲ್ಲಿಸುವುದರ ಜತೆಗೆ ಸರ್ಕಾರ ಅನುದಾನ ನೀಡುವವರೆಗೆ ಪಾಲಿಕೆಯ ವಿವಿಧ ಅಭಿವೃದ್ಧಿ ಯೋಜನೆಗೆ ಮೀಸಲಿಟ್ಟಅನುದಾನವನ್ನು ಮರು ಹೊಂದಾಣಿಕೆ ಮಾಡಿಕೊಂಡು ಬಳಕೆ ಮಾಡುವುದಕ್ಕೆ ಬಿಬಿಎಂಪಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
undefined
ಈ ವೇಳೆ ಮಧ್ಯೆ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಇಂದಿರಾ ಕ್ಯಾಂಟಿನ್ ಬಗ್ಗೆ ತಮ್ಮ ವಿರೋಧವಿಲ್ಲ. ಆದರೆ, ಇಂದಿರಾ ಕ್ಯಾಂಟಿನ್ ಯೋಜನೆಯನ್ನು ಆರಂಭಿಸಿದ್ದು ರಾಜ್ಯ ಸರ್ಕಾರ. ಹೀಗಾಗಿ ಸರ್ಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೋರಬೇಕು.
ಈ ಹಿಂದಿನ ಆಯುಕ್ತರು ಮೂರು ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಅದಕ್ಕೆ ಆಗಿನ ಸರ್ಕಾರ ಸ್ಪಂದಿಸಿಲ್ಲ. ಈವರೆಗೆ ಸರ್ಕಾರದಿಂದ ಬರಬೇಕಾದ 94.28 ಕೋಟಿ ರು.ಅನುದಾನ ಬಾಕಿ ಇದೆ. ಈಗಿನ ಸರ್ಕಾರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿ. ಅಲ್ಲದೇ ಬಿಬಿಎಂಪಿ ರಸ್ತೆ, ಬೀದಿ ದೀಪ ಹಾಗೂ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ, ಪಾಲಿಕೆಗೆ ಆದಾಯ ಕೂಡಾ ಹೆಚ್ಚಿಗೆ ಇಲ್ಲದೆ ಇರುವುದರಿಂದ ಇಂದಿರಾ ಕ್ಯಾಂಟಿನ್‌ಗೆ ಸರ್ಕಾರದಿಂದಲೇ ಅನುದಾನ ನೀಡುವಂತೆ ಕೇಳಬೇಕು ಎಂದು ಅಭಿಪ್ರಾಯಪಟ್ಟರು.