ಪಡೀಲು-ಸುಬ್ರಹ್ಮಣ್ಯ: 9 ನಿಲ್ದಾಣ, 20 ತಿಂಗಳಲ್ಲಿ 16.38 ಲಕ್ಷ ರೈಲು ಪ್ರಯಾಣಿಕರು!

Published : Oct 07, 2026, 09:39 AM IST
Subrahmanya road Railway Station

ಸಾರಾಂಶ

ಪಡೀಲ್-ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ಕೇವಲ 20 ತಿಂಗಳಲ್ಲಿ 16.38 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ರೈಲ್ವೆಗೆ ₹31.31 ಕೋಟಿ ಆದಾಯ ಲಭಿಸಿದೆ. ಇದರಲ್ಲಿ ಸುಬ್ರಹ್ಮಣ್ಯ ರೋಡ್ ನಿಲ್ದಾಣವು ಅತಿ ಹೆಚ್ಚು ಪ್ರಯಾಣಿಕ ದಟ್ಟಣೆ ಮತ್ತು ಆದಾಯವನ್ನು ಹೊಂದಿದೆ.

ಮಂಗಳೂರು: ಪ್ರಸಕ್ತ ಮೈಸೂರು ವಿಭಾಗಕ್ಕೆ ಸೇರಿರುವ ಮಂಗಳೂರು ಹೊರವಲಯದ ಪಡೀಲ್-ಸುಬ್ರಹ್ಮಣ್ಯ ರೋಡ್ ನಡುವಿನ ರೈಲು ಮಾರ್ಗದ ಒಂಬತ್ತು ನಿಲ್ದಾಣಗಳಲ್ಲಿ ಕೇವಲ 20 ತಿಂಗಳಲ್ಲಿ ಬರೋಬ್ಬರಿ 16.38 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ರೈಲ್ವೆಗೆ ಸುಮಾರು ₹ 31.31 ಕೋಟಿ ಪ್ರಯಾಣಿಕ ವರಮಾನ ಲಭಿಸಿದೆ. ಗ್ರಾಮೀಣ ಹಾಗೂ ಧಾರ್ಮಿಕ ಪ್ರವಾಸೋದ್ಯಮದ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುವ ಈ ರೈಲು ಕಾರಿಡಾರ್‌ನ ಮಹತ್ವವನ್ನು ಈ ಅಂಕಿಅಂಶಗಳು ಮತ್ತೊಮ್ಮೆ ಎತ್ತಿ ತೋರಿಸಿವೆ. ಈ ಸಂಗತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಮಾಹಿತಿ ಹಕ್ಕಿನಡಿ ಪಡೆದುಕೊಂಡಿದೆ.

2025ರ ಜನವರಿಯಿಂದ 2026ರ ಆಗಸ್ಟ್‌ವರೆಗಿನ ಅಂಕಿಅಂಶಗಳ ಪ್ರಕಾರ, ಬಂಟ್ವಾಳ, ನೇರಳಕಟ್ಟೆ, ಕಬಕ ಪುತ್ತೂರು, ನರಿಮೊಗರು, ಕಾಣಿಯೂರು, ಎಡಮಂಗಲ, ಕೋಡಿಂಬಾಳ, ಬಜಕರೆ ಮತ್ತು ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳು ಸೇರಿ ಒಟ್ಟು 10.51 ಲಕ್ಷ ಟಿಕೆಟ್ ಕಾಯ್ದಿರಿಸದ ಹಾಗೂ 5.87 ಲಕ್ಷ ಕಾಯ್ದಿರಿಸಿದ ಪ್ರಯಾಣಿಕರು ಸಂಚರಿಸಿದ್ದಾರೆ. ಕಾಯ್ದಿರಿಸದ ಪ್ರಯಾಣಿಕರಿಂದ ₹ 7.55 ಕೋಟಿ ಹಾಗೂ ಕಾಯ್ದಿರಿಸಿದ ಪ್ರಯಾಣಿಕರಿಂದ ₹ 23.76 ಕೋಟಿ ಆದಾಯ ಬಂದಿದೆ.

ಸುಬ್ರಹ್ಮಣ್ಯ ರೋಡ್‌ಗೆ ಸಿಂಹಪಾಲು:

ಈ ಪೈಕಿ ಸುಬ್ರಹ್ಮಣ್ಯ ರೋಡ್ ನಿಲ್ದಾಣವೇ ಅತಿ ಹೆಚ್ಚು ಪ್ರಯಾಣಿಕ ದಟ್ಟಣೆ ಹೊಂದಿದೆ. 20 ತಿಂಗಳಲ್ಲಿ 8.05 ಲಕ್ಷ ಪ್ರಯಾಣಿಕರು ಈ ನಿಲ್ದಾಣದ ಮೂಲಕ ಸಂಚರಿಸಿದ್ದು, ₹ 18.86 ಕೋಟಿ ಪ್ರಯಾಣಿಕ ವರಮಾನ ಸಂಗ್ರಹವಾಗಿದೆ. ಒಂಬತ್ತು ನಿಲ್ದಾಣಗಳ ಒಟ್ಟು ಪ್ರಯಾಣಿಕರ ಪೈಕಿ ಶೇ.49ರಷ್ಟು ಮತ್ತು ಆದಾಯದ ಪೈಕಿ ಸುಮಾರು ಶೇ.60ರಷ್ಟು ಪಾಲು ಸುಬ್ರಹ್ಮಣ್ಯ ರೋಡ್ ನಿಲ್ದಾಣದ್ದಾಗಿದೆ.

ಹೀಗಾಗಿ ಸುಬ್ರಹ್ಮಣ್ಯ ರೋಡ್ ಅನ್ನು ಟರ್ಮಿನಲ್ ನಿಲ್ದಾಣವಾಗಿ ಅಭಿವೃದ್ಧಿಪಡಿಸಿ, ಮಂಗಳೂರು ಸೇರಿದಂತೆ ಕೊಂಕಣ, ಕೇರಳ ಹಾಗೂ ತಮಿಳುನಾಡು ಭಾಗಗಳಿಗೆ ಹೆಚ್ಚಿನ ರೈಲು ಸೇವೆ ಕಲ್ಪಿಸಬೇಕೆಂಬ ಬೇಡಿಕೆಗೆ ಈ ಅಂಕಿಅಂಶಗಳು ಬಲ ನೀಡಿವೆ.

ಕಬಕ- ಪುತ್ತೂರು 2ನೇ ಸ್ಥಾನ:

ಕಬಕ- ಪುತ್ತೂರು ನಿಲ್ದಾಣದಲ್ಲಿ 5.04 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ₹ 7.59 ಕೋಟಿ ಆದಾಯ ಬಂದಿದೆ. ಇದರಲ್ಲಿ 3.64 ಲಕ್ಷ ಕಾಯ್ದಿರಿಸದ ಹಾಗೂ 1.39 ಲಕ್ಷ ಕಾಯ್ದಿರಿಸಿದ ಪ್ರಯಾಣಿಕರಿದ್ದಾರೆ. ನಿಲ್ದಾಣದಲ್ಲಿ ಸುಮಾರು 53 ಸಾವಿರ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿದ್ದು, ಒಂಬತ್ತು ನಿಲ್ದಾಣಗಳಲ್ಲೇ ಇದು ಗರಿಷ್ಠವಾಗಿದೆ.

ಬಂಟ್ವಾಳ ನಿಲ್ದಾಣದಲ್ಲಿ 2.15 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ₹4.69 ಕೋಟಿ ಆದಾಯ ಸಂಗ್ರಹವಾಗಿದೆ. ಸುಮಾರು 37,180 ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿವೆ.

ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಹಾಗೂ ಬಂಟ್ವಾಳ ಈ ಮೂರು ನಿಲ್ದಾಣಗಳಲ್ಲೇ ಒಟ್ಟು 14.25 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಒಂಬತ್ತು ನಿಲ್ದಾಣಗಳ ಒಟ್ಟು ಪ್ರಯಾಣಿಕರ ಶೇ.87ರಷ್ಟಾಗಿದೆ. ಈ ಮೂರು ನಿಲ್ದಾಣಗಳಿಂದ ₹ 31.14 ಕೋಟಿ ಆದಾಯ ಸಂಗ್ರಹವಾಗಿರುವುದು ಗಮನಾರ್ಹ.

ಸಣ್ಣ ನಿಲ್ದಾಣಗಳಲ್ಲೂ ಬೇಡಿಕೆ:

ಕಾಣಿಯೂರಿನಲ್ಲಿ 31,700, ಕೋಡಿಂಬಾಳದಲ್ಲಿ 26,600 ಹಾಗೂ ಎಡಮಂಗಲದಲ್ಲಿ 25,300 ಪ್ರಯಾಣಿಕರು ಸಂಚರಿಸಿದ್ದಾರೆ. ಬಜಕರೆ, ನೇರಳಕಟ್ಟೆ ಮತ್ತು ನರಿಮೊಗರು ನಿಲ್ದಾಣಗಳಲ್ಲಿಯೂ ಕ್ರಮವಾಗಿ 11,100, 10,100 ಹಾಗೂ 9,100 ಪ್ರಯಾಣಿಕರ ಸಂಚಾರ ದಾಖಲಾಗಿದೆ.

ಪಡೀಲ್-ಸುಬ್ರಹ್ಮಣ್ಯ ರೋಡ್ ಕಾರಿಡಾರ್‌ನಲ್ಲಿ ಪ್ರಯಾಣಿಕರ ಸಂಖ್ಯೆಯ ಏರಿಕೆಯನ್ನು ಗಮನಿಸಿ ಹೆಚ್ಚಿನ ಸ್ಥಳೀಯ ರೈಲು ಹಾಗೂ ಮೆಮು ಸೇವೆಗಳನ್ನು ಆರಂಭಿಸಬೇಕು ಎಂಬ ಬೇಡಿಕೆ ಬಲಗೊಂಡಿದೆ.

ರೈಲ್ವೆ ಇಲಾಖೆ ಈ ಭಾಗದಿಂದ ಆದಾಯ ಸಂಗ್ರಹಿಸುವುದರ ಜತೆಗೆ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಮೂಲಸೌಕರ್ಯ ಹಾಗೂ ರೈಲು ಸೇವೆಗಳನ್ನು ವಿಸ್ತರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಒತ್ತಾಯಿಸಿದೆ.

PREV
Read more Articles on
click me!

Recommended Stories

Bengaluru: ಸಂಜೆ 6ರ ನಂತರ 8ನೇ ಮೈಲಿ ಬಳಿ KSRTC ಸಿಬ್ಬಂದಿ ಮಾಡೋದೇನು? ಅಸಲಿ ಮುಖ ಬಿಚ್ಚಿಟ್ಟ ಮಹಿಳೆ
ಪೈಪ್‌ಲೈನ್ ಭೀಕರ ಸ್ಫೋಟ: ಧರೆಗುರುಳಿದ ತೆಂಗು, ಅಡಕೆ ಮರಗಳು, ಭಯದಿಂದ ಓಡಿ ಹೋದ ಜನರು