ಮಾರಕ ಕೊರೋನಾ ವೈರಸ್ ದೇಶದಲ್ಲಿ ಇದೀಗ ಅಬ್ಬರ ಆರಂಭಿಸಿದ್ದು, ದೇಶದಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ವೇಳೆ ಅಮೆರಿಕದಿಂದ ಮರಳಿದ ಇಂಜಿನಿಯರ್ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಹಾವೇರಿ [ಮಾ.15]: ವಿಶ್ವದೆಲ್ಲೆಡೆ ಜನರನ್ನು ಬೆಚ್ಚಿ ಬೀಳಿಸಿರುವ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಭಾರತ ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಮೆರಿಕದಿಂದ ಮರಳಿದ ರಾಣೆಬೆನ್ನೂರು ಮೂಲದ ಎಂಜಿನಿಯರೊಬ್ಬರು ಮೆಚ್ಚುಗೆಯ ನುಡಿಗಳನ್ನಾಡಿದ್ದು, ನಮ್ಮ ದೇಶದಲ್ಲಿ ವಹಿಸುತ್ತಿರುವ ಕಾಳಜಿ ಅಮೆರಿಕದಲ್ಲೂ ಇಲ್ಲ. ನಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದಿದ್ದಾರೆ.
ಈ ಸಂಬಂಧ ಎಲೆಕ್ಟ್ರಿಕಲ್ ಡಿಸೈನ್ ಎಂಜಿನಿಯರ್ ಆಗಿರುವ ಸುರೇಶ್ ಜಾಧವ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಕೊರೋನಾ ತಡೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಮುನ್ನೆಚ್ಚರಿಕೆ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೀನಾಕ್ಕೆ ಹೋಗಿದ್ರಾ ಎಂದಷ್ಟೇ ಕೇಳಿದ್ರು!:
‘ನಾನು ಅಮೆರಿಕದಲ್ಲಿ 8 ವಾರಗಳ ಕಾಲ ಇದ್ದೆ. ಆ ವೇಳೆ ಅಮೆರಿಕದಲ್ಲಿ 6 ಜನರು ಕೊರೋನಾ ವೈರಸ್ ತಗುಲಿ ಮೃತಪಟ್ಟಿದ್ದರು. ಆದರೂ ಅಲ್ಲಿ ರೋಗ ತಡೆಗಟ್ಟುವ ಯಾವ ಮುಂಜಾಗ್ರತಾ ಕ್ರಮವನ್ನೂ ಅನುಸರಿಸುತ್ತಿರಲಿಲ್ಲ. ಕಳೆದ 14 ದಿನಗಳ ಅವಧಿಯಲ್ಲಿ ಚೀನಾಕ್ಕೆ ಹೋಗಿದ್ದೀರಾ ಎಂದು ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ಕೇಳಿದ್ದರು. ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಈ ಬಗ್ಗೆ ವಿಚಾರಿಸಲೇ ಇಲ್ಲ. ಆದರೆ, ಬೆಂಗಳೂರು ವಿಮಾನ ನಿಲ್ದಾಣ ಸಮೀಪಿಸುತ್ತಿದ್ದಂತೆ ಸೆಲ್ಫ್ ಡಿಕ್ಲರೇಶನ್ ಫಾರ್ಮ್ ತುಂಬಲು ನೀಡಿದರು. ಅದರಲ್ಲಿ ಪ್ರಯಾಣದ ಮಾಹಿತಿ, ಹಿಂದಿನ 14 ದಿನಗಳಲ್ಲಿ ಭೇಟಿ ಕೊಟ್ಟದೇಶಗಳ ವಿವರ, ಭಾರತದಲ್ಲಿ ಉಳಿದುಕೊಳ್ಳುತ್ತಿರುವ ಸ್ಥಳದ ವಿಳಾಸ, ಸಂಪರ್ಕ ಸಂಖ್ಯೆ ಎಲ್ಲವನ್ನೂ ಪಡೆದುಕೊಂಡರು’ ಎಂದು ವಿವರ ನೀಡಿದರು.
ವಿಮಾನ ನಿಲ್ದಾಣದಲ್ಲೇ ತಪಾಸಣೆ:
‘ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆ ಆರೋಗ್ಯ ತಪಾಸಣೆ ನಡೆಸಿದರು. ದೇಹದ ಉಷ್ಣಾಂಶ ಪರೀಕ್ಷಿಸಿದರು. ಆರೋಗ್ಯದ ಬಗ್ಗೆ ವಿಚಾರಿಸಿದರು. ಕೊರೋನಾ ವೈರಸ್ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ವಿವರಿಸಿದರು. ಒಂದು ವೇಳೆ ಸೋಂಕಿನ ಲಕ್ಷಣ ಕಂಡುಬಂದರೆ ಸ್ಥಳೀಯ ಆರೋಗ್ಯ ಇಲಾಖೆ ಅಥವಾ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದರು. ಹೆಚ್ಚಿನ ಮಾಹಿತಿ ಬೇಕಿದ್ದರೆ ಯಾರನ್ನು ಸಂಪರ್ಕಿಸಬೇಕು ಎಂಬುದನ್ನೂ ಹೇಳಿದರು. ಮುಂಜಾಗ್ರತಾ ಕ್ರಮವಾಗಿ 14 ದಿನ ಸಾರ್ವಜನಿಕರಿಂದ ದೂರ ಇರುವಂತೆ ಸೂಚಿಸಿದ್ದರು. ನಿಜವಾಗಿಯೂ ನಮ್ಮ ದೇಶದಲ್ಲಿ ಜನರ ಬಗ್ಗೆ ತೋರುತ್ತಿರುವ ಕಾಳಜಿ ಬಗ್ಗೆ ಹೆಮ್ಮೆ ಎನಿಸುತ್ತಿದೆ’ ಎಂದು ಮನದಾಳದ ಮಾತು ಬಿಚ್ಚಿಟ್ಟರು.
ದೇಶದಲ್ಲಿ 100 ಜನರಿಗೆ ಸೋಂಕು, 10 ಮಂದಿ ಗುಣಮುಖ..
8 ವಾರ ಅಮೆರಿಕದಲ್ಲಿದ್ದ ಜಾಧವ್!
ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಡಿಸೈನ್ ಎಂಜಿನಿಯರ್ ಆಗಿರುವ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದವರಾದ ಸುರೇಶ ಜಾಧವ್, ಕಂಪನಿಯ ಕಾರ್ಯನಿಮಿತ್ತ 8 ವಾರಗಳ ಕಾಲ ಅಮೆರಿಕಕ್ಕೆ ಹೋಗಿದ್ದರು. ಕೆಲಸ ಮುಗಿದ ಬಳಿಕ ಮಾ.6ರಂದು ಅಮೆರಿಕದಿಂದ ಹೊರಟು ಜರ್ಮನಿಯ ಫ್ರಾಂಕ್‌ಫರ್ಟ್ ಮೂಲಕ ಮಾ.8ರಂದು ಬೆಂಗಳೂರಿಗೆ ಹಿಂತಿರುಗಿದ್ದರು. ಜಾಧವ್ ಅವರಿಗೆ ಕೊರೋನಾ ಸೋಂಕು ತಗುಲಿರುವ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ, ಅವರ ಮನೆಯಲ್ಲೇ ನಿಗಾದಲ್ಲಿ ಇರಿಸಲಾಗಿದೆ.
ನಾನು ಆರೋಗ್ಯವಾಗಿದ್ದೇನೆ
ಸದ್ಯ ನಾನು ಆರೋಗ್ಯವಾಗಿದ್ದೇನೆ. ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ. ಈ ಬಗ್ಗೆ ಅರಿವಿದ್ದರೆ ಯಾವ ಆತಂಕವೂ ಇರುವುದಿಲ್ಲ. ಮನೆಯಲ್ಲಿ ಮಗಳು ಹಾಗೂ ಇತರರೊಂದಿಗೆ ಕಾಲ ಕಳೆಯುತ್ತಿದ್ದೇನೆ. ಇನ್ನೂ ಒಂದು ವಾರ ಮನೆಯಲ್ಲಿಯೇ ಆರೋಗ್ಯ ನಿಗಾ ವಹಿಸಬೇಕಿದೆ. ದಾವಣಗೆರೆ ಆರೋಗ್ಯಾಧಿಕಾರಿಗಳು ಶನಿವಾರ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಏನಾದರೂ ಸಮಸ್ಯೆ ಇದ್ದರೆ ತಿಳಿಸುವಂತೆ ಹೇಳಿದ್ದಾರೆ. ಈ ಕಾಳಜಿ ಅಮೆರಿಕದಲ್ಲೂ ಇಲ್ಲ.
- ಸುರೇಶ್ ಜಾಧವ್, ಅಮೆರಿಕದಿಂದ ಮರಳಿದ ಎಂಜಿನಿಯರ್