ಈಗಾಗಲೇ ಭಾರತ ಹಿಂದೂರಾಷ್ಟ್ರವಾಗಿದೆ. ಈಗ ಮಾಡುವಂತಹದ್ದು ಏನಿದೆ? ಎಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿಯೂ ಆಗಿರುವ ಶ್ರೀರಾಮತೀರ್ಥ ಟ್ರಸ್ಟ್‌ನ ಸದಸ್ಯ, ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.
ಹುಬ್ಬಳ್ಳಿ (ಜ.06): ಈಗಾಗಲೇ ಭಾರತ ಹಿಂದೂ ರಾಷ್ಟ್ರವಾಗಿದೆ. ಈಗ ಮಾಡುವಂತಹದ್ದು ಏನಿದೆ? ಎಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿಯೂ ಆಗಿರುವ ಶ್ರೀರಾಮತೀರ್ಥ ಟ್ರಸ್ಟ್‌ನ ಸದಸ್ಯ, ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತವನ್ನು ಹಿಂದೂ ರಾಷ್ಟ್ರ ಮಾಡಿಯೇ ತೀರುತ್ತೇವೆ ಎಂಬ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹಾಗೂ ಬಿಜೆಪಿ ಕೆಲ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಹಿಂದುಸ್ತಾನ್ ಹಮಾರಾ ಹೈ ಎಂದು ಈಗ ಹೇಳಿಲ್ಲ. ಹಲವು ವರ್ಷಗಳ ಹಿಂದೆಯೇ ಹೇಳುತ್ತಾ ಬರಲಾಗುತ್ತಿದೆ ಎಂದರು.
ಭಾರತ ಹಿಂದೂ ರಾಷ್ಟ್ರ: ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ. ಯಾವಾಗಲೂ ಹಿಂದುಗಳಿಗೆ ಮಾತ್ರ ಇಲ್ಲಿ ಇರಲು ಅವಕಾಶವಲ್ಲ. ನಿತ್ಯ ನಾವು ಸರ್ವೇ ಜನ ಸುಖಿನೋ ಭವಂತು ಎಂದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಹೀಗೆ ಎಲ್ಲ ಜಾತಿ, ಧರ್ಮದವರು ಒಂದುಗೂಡಿ ಸುಖವಾಗಿ ಬಾಳುತ್ತಿದ್ದಾರೆ. ಭಾರತ ಹಿಂದೂ ರಾಷ್ಟ್ರ ಆಗಿರುವುದರಿಂದಲೇ ಇಲ್ಲಿ ಎಲ್ಲರೂ ಸಂತಸದಿಂದ ಬಾಳುತ್ತಿದ್ದಾರೆ. ಅದೇ ಚೀನಾ, ಪಾಕಿಸ್ತಾನಗಳಲ್ಲಿ ಈ ರೀತಿಯಾಗಿ ಎಲ್ಲ ಧರ್ಮದವರು ಕೂಡಿ ಬಾಳಲು ಆಗುತ್ತಿತ್ತೆ? ಎಂದು ಪ್ರಶ್ನಿಸಿದರು.
ಭಾರತವನ್ನು ಹಿಂದುರಾಷ್ಟ್ರ ಮಾಡಿಯೇ ತೀರುತ್ತೇವೆ: ಪ್ರಮೋದ್ ಮುತಾಲಿಕ್
ಎಚ್ಚರಿಕೆಯ ಹೆಜ್ಜೆಯಿಡಲಿ: ಹಿಂದುಗಳನ್ನು ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಶ್ರೀಗಳು, ಸರ್ಕಾರ ಕಾನೂನಿನ ಅಡಿ ಅದರದ್ದೇ ಆದ ಕಾರ್ಯ ನಿರ್ವಹಿಸುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಈ ಸಂದರ್ಭದಲ್ಲಿ ಕರಸೇವಕರ ಬಂಧಿಸಿರುವುದರಿಂದ ಜನರಲ್ಲಿ ಇಂತಹ ಭಾವನೆ ಬರುತ್ತಿದೆ. ಇಂತಹ ವಿಷಯಗಳಲ್ಲಿ ಸರ್ಕಾರವೂ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ರಾಮಮಂದಿರ ಉದ್ಘಾಟನೆ ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಶ್ರೀಗಳು, ರಾಮಮಂದಿರ ಕಟ್ಟಡ ಕೆಲವೇ ದಿನಗಳಲ್ಲಿ ನಿರ್ಮಾಣವಾಗುವಂತಹದ್ದಲ್ಲ. ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು 3-4 ವರ್ಷಗಳಾದರೂ ಬೇಕು. ಈ ವೇಳೆ ಲೋಕಸಭಾ, ವಿಧಾನಸಭಾ ಚುನಾವಣೆ ಬರುವುದು ಸಾಮಾನ್ಯ. ಇದನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರೆ ಹೇಗೆ? ಇಂತಹ ಮಾತುಗಳನ್ನು ಕೇಳಿದರೆ ಮಂದಿರ ಕಟ್ಟಲು ಹೋಗಬೇಡಿ ಎನ್ನುವ ಭಾವನೆ ವ್ಯಕ್ತವಾಗುತ್ತಿದೆ ಅಷ್ಟೇ ಎಂದರು.
ಶ್ರೀಕಾಂತ್ ಪೂಜಾರಿ ಒಬ್ಬನೇನ ಹಿಂದೂ?: ಸಚಿವ ಪರಮೇಶ್ವರ್
ಮಂತ್ರಾಕ್ಷತೆ ವಿತರಣೆ: ಶುಕ್ರವಾರ ಬೆಳಗ್ಗೆ ವಿದ್ಯಾನಗರದ ಉತ್ತರಾಧಿ ಮಠದ ಬಳಿ ಇರುವ ಆರ್.ಕೆ. ಆರ್ಚಿರ್ಡ್ ಅಪಾರ್ಟ್‌ಮೆಂಟ್‌ನಲ್ಲಿರುವ ಜಯತೀರ್ಥ ಕಟ್ಟಿ ನಿವಾಸಕ್ಕೆ ಭೇಟಿ ನೀಡಿದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಅಪಾರ್ಟಮೆಂಟ್‌ನಲ್ಲಿರುವ ಮನೆಮನೆಗೆ ತೆರಳಿ ಮಂತ್ರಾಕ್ಷತೆ ವಿತರಣೆ ಮಾಡಿದರು. ಈ ವೇಳೆ ಜಯತೀರ್ಥ ಕಟ್ಟಿ ಕುಟುಂಬದವರಿಂದ ಶ್ರೀಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಜಯ ಬಡಸ್ಕರ್, ಮಂಜುನಾಥ ಕಲಾಲ ಸೇರಿದಂತೆ ಹಲವರಿದ್ದರು.