•ಹನಿ ನೀರಿಗಾಗಿ ದಶಕಗಳ ಹೋರಾಟ..!
•ಅರೆಬೆತ್ತಲಾಗಿ ರೈತರು ಹೋರಾಟಕ್ಕೆ ಕುಳಿತರು ಆಗ್ತಿಲ್ಲ ಪ್ರಯೋಜನ..!
•ಕಾಲುವೆ ನಿರ್ಮಾಣವಾಗಿ 30 ವರ್ಷ ಕಳೆದಿರು ಹರಿದಿಲ್ಲ ನೀರು..!
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಏ.24) : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಜನರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ. ನೀರಿಗಾಗಿ ದಶಕಗಳಿಂದ ಹೋರಾಟ ನಡೆಯುತ್ತಿದ್ದರು ಸರ್ಕಾರ ಕಣ್ಣಿಟ್ಟು ನೋಡುತ್ತಿಲ್ಲ. ಅಂದು ಗುತ್ತಿಬಸವಣ್ಣ ಕಾಲುವೆ ನಿರ್ಮಾಣಕ್ಕಾಗಿ 30 ವರ್ಷಗಳ ಕಾಲ ಹೋರಾಟ ಮಾಡಿದ್ದರು. ಈಗ ಕಾಲುವೆಗೆ ನೀರು ಹರಿಸಲು ಕಳೆದ 10 ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದಾರೆ. ಆದ್ರೆ ನೀರು ಮಾತ್ರ ಸಿಕ್ಕಿಲ್ಲ. ರೊಚ್ಚಿಗೆದ್ದ ರೈತರೀಗ ಅರೆಬೆತ್ತಲೆ ಹೋರಾಟ ಕೈಗೊಂಡಿದ್ದಾರೆ..
ನೀರಿಗಾಗಿ ಅನ್ನದಾತರ ಅರೆಬೆತ್ತಲೆ ಹೋರಾಟ..!
ಬರಗಾಲ ಪ್ರದೇಶವೆಂದೇ ಗುರುತಿಸಿಕೊಂಡಿರುವ ಇಂಡಿ ತಾಲೂಕಿನ ರೈತರ ಪರಿಸ್ಥಿತಿ ಅದ್ಯಾವ ಶತೃವಿಗು ಬೇಡ ಎನ್ನುವಂತಾಗಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ಬರುವ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗೆ ಈ ಹಿಂದೆ ಸಾಕಷ್ಟು ಹೋರಾಟ ನಡೆಸಲಾಗಿತ್ತು. ಅಂದು ಕಾಲುವೆಗಾಗಿ ಹೋರಾಟ ನಡೆಸಿದ ಪರಿಣಾಮ ಕಾಲುವೆ ಏನೋ ನಿರ್ಮಾಣವಾಗಿದೆ ಆದ್ರೆ ನೀರು ಮಾತ್ರ ಹರಿದಿಲ್ಲ. ರೈತರು ಕಳೆದ ಮಾರ್ಚ್ 11 ರಿಂದ ಇಂಡಿ ತಾಲೂಕಿನ ತಾಂಬಾದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ದಶಕದಿಂದ ನಡೆಯುತ್ತಿರುವ ಹೋರಾಟಕ್ಕೆ ಸರ್ಕಾರ ಖ್ಯಾರೆ ಎನ್ನದ ಕಾರಣ ಈಗ ಮತ್ತೆ ಅನ್ನದಾತರು ರೊಚ್ಚಿಗೆದ್ದಿದ್ದಾರೆ. ಕಾಲುವೆಗೆ ನೀರು ಹರಿಸದಿದ್ರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆಡ ಕಳೆದ 44 ದಿನಗಳಿಂದ ಹೋರಾಟ ನಡೆಸುತ್ತಿರುವ ಕಾರಣ ಈಗ ಅರೆಬೆತ್ತಲೆ ಹೋರಾಟ ಆರಂಭಿಸಿದ್ದೇವೆ. ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕು. ಇಲ್ಲಾದ್ರೆ ಏಪ್ರಿಲ್ 27ಕ್ಕೆ ತಾಂಬಾ ಬಂದ್ ಮಾಡಿ ಉಗ್ರ ಹೋರಾಟ ಮಾಡುತ್ತೇವೆ ಅಂತ ಸಮಿತಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ..
undefined
ಬರದ ನಾಡಿಗೆ ಕಾಲಿಟ್ಟ ಕಾಶ್ಮೀರಿ ಆ್ಯಪಲ್: ವಿಜಯಪುರದಲ್ಲಿ ಸೇಬು ಬೆಳೆದು ಸೈ ಎನಿಸಿಕೊಂಡ ರೈತ
ಹೋರಾಟಕ್ಕಿದೆ ದಶಕಗಳ ಇತಿಹಾಸ..!
ಬರದಿಂದ ತತ್ತರಿಸಿದ ಇಂಡಿ ತಾಲೂಕನ್ನ ನೀರಾವರಿ ಮಾಡಬೇಕು ಎಂಬ ಕನಸಿನೊಂದಿಗೆ ೩೦ ವರ್ಷಗಳ ಹಿಂದೆ ಕಾಲುವೆಗಾಗಿ ಹೋರಾಟ ಶುರುವಾಗಿತ್ತು. ಗುತ್ತಿ ಬಸವಣ್ಣ ಹೋರಾಟ ಸಮಿತಿ ಹಾಗೂ ಸಾವಿರಾರು ರೈತರ ಹೋರಾಟದ ಪರಿಣಾಮ 1976 ರಿಂದ 2006 ರ ವರೆಗೆ 97 ಕಿಲೋ ಮೀಟರ್ ವರೆಗೆ ಮಾತ್ರ ಕಾಲುವೆ ಮಾಡಲಾಗಿತ್ತು. ಅದಾದ ನಂತರದಲ್ಲಿ 2006 ರಲ್ಲಿ 49 ದಿನಗಳ ಕಾಲ ಹೋರಾಟ ಮಾಡಿದ ಬಳಿಕ 2013ರಲ್ಲಿ 147 ಕಿಲೊಮೀಟರ್ ವರೆಗೆ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮಾಡಲಾಗಿದೆ. .
ಎಷ್ಟೇ ಹೋರಾಟ ಮಾಡಿದ್ರು ಕಾಲುವೆಗೆ ನೀರಿಲ್ಲ..!
2013ರಲ್ಲಿ 147 ಕೀ.ಮೀ ಕಾಲುವೆ ಮಾಡಿದ್ದೇ ಬಂತು, ಇದುವರೆಗೂ ಒಂದು ಹನಿ ನೀರು ಹರಿದಿಲ್ಲ. ಈ ಹಿಂದೆ ಹಲವು ಹೋರಾಟವಾದ ಬಳಿಕ ಕಾಲುವೆ ನಿರ್ಮಾಣವಾಗಿದ್ರೂ 2013 ರಿಂದ ಇಂದಿನ ವರೆಗೂ ನೀರು ಬಂದಿಲ್ಲ 2019 ರಲ್ಲಿ 29 ದಿನಗಳ ಕಾಲ ಹೋರಾಟ ಮಾಡಿದ್ದಾಗಲೂ ಕೇವಲ ನಾಲ್ಕು ದಿನ ಮಾತ್ರ ನೀರು ಹರಿಸಲಾಗಿತ್ತು. ಇದೀಗ ಒಂದು ತಿಂಗಳ ಕಾಲ ಸತ್ಯಾಗ್ರಹ ನಡೆಯುತ್ತಲೇ ಇದೆ. ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿ ವಲಯ ತಿರುಗಿ ಸಹ ನೋಡ್ತಿಲ್ಲ.
ಅವೈಜ್ಞಾನಿಕವಾಗಿ ಕಾಲುವೆ ನಿರ್ಮಾಣ..!
ಈ ಮೊದಲು ನಿರ್ಮಿಸಿರುವ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯು ಕೆಲವು ಕಡೆ ಅವೈಜ್ಞಾನಿಕವಾಗಿ ನಿರ್ಮಾಣವಾದ ಕಾರಣ ಕಾಲುವೆ ಕೊನೆ ಭಾಗಕ್ಕೆ ನೀರು ಬರುತ್ತಿಲ್ಲ. ಹೀಗಾಗಿ ಬಳಗಾನೂರ ಏತ ನೀರಾವರಿ ಕಾಲುವೆಗೆ ಲಿಫ್ಟ್ ನಿರ್ಮಿಸಿ ಆ ಮೂಲಕ ನೀರು ಹರಿಸಲು ರೈತರು ಆಗ್ರಹಿಸಿದ್ದಾರೆ. ಆದ್ರೆ ಅಧಿಕಾರಿಗಳು ಮತ್ತು ಈ ಭಾಗದ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಯಿಂದ ನೀರು ಬಂದಿಲ್ಲ.
ಕಾಲುವೆಗೆ ನೀರು ಬಂದ್ರೆ ರೈತರ ಜಮೀನುಗಳೇ ನಂದನವನ.!
ಕಾಲುವೆಗೆ ನೀರು ಬಂದಿದ್ದೇ ಆದಲ್ಲಿ ಇಂಡಿ ತಾಲೂಕಿನ ತಾಂಬಾ ತಾಂಬಾ, ಬನ್ನಿಹಟ್ಟಿ, ಗೊರನಾಳ, ತೆನ್ನಿಹಳ್ಳಿ, ಮಸಳಿ, ರೂಗಿ, ಜೈನೂರ, ಸಾಲೊಟಗಿ, ಶಿವಪುರ ಸೇರಿದಂತೆ 20 ಹಳ್ಳಿಗಳಿಗೆ ಅನುಕೂಲ ಆಗಲಿದೆ. ಬರ ಪ್ರದೇಶದಲ್ಲಿರುವ 25 ಸಾವಿರ ಎಕರೆ ಭೂಮಿ ನೀರಾವರಿ ಆಗಲಿದೆ. ನೀರಾವರಿ ಆದ್ರೆ ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಲಿಂಬೆ, ದಾಳಿಂಬೆ, ದ್ರಾಕ್ಷಿ, ಕಬ್ಬು ಬೆಳೆಗಳಿಗೆ ಅನುಕೂಲ ಆಗಲಿದೆ ಎಂಬುದು ರೈತರ ಮಾತು.
ಇಂಡಿ ಶಾಸಕರು ಹೇಳೋದೇನು?
ತಾಂಬಾದಲ್ಲಿ ನಡೆದ ರೈತರ ಹೋರಾಟದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರೈತರ ನಿರಂತರ ಹೋರಾಟದ ಬಗ್ಗೆ ವಿಷಾದ ವ್ಯಕ್ತ ಪಡೆಸಿರುವ ಶಾಸರು ಈ ಬಗ್ಗೆ ನಮಗೆಲ್ಲ ನೋವಿದೆ ಎಂದಿದ್ದಾರೆ. ಕೆಂಬಾವಿಯಿಂದ ನೀರು ಎತ್ತುವಳಿಯಾಗುವಲ್ಲಿ ಅಚಾತುರ್ಯ ನಡೆದಿದೆ. ಅಲ್ಲಿನ ವಿಭಾಗದವರ ವೈಫಲ್ಯಕ್ಕೆ ನೀರು ಕಾಲುವೆಗೆ ಹರಿಯದೆ ಇರೋದಕ್ಕೆ ಕಾರಣವಾಗಿದೆ ಎಂದಿದ್ದಾರೆ. ಸಧ್ಯ 8 ಮೋಟಾರುಗಳನ್ನ ಟೆಂಡರ್ ಕರೆದಿದ್ದಾರೆ. ಮುಂದಿನ ವರ್ಷದಿಂದ ಅನುಕೂಲವಾಗಲಿದೆ ಎಂದಿದ್ದಾರೆ. ರೈತರ ಹೋರಾಟ ನ್ಯಾಯಯುತವಾಗಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ತೇನೆ ಎಂದಿದ್ದಾರೆ..
ಹೋರಾಟ ಕೈ ಬಿಡುವಂತೆ ಶಾಸಕರ ಮನವಿ..!
ನೀರು ಹರಿಸುವ ಸಮಯ ಈಗಾಗಲೇ ಮುಗಿದು ಹೋಗಿದೆ. ಮುಂದಿನ ವರ್ಷದಿಂದ ಎಲ್ಲವು ಸರಿಯಾಗಲಿದೆ. ಫೆಬ್ರವರಿಯಿಂದ ಮಾರ್ಚ್ ನಲ್ಲೆ ನೀರು ಹರಿಸುವ ಸಮಯ. ಈಗ ನಾವು ಏಪ್ರೀಲ್-ಮೇ ವರೆಗೆ ಬಂದು ಬಿಟ್ಟಿದ್ದೀವಿ. ಮುಂದಿನ ಜುಲೈ ಹೊತ್ತಿಗೆ ನೀರು ಹರಿವಂತೆ ನೋಡಿಕೊಳ್ತೀವಿ. ಸಧ್ಯಕ್ಕೆ ವಸ್ತುಸ್ಥಿತಿ ಅರಿತು ಹೋರಾಟ ಕೈಬಿಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ