ಮನೆ ಕಟ್ಟದಂತೆ ಅರಣ್ಯ ಇಲಾಖೆ ಎಚ್ಚರಿಕೆ, ಬೋರಳ್ಳಿ ಗ್ರಾಮದ ಜನರ ಗೋಳು ಕೇಳುವವರು ಯಾರು?

By Suvarna News  |  First Published Apr 24, 2022, 10:05 PM IST

* ತಲೆಮಾರುಗಳಿಂದಲೂ ಇದ್ದರೂ ಸಹ ಸರ್ಕಾರ ಅವರಿಗೆ ಪಟ್ಟಾ ಕೊಡುವ ಕೆಲಸ ಮಾಡಿಲ್ಲ
* ಮನೆ ಕಟ್ಟದಂತೆ ಎಚ್ಚರಿಕೆ ಅರಣ್ಯ ಇಲಾಖೆ ಎಚ್ಚರಿಕೆ
* ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬೋರಳ್ಳಿ ಗ್ರಾಮದ ಜನರ ಗೋಳು


ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್

ಉತ್ತರಕನ್ನಡ, (ಏ.24)
: ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬೋರಳ್ಳಿ ಗ್ರಾಮದಲ್ಲಿ ವಾಸವಾಗಿರುವ ಜನರಿಗೆ ಜಾಗ, ಮನೆ, ಜಮೀನು ಎಲ್ಲವೂ ಇದ್ದು,‌‌ ಏನೂ ಇಲ್ಲದಂತಹ ಪರಿಸ್ಥಿತಿಯಿದೆ. ಹಲವು ದಶಕಗಳಿಂದ ಬೋರಳ್ಳಿ ಗ್ರಾಮದಲ್ಲಿ ಸಾಕಷ್ಟು ಕುಟುಂಬಗಳು ಅರಣ್ಯ ಪ್ರದೇಶದಲ್ಲೇ ಜೀವನ ಕಟ್ಟಿಕೊಂಡಿವೆ. 

ಗದ್ದೆ, ತೋಟ ನಿರ್ಮಿಸಿಕೊಂಡು ಕೃಷಿ ಮಾಡಿಕೊಂಡೇ ಬದುಕು ಸಾಗಿಸಿಕೊಂಡು ಬರುತ್ತಿದ್ದಾರೆ. ಆದರೆ, ತಲೆಮಾರುಗಳಿಂದಲೂ ಇದೇ ಪ್ರದೇಶದಲ್ಲೇ ವಾಸವಾಗಿದ್ದರೂ, ನೆಲೆ‌ ನಿಂತ ಜಾಗ, ಕೃಷಿ ಮಾಡುತ್ತಿರುವ ಜಮೀನು ಅವರ ಹೆಸರಿಗಿಲ್ಲ. ಈವರೆಗೂ ಕೂಡಾ ಅತಿಕ್ರಮಣದಾರರಾಗಿಯೇ ಉಳಿದುಕೊಂಡಿದ್ದು, ಸರ್ಕಾರ ಅವರಿಗೆ ಪಟ್ಟಾ ಕೊಡುವ ಕೆಲಸ ಮಾಡಿಲ್ಲ. ಹೀಗಾಗಿ ಯಾರು ಯಾವಾಗ ಬಂದು ಒಕ್ಕಲೆಬ್ಬಿಸುತ್ತಾರೋ ಎನ್ನುವ ಆತಂಕದಲ್ಲೇ ಪ್ರತಿನಿತ್ಯ ದಿನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

Latest Videos

undefined

ಉ.ಕ. ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಮಂಗನ ಕಾಯಿಲೆ

ಗುಡಿಸಲುಗಳಲ್ಲಿ ಬದುಕುತ್ತಿದ್ದವರು ಚಿಕ್ಕದಾಗಿ ಹಂಚಿನ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಇದೀಗ ಅಂತಹ ಮನೆಗಳನ್ನು ದೊಡ್ಡದಾಗಿ ನಿರ್ಮಿಸಲು ಇಲ್ಲವೇ ರಿಪೇರಿ ಕಾರ್ಯ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಮನೆ ನಿರ್ಮಾಣಕ್ಕೆ ಮುಂದಾದಲ್ಲಿ ಆಗಮಿಸುವ ಸಿಬ್ಬಂದಿ ಮನೆ ಕಟ್ಟದಂತೆ ಎಚ್ಚರಿಕೆ ನೀಡಿ ತೆರಳುತ್ತಾರೆ. ಹೀಗಾಗಿ ಹುಟ್ಟಿ ಬೆಳೆದ ಜಾಗದಲ್ಲೇ ನಮಗೆ ಮನೆ ಕಟ್ಟಿಕೊಳ್ಳುವುದು ಸಾಧ್ಯವಿಲ್ಲದಂತಾಗಿದ್ದು, ಬೇರೆ ಜಾಗವನ್ನೂ ಕೊಡದಿರುವುದರಿಂದ ಸಂಕಷ್ಟ ಎದುರಿಸುವಂತಾಗಿದೆ ಅನ್ನೋದು ಗ್ರಾಮಸ್ಥರ ನೋವು. 

ಇನ್ನು ಅಚವೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೋರಳ್ಳಿ ಗ್ರಾಮದಲ್ಲಿ ಸುಮಾರು 350ಕ್ಕೂ ಅಧಿಕ ಮನೆಗಳಿವೆ. ಸಿದ್ದಿ, ಮುಕ್ರಿ ಸೇರಿದಂತೆ ಸಾಕಷ್ಟು ಸಮುದಾಯಗಳ ಜನರು ಅತಿಕ್ರಮಣ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಇದುವರೆಗೆ ಸರ್ಕಾರ ಕೆಲವರಿಗೆ ಮಾತ್ರ ಪಟ್ಟಾ ಕೊಟ್ಟಿದೆ. ಅದರಲ್ಲೂ ಸಿದ್ದಿ ಜನಾಂಗಕ್ಕೆ ಇಲ್ಲಿ ಹೆಚ್ಚು ಪಟ್ಟಾ ಕೊಡಲಾಗಿದೆ. ಆದರೆ ಎಸ್ಸಿ ಸಮುದಾಯದ ಸುಮಾರು 40 ಮನೆಗಳಿಗೆ ಇನ್ನೂ ಪಟ್ಟಾ ಕೊಟ್ಟಿಲ್ಲ. ಸಮರ್ಪಕ ದಾಖಲೆಗಳನ್ನು ಸಲ್ಲಿಸಿದ್ದರೂ ಹಲವು  ಕಾರಣ ನೀಡಿ  ಪಟ್ಟಾ ನೀಡದೇ ನಿರ್ಲಕ್ಷ್ಯವಹಿಸಲಾಗಿದೆ ಅನ್ನೋದು ಗ್ರಾಮಸ್ಥರ ಅಳಲು. 

ರೇಷನ್, ಶೌಚಾಲಯದಂತಹ ಕೆಲವು ಸೌಲಭ್ಯಗಳನ್ನ ಹೊರತುಪಡಿಸಿ ಸರ್ಕಾರದ ಯಾವುದೇ ಸೌಲಭ್ಯಗಳೂ ಸಹ ಇಲ್ಲಿನ ಕುಟುಂಬಗಳಿಗೆ ಸಿಗುತ್ತಿಲ್ಲ. ಇನ್ನು ಗ್ರಾಮ ವಾಸ್ತವ್ಯಕ್ಕೆ ಬಂದಿದ್ದ  ಕಂದಾಯ ಸಚಿವರು ಉತ್ತರಕನ್ನಡ ಜಿಲ್ಲೆಯಲ್ಲಿ ಶೇಕಡಾ 80 ರಷ್ಟು ಅರಣ್ಯ ಪ್ರದೇಶ ಇರುವುದರಿಂದ ಅರಣ್ಯವಾಸಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ಸಮುದಾಯಗಳು ವಾಸಿಸುತ್ತಿರುವ ಪ್ರದೇಶವನ್ನ ಗ್ರಾಮ ಎಂದು ಘೋಷಿಸಿ ಅವರಿಗೆ ಮೂಲಭೂತ‌ ಸೌಲಭ್ಯ ಒದಗಿಸುವ ಕಾರ್ಯ ಮಾಡಲಾಗುತ್ತಿದೆ. 

ಮುಂದಿನ ದಿನಗಳಲ್ಲಿ ಜಿಲ್ಲೆಗೆ ಅನುಕೂಲವಾಗುವಂತೆ ಶಾಶ್ವತ ಪರಿಹಾರವನ್ನ ಒದಗಿಸಲು ಪ್ರಯತ್ನಿಸುತ್ತೇವೆ ಎಂದು ಜಾರಿಕೊಂಡಿದ್ದಾರೆ. ಖುದ್ದು ಕಂದಾಯ ಸಚಿವರು ಗ್ರಾಮ ವಾಸ್ತವ್ಯ ಮಾಡಿ ಆಶ್ವಾಸನೆ ನೀಡಿದರೇ ಹೊರತು ಇವರ ಸಮಸ್ಯೆಗೆ ಪರಿಹಾರ ಸಿಗುವ ಭರವಸೆ ಮಾತ್ರ ಮರಿಚಿಕೆಯಾಗಿದ್ದು ಹುಟ್ಟಿಂದಿನಿಂದ ಅರಣ್ಯವೇ ಮನೆ ಎನ್ನುವಂತೆ ಜೀವನ ಸಾಗಿಸುತ್ತಿರುವ ಅರಣ್ಯವಾಸಿಗಳಿಗೆ ಶೀಘ್ರದಲ್ಲೇ ಪಟ್ಟಾ ಒದಗಿಸುವ ಕಾರ್ಯವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಅತಿಕ್ರಮಣದಾರರ ಸಂಕಷ್ಟಕ್ಕೆ ನೆರವಾಗುತ್ತಾ ಅನ್ನೋದನ್ನ ಕಾದುನೋಡಬೇಕು. 

click me!