ಇತಿಹಾಸ ಹೊಂದಿದ ದೊಡ್ಡ ಸಮುದಾಯದ ಪೀಠಾಧಿಪತಿಗಳು ಸಮಾಜದ ಹಿತ, ಕಳಕಳಿಯನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಶ್ರೀಗಳ ಹೋರಾಟಕ್ಕೆ ಸರ್ಕಾರ ಶೀಘ್ರವಾಗಿ ಸ್ಪಂದಿಸಬೇಕಿತ್ತು. ಎಲ್ಲೋ ಒಂದುಕಡೆ ವಿಳಂಬವಾಗಿದೆ ಎಂಬ ನೋವು ಇದೆ: ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ(ಫೆ.26): ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಪಂಚಮಸಾಲಿ ಲಿಂಗಾಯತ ಕೂಡಲಸಂಗಮ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಅವರು ಬೆಂಗಳೂರಿನಲ್ಲಿ ಹಮ್ಮಿಕೊಂಡ ಧರಣಿ ಸ್ಥಳಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಶನಿವಾರ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ, ಇತಿಹಾಸ ಹೊಂದಿದ ದೊಡ್ಡ ಸಮುದಾಯದ ಪೀಠಾಧಿಪತಿಗಳು ಸಮಾಜದ ಹಿತ, ಕಳಕಳಿಯನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಶ್ರೀಗಳ ಹೋರಾಟಕ್ಕೆ ಸರ್ಕಾರ ಶೀಘ್ರವಾಗಿ ಸ್ಪಂದಿಸಬೇಕಿತ್ತು. ಎಲ್ಲೋ ಒಂದುಕಡೆ ವಿಳಂಬವಾಗಿದೆ ಎಂಬ ನೋವು ಇದೆ.
ಶ್ರೀಗಳ ಹೋರಾಟಕ್ಕೆ ಸರ್ಕಾರ ಈಗಲಾದರೂ ಸ್ಪಂದಿಸಬೇಕು. ಸ್ಪಂದಿಸದಿದ್ದರೆ ಸರ್ಕಾರಕ್ಕೆ ಹೃದಯ ಇಲ್ಲ ಎನ್ನುವ ಭಾವನೆ ಬರುತ್ತದೆ. ಸರ್ಕಾರ ಎಚ್ಚೆತ್ತುಕೊಂಡು ಶ್ರೀಗಳ ಅಪೇಕ್ಷೆ ಹಾಗೂ ಸಮಾಜದ ಅಪೇಕ್ಷೆಗೆ ಸಹಾಯ, ಸಹಕಾರ ಮಾಡಬೇಕು ಎಂದು ಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.
ಪಂಚಮಸಾಲಿಗೆ ಮೀಸಲಾತಿ ಕೊಡದಿದ್ದರೆ ಬಿಜೆಪಿಗೆ ದೊಡ್ಡ ನಷ್ಟ: ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
ಸಮಾಜದ ಹಿತವನ್ನು ಇಟ್ಟುಕೊಂಡು ಕಳಕಳಿ ಮೂಲಕ ಶ್ರೀಗಳು ಎರಡ್ಮೂರು ವರ್ಷಗಳಿಂದ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2 ಎ ಮೀಸಲಾತಿ ಸಿಗಬೇಕು. ಸಮಾಜದಲ್ಲಿನ ಬಡಜನರಿಗೆ ಅನುಕೂಲವಾಗಬೇಕು. ಎಲ್ಲ ರಂಗದಲ್ಲಿಯೂ ಸಹಾಯ ಸಿಗಬೇಕು ಎಂಬ ಸದಾಶಯ ಇಟ್ಟುಕೊಂಡು ದೊಡ್ಡ ಹೋರಾಟ ಮಾಡುತ್ತಲೆ ಬಂದಿದ್ದಾರೆ. ಶ್ರೀಗಳ ನೇತೃತ್ವದಲ್ಲಿ ನಡೆದ ಮೀಸಲಾತಿ ಹೋರಾಟಕ್ಕೆ ಯಶಸ್ವಿ ಸಿಗಲಿ. ಶ್ರೀಗಳ ಕನಸು ಸನಸಾಗಲಿ. ವಿಶೇಷವಾಗಿ ಪಂಚಮಸಾಲಿ ಲಿಂಗಾಯತ ಬಡಜನರಿಗೆ ಅನುಕೂಲವಾಗಲಿ. ಶ್ರೀಗಳ ಕನಸು ನನಸು ಮಾಡಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗದವರೆಗೆ ಶ್ರೀಗಳ ಮೀಸಲಾತಿಗಾಗಿ ಪಾದಯಾತ್ರೆ ಮಾಡಿದ್ದಾರೆ. ಪಾದಯಾತ್ರೆಯಲ್ಲಿ ನಾನು ಸಹ ಭಾಗಿಯಾಗಿ ನೈತಿಕ ಬೆಂಬಲ ಸೂಚಿಸಿದ್ದೇನೆ. ಈಗಲೂ ಸಹ ಶ್ರೀಗಳ ಧರಣಿ ಹೋರಾಟಕ್ಕೆ ನನ್ನ ಸಂಪೂರ್ಣ ನೈತಿಕ ಬೆಂಬಲ ಇದೆ. ಮುಂದೆಯೂ ಇರುತ್ತದೆ. ನಮ್ಮ ಪಕ್ಷದ ಎಲ್ಲ ಮುಖಂಡರು ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಲ್ಲಿ ಪಕ್ಷಪಾತ ಬೇಡ. ಒಂದು ಸಮುದಾಯಕ್ಕೆ ಒಳ್ಳೆಯದು ಆಗುತ್ತಿದ್ದರೆ, ಎಲ್ಲರೂ ಭಾಗಿಯಾಗಿ ಬೆಂಬಲ ಸೂಚಿಸಬೇಕಾಗುತ್ತದೆ. ಹೀಗಾಗಿ ಶ್ರೀಗಳ ಹೋರಾಟಕ್ಕೆ ನನ್ನ ನೈತಿಕ ಬೆಂಬಲ ಈಗೂ ಇದೆ, ಮುಂದೆಯೂ ಇರುತ್ತದೆ. ಶ್ರೀಗಳ ಜೊತೆ ಯಾವತ್ತಿಗೂ ಇರುತ್ತೇನೆ ಎಂದು ಹೇಳಿದರು.
ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ, ಇಂಡಿಯ ಪಂಚಮಸಾಲಿ ಸಮಾಜದ ಹಿರಿಯರಾದ ಪ್ರಭಾಕರ ಬಗಲಿ, ಶಾಂತುಗೌಡ ಬಿರಾದಾರ, ನೀಲಕಂಠಗೌಡ ಪಾಟೀಲ, ರಾಜುಗೌಡ ಪಾಟೀಲ, ರವಿಗೌಡ ಪಾಟೀಲ, ಅಯ್ಯನಗೌಡ ಪಾಟೀಲ, ಶಿವಪುತ್ರ ಮಲ್ಲೆವಾಡಿ, ರಾಜು ಕುಲಕರ್ಣಿ ಇಂಡಿಯ ಇತರ ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.