ರಾಮನಗರದ ಪಟೇಲ್ ಸಮೖಹ ಸಂಸ್ಥೆ ಆವರಣದಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ. ವಿಚಾರ-ಚಿಂತನೆಗಳ ವಿನಿಮಯ. ಪೋಷಕರಿಗೆ ಕಿವಿಮಾತು, ಮಕ್ಕಳಿಗೆ ಮಾರ್ಗದರ್ಶನ.
ರಾಮನಗರ(ಆ.16] ವಿದ್ಯಾರ್ಥಿ ಜೀವನ ಬೇರುಗಳನ್ನು ಆಳಕ್ಕೆ ಚಾಚಿ ಗಟ್ಟಿಯಾಗಿ ನಿಲ್ಲುವ ಕಾಲ. ಭಯ ಮತ್ತು ಕೀಳರಿಮೆ ಬಿಟ್ಟು ಪಠ್ಯದಲ್ಲಿ ಆಸಕ್ತರಾಗಿ ಯಶಸ್ವಿಯಾದರೆ ಸ್ವತಂತ್ರವಾಗಿ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಪಟೇಲ್ ಸಮೂಹ ಸಂಸ್ಥೆ ಆವರಣದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪೋಷಕರು ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮುನ್ನಡೆಯಬೇಕು. ಇಂಗ್ಲಿಷ್, ವಿಜ್ಞಾನ, ಭೂಗೋಳ ವಿಷಯಗಳು ಅರ್ಥವಾಗುವುದಿಲ್ಲವೆಂಬ ಹಿಂಜರಿಕೆ, ಪರೀಕ್ಷೆ ಭಯ ಹಾಗೂ ಗ್ರಾಮೀಣ ಪ್ರದೇಶದವನೆಂಬ ಕೀಳರಿಮೆ ಬಿಡಬೇಕು. ಧೈರ್ಯದಿಂದ ಕಲಿಕೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಹಳ್ಳಿ ಶಾಲೆಯಲ್ಲಿ ಓದಿದವರೇ ಬುದ್ಧಿವಂತರು: ಸ್ವಾತಂತ್ರ್ಯ ಹೋರಾಟಗಾರರು, ಶ್ರೇಷ್ಠ ಸಾಹಿತಿಗಳು, ವಿಜ್ಞಾನಿಗಳು, ರಾಜಕಾರಣಿಗಳು ಸೇರಿದಂತೆ ಮೊದಲಾದವರು ಹಳ್ಳಿ ಶಾಲೆಗಳಿಂದಲೇ ಬಂದವರು ಎಂಬುದನ್ನು ಮರೆಯಬಾರದು. ಹಳ್ಳಿ ಶಾಲೆಗಳಲ್ಲಿ ಓದಿದವರು ಹೆಚ್ಚು ಬುದ್ಧಿವಂತರು ಹಾಗೂ ಧೈರ್ಯ ಹೊಂದಿರುತ್ತಾರೆ. ನಾವು ಸ್ವತಂತ್ರವಾಗಿ ನಿಲ್ಲಬೇಕಾದರೆ ಪ್ರಯತ್ನ ಹೆಚ್ಚಾಗಿರಬೇಕು. ಬೇರೆಯವರು ಸ್ವಾತಂತ್ರ್ಯ ನೀಡಬಹುದು ಅದು ತುಂಬಾ ಕಾಲ ಬರುವುದಿಲ್ಲ. ನಾವು ನಮ್ಮ ಶ್ರಮ ಮತ್ತು ಶಕ್ತಿಯಿಂದ ಗಟ್ಟಿಯಾಗಿ ನಿಲ್ಲಬೇಕು. ಇದಕ್ಕೆ ವಿದ್ಯಾರ್ಥಿ ಜೀವನ ಸೂಕ್ತವಾದ ಕಾಲ ಎಂದರು.
ಸ್ವಾತಂತ್ರ್ಯದ -ಲವಾಗಿ ಸ್ವಾವಲಂಬನೆ ಸಿಕ್ಕಿದೆ: ಸ್ವಾತಂತ್ರ್ಯದ -ಲವಾಗಿ ನಮ್ಮದೇ ಆಡಳಿತ, ಅಧಿಕಾರ ಹಾಗೂ ಸ್ವಾವಲಂಬನೆ ಸಿಕ್ಕಿದೆ. ನಮ್ಮನ್ನು ಅಳುವವರು ಯಾರೂ ಇಲ್ಲ . ನಮಗೆ ಇಷ್ಟಬಂದಂತೆ ಇರಬಹುದು. ಇಷ್ಟ ಬಂದಂತೆ ಇರುವುದೆಂದರೆ ಇಚ್ಛೆ ಬಂದಂತೆ ಇರುವುದಲ್ಲ. ಸ್ವಾತಂತ್ರ್ಯ ಜತೆಗೆ ಹಕ್ಕುಗಳು ಇವೆ. ಸ್ವಾತಂತ್ರ್ಯಕ್ಕೆ ಕೊಡಬೇಕಾದ ಬೆಲೆ ಹಕ್ಕುಗಳನ್ನು ಪಾಲಿಸುವುದಾಗಿದೆ. ಅದನ್ನು ಅನುಸರಿಸುವ ಕೆಲಸವನ್ನು ನೀವು ಎಲ್ಲಿವರೆಗೆ ಚೆನ್ನಾಗಿ ಮಾಡುತ್ತೀರೊ ಅಲ್ಲಿವರೆಗೆ ಸ್ವತಂತ್ರ ಜತೆಯಲ್ಲಿ ಇರುತ್ತದೆ ಎಂದು ತಿಳಿಸಿದರು.
ಭ್ರಷ್ಟಾಚಾರದಿಂದ ದೂರ ಇರುವುದನ್ನು ಕಲಿಸಿ: ಏಷಿಯನೆಟ್ ಡಿಜಿಟಲ್‌ನ ಪ್ರಧಾನ ಸಂಪಾದಕ ಎಸ್.ಕೆ.ಶ್ಯಾಮಸುಂದರ್ ಮಾತನಾಡಿ, ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ವಿದ್ಯಾರ್ಥಿ ಜೀವನದಲ್ಲೇ ಭ್ರಷ್ಟಾಚಾರ, ಅಪರಾಧದಿಂದ ದೂರ ಇರುವುದನ್ನು ಹಾಗೂ ಸ್ವಚ್ಛತೆ ಕಾಪಾಡುವುದನ್ನು ಹೇಳಿಕೊಡಬೇಕು. ಇದರಿಂದ ದೇಶ ತನ್ನಿಂದ ತಾನೇ ಉದ್ಧಾರ ಆಗುತ್ತದೆ. ದೇಶ ತಂದೆ ತಾಯಿ ಇದ್ದಂತೆ. ಗೌರವ ಪ್ರೀತಿ ತೋರಬೇಕು. ಇತಿಹಾಸ ಮತ್ತು ಭೂಗೋಳದ ಅರಿವು ಇಲ್ಲದಿದ್ದರೆ ಮಕ್ಕಳಿಗೆ ಜಗತ್ತೇ ಗೊತ್ತಾಗುವುದಿಲ್ಲ. ಈ ಎರಡು ಪಠ್ಯಗಳ ಕಲಿಕೆಯಲ್ಲಿ ವಿದ್ಯಾರ್ಥಿಗಳು ಆಸಕ್ತರಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಜೋಗಿ ಮತ್ತು ಎಸ್ .ಕೆ.ಶ್ಯಾಮಸುಂದರ್ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಎ.ಜೆ.ಸುರೇಶ್, ಕನ್ನಡಪ್ರಭ ಉಪ ಸಂಪಾದಕ ರಾಜೀವ್ ಶೆಟ್ಟಿ, ಸಂಸ್ಥೆ ಆಡಳಿತಾಧಿಕಾರಿ ರವೀಂದ್ರ ನಾಥ್, ಯೂನಿವರ್ಸಲ್ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಎಲ್.ಚೇತನ್ ಕುಮಾರ್, ಆಡಳಿತಾಧಿಕಾರಿ ಎಂ.ಮಹೇಶ್, ಮುಖ್ಯೋಪಾಧ್ಯಾಯನಿ ಕೀರ್ತಿ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪಥಸಂಚಲನ ನಡೆಸಿದರು. ಪುಟಾಣಿಗಳು ಗಾಂಧೀಜಿ, ಅಂಬೇಡ್ಕರ್ , ಸುಭಾಷ್ ಚಂದ್ರಬೋಸ್ , ಕಿತ್ತೂರು ರಾಣಿ ಚೆನ್ನಮ್ಮ, ಮಾರ್ಷಲ್ ಕರಿಯಪ್ಪ ಸೇರಿದಂತೆ ವಿವಿಧ ಪೋಷಾಕುಗಳಲ್ಲಿ ಗಮನ ಸೆಳೆದರು.