ಬೆಲೆ ಹೆಚ್ಚಳ ಆತಂಕ: ಮಾರ್ಕೆಟ್‌ಗೆ ಲಗ್ಗೆ| ಬಹುತೇಕ ತರಕಾರಿಗಳ ದರ ಪ್ರತಿ ಕೇಜಿಗೆ 15ರಿಂದ 20 ರವರೆಗೆ ಹೆಚ್ಚಳ| ಹೆಚ್ಚು ಮಳೆ ಬಂದ ಪರಿಣಾಮ ಮಾರುಕಟ್ಟೆಗೆ ಅಗತ್ಯಕ್ಕಿಂತ ಹೆಚ್ಚು ಬಂದ ಹೂವು, ಹಣ್ಣು ಮತ್ತು ತರಕಾರಿ| ಜನರ ಬೇಡಿಕೆ ಜಾಸ್ತಿಯಾಗಿದ್ದೇ ದರ ಹೆಚ್ಚಳವಾಗಲು ಕಾರಣ
ಬೆಂಗಳೂರು(ಏ.28): ಜನತಾ ಕರ್ಫ್ಯೂ ಅವಧಿಯಲ್ಲಿ ತರಕಾರಿ, ಹಣ್ಣುಗಳನ್ನು ಸೀಮಿತ ವೇಳೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದರೂ ಸಹ ಬೆಲೆ ಹೆಚ್ಚಳವಾಗಬಹುದೆಂಬ ಆತಂಕದಿಂದ ಜನರು ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟ ಪರಿಣಾಮ ಹಣ್ಣು, ತರಕಾರಿಗಳ ಬೆಲೆ ದಿಢೀರ್ ಹೆಚ್ಚಳವಾಗಿದೆ.
ಬಹುತೇಕ ತರಕಾರಿಗಳ ದರ ಪ್ರತಿ ಕೆಜಿಗೆ .15ರಿಂದ 25 ರವರೆಗೆ ಜಾಸ್ತಿಯಾಗಿದೆ. ಮಾರುಕಟ್ಟೆಗೆ ಮಾಮೂಲಿನಂತೆ ತರಕಾರಿಗಳ ಪೂರಕೆಯಾದರೂ ಬೇಡಿಕೆ ದುಪ್ಟಟ್ಟಾಗಿದೆ. ಜೊತೆಗೆ ಕೆಲವು ವ್ಯಾಪಾರಿಗಳು ತರಕಾರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದೇ ದಾಸ್ತಾನು ಮಾಡಿದ್ದಾರೆನ್ನಲಾಗಿದೆ. ಇದರ ಒಟ್ಟಾರೆ ಪರಿಣಾಮ ತರಕಾರಿ ದರದಲ್ಲಿ ಹೆಚ್ಚಳವಾಗಿದೆ.
ಇತ್ತೀಚೆಗೆ ಹೆಚ್ಚು ಮಳೆ ಬಂದ ಪರಿಣಾಮ ಅಗತ್ಯಕ್ಕಿಂತ ಹೆಚ್ಚು ಹೂವು, ಹಣ್ಣು ಮತ್ತು ಮಾರುಕಟ್ಟೆಗೆ ಬಂದಿದೆ. ಆದರೆ ಜನರ ಬೇಡಿಕೆ ಜಾಸ್ತಿಯಾಗಿದ್ದೇ ದರ ಹೆಚ್ಚಳವಾಗಲು ಕಾರಣ ಎಂದು ವ್ಯಾಪಾರಿಯೊಬ್ಬರು ಹೇಳಿದರು.
ಹಸಿ ಮೆಣಸಿನಕಾಯಿ ಹಾಗೂ ಬೀನ್ಸ್ ದರಗಳು ವಾರದ ಹಿಂದೆ ಕಡಿಮೆ ಇದ್ದವು. ಈಗ ಎರಡಕ್ಕೂ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಗಳು ಏರಿವೆ. ಆದರೆ ಶುಂಠಿ, ಬೆಳ್ಳುಳ್ಳಿ ದರಗಳು ಸ್ಥಿರವಾಗಿದ್ದು, ಬದನೆ, ಕ್ಯಾರೆಟ್, ಮೂಲಂಗಿ, ಆಲೂಗಡ್ಡೆ, ಈರುಳ್ಳಿ, ಟೊಮೆಟೋ ದರಗಳು ಪ್ರತಿ ಕೆ.ಜಿಗೆ 20-30 ಮಿತಿಯಲ್ಲಿ ಮಾರಾಟವಾಗುತ್ತಿವೆ ಎಂದು ಅವರು ತಿಳಿಸಿದರು. ಬೀನ್ಸ್ ದರ ಕೆ.ಜಿ.ಗೆ 40-50 ಇದ್ದುದು ಮಂಗಳವಾರ ದಿಢೀರ್ 100ಕ್ಕೆ ಏರಿತ್ತು. ಟೊಮೆಟೋ 10-15 ಇದ್ದುದು 20-25 ವರೆಗೆ ಮಾರಾಟವಾಗಿದೆ. ಕೊತ್ತಂಬರಿ ಸೊಪ್ಪು ಕಂತೆಗೆ 30ಕ್ಕೆ ಹೆಚ್ಚಳವಾಗಿದೆ.
ತರಕಾರಿ, ಹೂ ರಸ್ತೆಗೆಸೆದು ಆಕ್ರೋಶ : ಸಮಯಾವಕಾಶ ಕೇಳಿದ ರೈತರು
ಖರೀದಿಗೆ ನುಗ್ಗಿದ ಜನರು
ಜನತಾ ಕರ್ಫ್ಯೂ ಜಾರಿಯಾಗಿ ಮುಂದಿನ ಹದಿನೈದು ದಿನಗಳ ಕಾಲ ಹಣ್ಣು ತರಕಾರಿ ಲಭ್ಯವಾಗುವುದಿಲ್ಲ ಎಂಬ ಆತಂಕ್ಕೆ ಒಳಗಾಗಿರುವ ಜನತೆ ಕೊರೋನಾ ನಡುವೆ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿದ್ದಾರೆ. ನಗರದ ಶಿವಾಜಿ ನಗರದ ರಸೇಲ್ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ, ಯಶವಂತಪುರದ ಎಪಿಎಂಸಿ ಮಾರುಕಟ್ಟೆ, ಮಲ್ಲೇಶ್ವರ ಮತ್ತು ಕೆ.ಆರ್.ಪುರ ಮಾರುಕಟ್ಟೆಗಳಲ್ಲಿ ಕೋವಿಡ್ ನಿಯಮ ಪಾಲನೆ ಬಿಗಿಯಾಗಿರಲಿಲ್ಲ.
ತರಕಾರಿ ದರ
ಬೀನ್ಸ್ 65
ಕ್ಯಾರಟ್ ಊಟಿ 38
ಮೆಣಸಿನಕಾಯಿ 60
ಬಜ್ಜಿ ಮೆಣಸಿನಕಾಯಿ 64
ಮೂಸಂಬಿ 104
ಟೊಮೆಟೋ 15
ಬೀಟ್‌ರೂಟ್ 25
ಏಲಕ್ಕಿ ಬಾಳೆ 50