* ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿರುವ ಆಲಮಟ್ಟಿ ಡ್ಯಾಂ
* ಸದ್ಯ ಜಲಾಶಯದಲ್ಲಿ 86.59 ಟಿಎಂಸಿ ಅಡಿ ನೀರು ಸಂಗ್ರಹ
* ವಿವಿಧ ಗ್ರಾಮಗಳ 1150 ಎಕರೆ ಜಮೀನು ಜಲಾವೃತ
ಆಲಮಟ್ಟಿ(ಜು.31): ಆಲಮಟ್ಟಿ ಜಲಾಶಯದ ಹೊರಹರಿವನ್ನು ಗುರುವಾರ ಮಧ್ಯೆರಾತ್ರಿಯಿಂದ ಹೆಚ್ಚಿಸಲಾಗಿದ್ದು, 4.20 ಲಕ್ಷ ಕ್ಯುಸೆಕ್ ನೀರನ್ನು ಜಲಾಶಯದ ಮೂಲಕ ಬಿಡಲಾಗುತ್ತಿದೆ.
ಇದರಿಂದ ಪ್ರವಾಹದ ಆತಂಕ ಇನ್ನಷ್ಟು ಹೆಚ್ಚಿದ್ದು, ಜಲಾಶಯದ ಒಳಹರಿವು ಕೂಡಾ 4.20 ಲಕ್ಷ ಕ್ಯುಸೆಕ್ ಇದೆ. ಸದ್ಯ 519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ 517.17ಮೀ.ವರೆಗೆ ನೀರಿದ್ದು, 86.59 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಆಲಮಟ್ಟಿಯಿಂದ ಹೊರಹರಿವು ಹೆಚ್ಚಿದ್ದರಿಂದ ನಿಡಗುಂದಿ ತಾಲೂಕಿನ ಕೃಷ್ಣಾ ತೀರದ ಗ್ರಾಮಗಳಾದ ಅರಳದಿನ್ನಿ, ಕಾಶೀನಕುಂಟಿ, ಯಲ್ಲಮ್ಮನೂದಿಹಾಳ, ಯಲಗೂರ, ಮಸೂತಿ ಗ್ರಾಮದಲ್ಲಿ ಇಲ್ಲಿಯವರೆಗೆ 1150 ಎಕರೆ ಜಮೀನು ಜಲಾವೃತಗೊಂಡಿದೆ ಎಂದು ತಹಶೀಲ್ದಾರ್ ಸತೀಶ ಕೂಡಲಗಿ ತಿಳಿಸಿದರು.
undefined
'ಆಲಮಟ್ಟಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಿ'
ಜಾಕವೆಲ್ ಜಲಾವೃತ:
ಆಲಮಟ್ಟಿ ಜಲಾಶಯದ ಮುಂಭಾಗದ ಯಲಗೂರ ಬಳಿ ಇರುವ ನಿಡಗುಂದಿ ಪಟ್ಟಣಕ್ಕೆ ನೀರು ಪೂರೈಕೆಯ ಜಾಕವೆಲ್ ಜಲಾವೃತಗೊಂಡಿದೆ. ಮುಂಜಾಗ್ರತೆಯ ಕ್ರಮವಾಗಿ ಅಲ್ಲಿದ್ದ ಪಂಪಸೆಟ್ ಅನ್ನು ಶುಕ್ರವಾರ ಸ್ಥಳಾಂತರಿಸಲಾಗಿದೆ. ಇದರಿಂದ ನಿಡಗುಂದಿ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮಳೆಯ ಅಬ್ಬರ ಕಡಿಮೆಯಾಗಿದ್ದು, ರಾಜಾಪುರ ಬ್ಯಾರೇಜ್‌ನಲ್ಲಿಯೂ ಒಳಹರಿವು ಶುಕ್ರವಾರ ಸಂಜೆ ಕಡಿಮೆಯಾಗಿದೆ. ಶನಿವಾರದ ವೇಳೆಗೆ ಒಳಹರಿವು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.