ಹೆಚ್ಚಿದ ವೈರಲ್ ಫಿವರ್‌: ಐಸಿಯು ಬೆಡ್‌ ಭರ್ತಿ, ಆತಂಕದಲ್ಲಿ ಜನತೆ..!

By Kannadaprabha NewsFirst Published Nov 25, 2023, 5:30 AM IST
Highlights

ಮಲ್ಲೇಶ್ವರ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತರ ದಾಖಲಾತಿ ಹೆಚ್ಚಾಗಿದೆ. ಹೀಗಾಗಿ ಐಸಿಯು ಬೆಡ್‌ಗಳು ಪೂರ್ತಿಯಾಗಿವೆ. ಇನ್ನು ಆಸ್ಪತ್ರೆಯಲ್ಲಿ ಐಸಿಯು ವೈದ್ಯರ ಕೊರತೆಯೂ ಇದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಇದೇ ರೀತಿಯ ಪರಿಸ್ಥಿತಿಯಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಐಸಿಯು ಹಾಗೂ ವೆಂಟಿಲೇಟರ್‌ ಬೆಡ್‌ಗಳು ಭರ್ತಿಯಾಗಿವೆ.

ಬೆಂಗಳೂರು(ನ.25):  ನಗರದಲ್ಲಿ ಇನ್‌ಫ್ಲ್ಯೂಯೆಂಜಾ, ವೈರಲ್‌ ನ್ಯುಮೋನಿಯಾ, ಉಸಿರಾಟ ಸಮಸ್ಯೆ ಹಾಗೂ ಡೆಂಘಿ ಜ್ವರಗಳಿಂದಾಗಿ ಕೆ.ಸಿ.ಜನರಲ್‌, ವಿಕ್ಟೋರಿಯಾ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲೂ ಐಸಿಯು ಬೆಡ್‌ಗಳು ಬಹುತೇಕ ಭರ್ತಿಯಾಗಿವೆ. ಡಿಸೆಂಬರ್‌ ತಿಂಗಳಲ್ಲಿ ಈ ಪ್ರಮಾಣ ಹೆಚ್ಚಾಗಬಹುದು. ಆದ್ದರಿಂದ ಎಚ್ಚರವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಮಲ್ಲೇಶ್ವರ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತರ ದಾಖಲಾತಿ ಹೆಚ್ಚಾಗಿದೆ. ಹೀಗಾಗಿ ಐಸಿಯು ಬೆಡ್‌ಗಳು ಪೂರ್ತಿಯಾಗಿವೆ. ಇನ್ನು ಆಸ್ಪತ್ರೆಯಲ್ಲಿ ಐಸಿಯು ವೈದ್ಯರ ಕೊರತೆಯೂ ಇದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಇದೇ ರೀತಿಯ ಪರಿಸ್ಥಿತಿಯಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಐಸಿಯು ಹಾಗೂ ವೆಂಟಿಲೇಟರ್‌ ಬೆಡ್‌ಗಳು ಭರ್ತಿಯಾಗಿವೆ.

Kerala Viral Fever: ವೈರಲ್ ಜ್ವರದಿಂದ ನರಳುತ್ತಿದೆ ಕೇರಳ, ಸಾವಿನ ಸಂಖ್ಯೆ 23ಕ್ಕೆ ಏರಿಕೆ!

ಈ ಬಗ್ಗೆ ವೈದ್ಯರು ಎಚ್ಚರವಹಿಸುವಂತೆ ಸಲಹೆ ನೀಡಿದ್ದು, ಇನ್‌ಫ್ಲ್ಯೂಯೆಂಜಾ, ವೈರಾಣು ಜ್ವರ ಹಾಗೂ ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲು ನೆಗಡಿ, ಕೆಮ್ಮು, ಜ್ವರದಿಂದ ಶುರುವಾಗಿ ನಂತರ ನ್ಯೂಮೋನಿಯಾಗಿ ಬದಲಾಗುತ್ತಿವೆ. ಈ ಸಮಸ್ಯೆ ಮಕ್ಕಳು ಹಾಗೂ ವಯೋವೃದ್ಧರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಬರೀ ನೆಗಡಿ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿರುವ ಮಕ್ಕಳ ಪ್ರಮಾಣ ಶೇ.10ರಿಂದ 15ರಷ್ಟು ಹೆಚ್ಚಾಗಿದೆ. ಕಾಯಿಲೆ ತೀವ್ರವಾಗಿರುವ ಮಕ್ಕಳಿಗೆ ಆ್ಯಂಟಿಬಯೋಟಿಕ್‌ ನೀಡಲಾಗುತ್ತದೆ. ಗಂಭೀರ ಪರಿಸ್ಥಿತಿಯಲ್ಲಿ ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಬೇಕಾಗಿದೆ. ಮಕ್ಕಳಿಗಿಂತ ದೀರ್ಘಕಾಲಿನ ಸಮಸ್ಯೆ ಎದುರಿಸುತ್ತಿರುವ ವೃದ್ಧರಲ್ಲಿ ಕಾಯಿಲೆ ತೀವ್ರತೆ ಹೆಚ್ಚಿದೆ ಎಂದು ಫೋರ್ಟಿಸ್‌ ಆಸ್ಪತ್ರೆ ಶ್ವಾಸಕೋಶ ಚಿಕಿತ್ಸಾ ವಿಭಾಗದ ನಿರ್ದೇಶಕ ಡಾ। ವಿವೇಕ್‌ ಆನಂದ್ ಪಡೇಗಲ್‌ ಹೇಳುತ್ತಾರೆ.

ಮಕ್ಕಳ ಬಗ್ಗೆ ಎಚ್ಚರವಿರಲಿ

ಮಕ್ಕಳಿಗೆ ಯಾವುದೇ ಕಾಯಿಲೆಗಳು ಬಹುಬೇಗ ಹರಡುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಶಾಲೆಯಲ್ಲಿ ಮಕ್ಕಳಿಂದ ಮಕ್ಕಳಿಗೆ ಬೇಗ ಹರಡುತ್ತದೆ. ಹೀಗಾಗಿ ಮಕ್ಕಳಿಗೆ ನೆಗಡಿ ಅಥವಾ ಕೆಮ್ಮು ಶುರುವಾದರೆ ಶಾಲೆಗೆ ಕಳುಹಿಸದೆ ಚಿಕಿತ್ಸೆ ನೀಡಬೇಕು. ಮಕ್ಕಳನ್ನು ಆದಷ್ಟು ಬೆಚ್ಚಗಿರಿಸಬೇಕು.

ನೆಗಡಿ, ಕೆಮ್ಮು ಬಂದವರು ಎಲ್ಲೆಂದರಲ್ಲಿ ಉಗುಳಬಾರದು. ಕೆಮ್ಮುವಾಗ ಕೈ ಹಿಡಿದು ಕೆಮ್ಮಬೇಕು. ಮಕ್ಕಳನ್ನು ಮುಟ್ಟುವಾಗ ಕೈ ತೊಳೆಯುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಮಕ್ಕಳಿಗೆ ಮೈ ಸ್ವಲ್ಪ ಬೆಚ್ಚಗಿದ್ದರೂ ಆಸ್ಪತ್ರೆಗೆ ಕರೆ ತರಬೇಕು. ಆಗ ಅಪಾಯದಿಂದ ಪಾರು ಮಾಡಬಹುದು ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಡಿಸೆಂಬರಲ್ಲಿ ವೈರಲ್‌ ಫಿವರ್‌ ಹೆಚ್ಚಾಗಬಹುದು: ವೈದ್ಯರು

ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ। ಸಿ.ನಾಗರಾಜು, ಚಳಿಗಾಲದಲ್ಲಿ ಉಸಿರಾಟ ಸಮಸ್ಯೆಗಳು ಹೆಚ್ಚಾಗುತ್ತವೆ. ತೀವ್ರ ಉಸಿರಾಟ ಸಮಸ್ಯೆ, ಶ್ವಾಸಕೋಶ ಸೋಂಕು, ಅಸ್ತಮಾ, ನ್ಯುಮೋನಿಯಾ ಸಮಸ್ಯೆ ಇರುವವರಲ್ಲಿ ಸಮಸ್ಯೆ ಉಲ್ಬಣಿಸುತ್ತದೆ. ಹೀಗಾಗಿ ಡಿಸೆಂಬರ್‌ನಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಹೀಗಾಗಿ 2-3 ದಿನಕ್ಕೂ ಮೀರಿ ಜ್ವರ, ಉಸಿರಾಟ ಸಮಸ್ಯೆ ಇದ್ದರೆ ಕೂಡಲೇ ವೈದ್ಯರನ್ನು ಕಾಣಬೇಕು ಎಂದು ಸಲಹೆ ನೀಡಿದರು.

ಜಾರ್ಖಂಡ್‌ನಲ್ಲಿ ಮೂವರಿಗೆ ಹಂದಿ ಜ್ವರ: ಸೋಂಕಿಗೆ 800 ಹಂದಿ ಬಲಿ

ಪ್ರಕರಣಗಳ ತೀವ್ರತೆ ಬಗ್ಗೆ ಮಾತನಾಡಿದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ। ಕೆ.ಎಸ್‌.ಸಂಜಯ್‌, ಮಕ್ಕಳಲ್ಲಿ ವೈರಾಣು ಜ್ವರ ಪ್ರಕರಣಗಳು ಹೆಚ್ಚಾಗುತ್ತಿಲ್ಲ. ಆದರೆ ಚಳಿಗಾಲ ಮತ್ತಿತರ ಕಾರಣಗಳಿಗೆ ತೀವ್ರತೆ ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಉಸಿರಾಟ ಸಮಸ್ಯೆಗಳು ಹೆಚ್ಚಾಗಬಹುದು. ಹೀಗಾಗಿ ಎಚ್ಚರವಹಿಸಬೇಕು ಎಂದರು.

ಹೃದ್ರೋಗ ಸಮಸ್ಯೆಗಳು ಹೆಚ್ಚಾಗಿಲ್ಲ: ಮಂಜುನಾಥ್‌

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್‌ ಮಾತನಾಡಿ, ಹೃದ್ರೋಗದ ಐಸಿಯು ವಿಭಾಗದಲ್ಲಿ ಪ್ರಕರಣಗಳು ಗಂಭೀರ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಈ ಬಾರಿ ಅಷ್ಟು ಚಳಿಯೂ ಇಲ್ಲದಿರುವುದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆ ಇರಬಹುದು. ಚಳಿ ಇರುವ ದೇಶಗಳಲ್ಲೂ ಹೃದಯಾಘಾತಗಳು ಕಡಿಮೆ ಇವೆ. ಆದರೆ ನಿರ್ಲಕ್ಷ್ಯ ಮಾಡುವಂತಿಲ್ಲ. ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದರು.

click me!