ಚಾರ್ಮಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಕ್ಕೆ 8 ಜನರ ಮೇಲೆ ಕೇಸ್!

Published : Nov 24, 2023, 11:30 PM IST
ಚಾರ್ಮಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಕ್ಕೆ 8 ಜನರ ಮೇಲೆ ಕೇಸ್!

ಸಾರಾಂಶ

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಿಂಡು ಇನ್ನಿಲ್ಲದ ಉಪಟಳ ನೀಡುತ್ತಿರುವ ಬೆನ್ನಲ್ಲೇ ಚಾರ್ಮಾಡಿ ಘಾಟಿ ಭಾಗದಲ್ಲೂ ಆನೆಗಳು ಕಾಣಿಸಿಕೊಂಡು ಭೀತಿ ಮೂಡಿಸಿವೆ. ಚಾರ್ಮಾಡಿಯ ಮಲಯ ಮಾರುತದ ಬಳಿ ಆನೆಗಳ ಹಿಂಡು ಕಾಣಿಸಿಕೊಂಡಿದೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.24): ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಿಂಡು ಇನ್ನಿಲ್ಲದ ಉಪಟಳ ನೀಡುತ್ತಿರುವ ಬೆನ್ನಲ್ಲೇ ಚಾರ್ಮಾಡಿ ಘಾಟಿ ಭಾಗದಲ್ಲೂ ಆನೆಗಳು ಕಾಣಿಸಿಕೊಂಡು ಭೀತಿ ಮೂಡಿಸಿವೆ. ಚಾರ್ಮಾಡಿಯ ಮಲಯ ಮಾರುತದ ಬಳಿ ಆನೆಗಳ ಹಿಂಡು ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಪಟಾಕಿಗಳನ್ನು ಸಿಡಿಸಿ ಕಾಡಿಗೆ ಹಿಮ್ಮೆಟ್ಟಿಸಿದ್ದಾರೆ. ಮಂಗಳೂರಿಗೆ ತೆರಳುವ ವಾಹನಗಳು ಘಾಟಿಯಲ್ಲಿ ಎಚ್ಚರದಿಂದ ಸಾಗಬೇಕಿದೆ. ಆನೆಗಳು ರಸ್ತೆಗಿಳಿದರೆ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯ. ಅನಾಹುತಗಳು ಸಂಭವಿಸುವ ಸಾಧ್ಯತೆಯೇ ಹೆಚ್ಚಿರುವುದರಿಂದ ಅರಣ್ಯ ಇಲಾಖೆಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಕ್ಕೆ 8 ಜನರ ಮೇಲೆ ಕೇಸ್: ಕಳೆದ ನವೆಂಬರ್ 8 ರಂದು ಆನೆ ದಾಳಿಯಿಂದ ಆಲ್ದೂರಿನ ಕಾರ್ಮಿಕ ಮಹಿಳೆ ಮೀನಾ ಎಂಬುವವರು ಬಲಿಯಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಆಲ್ದೂರು ಪೊಲೀಸರು 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಾಡಾನೆಗಳ ದಾಳಿಯಿಂದ ಸಾವು-ನೋವು ಸಂಭವಿಸಿದಲ್ಲಿ ಈಗ ಮಲೆನಾಡಿನ ಜನರು ಸರ್ಕಾರದ ವಿರುದ್ಧ ಆಕ್ರೊಶವನ್ನೂ ತೋಡಿಕೊಳ್ಳುವಂತಿಲ್ಲ. ರೊಚ್ಚಿಗೆದ್ದು ಪ್ರತಿಭಟನೆಗಿಳಿದರೆ ಕೇಸು ದಾಖಲಾಗುವುದು ಖಚಿತ ಎನ್ನುವುದು ಈ ಪ್ರಕರಣದಿಂದ ಸಾಬೀತಾದಂತಾಗಿದೆ.

ಕಾಡಾನೆ ದಾಳಿಗೆ ಮೂವರ ಬಲಿ: ಮಲೆನಾಡಿಗರಿಗೆ ಸುಳ್ಳು ಹೇಳಿದ್ರಾ ಸಿಎಂ ಸಿದ್ದರಾಮಯ್ಯ?

ವನ್ಯಪ್ರಾಣಿಗಳಿಂದ ಅಮಾಯಕರ ಜೀವ ರಕ್ಷಿಸಬೇಕಾದ ಹೊಣೆಗಾರಿಕೆ ಜಿಲ್ಲಾಡಳಿತ, ಅರಣ್ಯ ಇಲಾಖೆಯದ್ದಾಗಿದೆ. ಆನೆ ದಾಳಿಯಿಂದ ಸಾವು-ನೋವುಗಳು ಸಂಭವಿಸಿದಾಗ ಜನರಿಂದ ಸಾಂದರ್ಭಿಕ ಆಕ್ರೋಶ ವ್ಯಕ್ತವಾಗುವುದು ಸಹಜ, ಸರ್ಕಾರ, ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆಯುವ ಸಲುವಾಗಿ ಇಂತಹ ಪ್ರತಿಭಟನೆಗಳು ಅನಿವಾರ್ಯವೂ ಆಗಿರುತ್ತದೆ. ಆ ವೇಳೆ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬಿ ಸಮಾಧಾನ ಪಡಿಸುವುದು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಜವಾಬ್ದಾರಿಯೂ ಆಗಿರುತ್ತದೆ. ಆದರೆ ಪ್ರತಿಭಟನೆ ನಡೆಸಿದವರ ವಿರುದ್ಧವೇ ಪ್ರಕರಣ ದಾಖಲಿಸಿ ಅಮಾಯಕರ ಧ್ವನಿ ಅಡಗಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಪ್ರತಿಭಟನೆಗೆ ಮುಂದಾದವರ ಮೇಲೆ ಕೇಸು, ಜನರ ಅಸಮಾಧಾನ: ಆಲ್ದೂರಿನ ಗಾಳಿಗಂಡಿ ರವಿ ಸೇರಿದಂತೆ 8 ಜನರ ವಿರುದ್ಧ ಕಾನೂನು ಭಂಗ, ಸರ್ಕಾರಿ ಕಚೇರಿಗೆ ನುಗ್ಗುವ ಯತ್ನ, ಸಾರ್ವಜನಿಕರಿಗೆ ತೊಂದರೆ ಎನ್ನುವ ಕಾರಣ ನೀಡಿ ಪ್ರಕರಣ ದಾಖಲಿಸಲಾಗಿದೆ. ದುರಂತವೆಂದರೆ ಕಾರ್ಮಿಕ ಮಹಿಳೆ ಮೀನಾ ಸಾವಿನ ನಂತರವೂ ಆನೆ ದಾಳಿಯಿಂದ ಮತ್ತೊಂದು ಸಾವು ಸಂಭವಿಸಿದೆ. ಇದು ಗಂಭೀರ ವಿಚಾರವಲ್ಲವೇ ಸಾವನ್ನು ಕಂಡೂ ಸುಮ್ಮನಿರಬೇಕೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.ಆನೆಗಳ ನಿಯಂತ್ರಣ, ಸಾವು-ನೋವಿನ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಿ ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಡಳಿತವಾಗಿ, ಅರಣ್ಯ ಇಲಾಖೆಯಾಗಲಿ ಕೈಗೊಂಡಿಲ್ಲ. ಅದರ ಬದಲು ಸಂಬಂಧಿಕರು, ಸ್ನೇಹಿತರನ್ನು ಕಳೆದುಕೊಂಡು ಪ್ರತಿಭಟನೆಗೆ ಮುಂದಾದವರ ಬಗ್ಗೆ ಕೇಸು ದಾಖಲಿಸುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

ಅಕ್ರಮ ಭೂ ಮಂಜೂರು ಪ್ರಕರಣ: ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದರೂ ಪ್ರಯೋಜವಿಲ್ಲ!

ಮೂರು ಕಾಡಾನೆಗಳ ಸೆರೆಗೆ ಆದೇಶ: ಮೂಡಿಗೆರೆ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಉಂಟುಮಾಡುತ್ತಿರುವ 3 ಕಾಡಾನೆಗಳನ್ನು ನಿರ್ದಿಷ್ಠವಾಗಿ ಗುರುತಿಸಿ ಸೆರೆ ಹಿಡಿದು ಸ್ಥಳಾಂತರಿಸುವಂತೆ ರಾಜ್ಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಆದೇಶಿಸಿದ್ದಾರೆ.ಮೊನ್ನೆಯಷ್ಟೇ ಆನೆ ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊರಗುತ್ತಿಗೆ ಸಿಬ್ಬಂದಿ ಕಾರ್ತಿಕ್ ಎಂಬ ಯುವಕ ಕಾಡಾನೆ ದಾಳಿಗೆ ಬಲಿಯಾದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.ಮೂಡಿಗೆರೆ ವಲಯದ ಊರುಬಗೆ, ಗೌಡಹಳ್ಳಿ, ಭೈರಾಪುರ, ಹೊಸಕೆರೆ ಹಾಗೂ ಮೇಕನಗದ್ದೆ ವ್ಯಾಪ್ತಿಯಲ್ಲಿ ಸಂಚರಿಸುತ್ತಾ ಆಸ್ತಿ ಪಾಸ್ತಿ, ಬೆಳೆ ಹಾಗೂ ಜೀವಹಾನಿ ಉಂಟು ಮಾಡುತ್ತಿರುವ ಮೂರು ಆನೆಗಳನ್ನು ಸರೆ ಹಿಡಿದು ರೇಡಿಯೋ ಕಾಲರಿಂಗ್ ಮಾಡಿ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸಲು ಆದೇಶದಲ್ಲಿ ತಿಳಿಸಲಾಗಿದೆ.

PREV
Read more Articles on
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?