ಬೆಂಗ್ಳೂರಲ್ಲಿ ಇನ್ನೂ ಸಿಗದ ಚಿರತೆಗಳು: ಗಾರ್ಡನ್‌ ಸಿಟಿಯಲ್ಲಿ ಹೆಚ್ಚಿದ ಆತಂಕ

Published : Dec 03, 2022, 10:21 AM IST
ಬೆಂಗ್ಳೂರಲ್ಲಿ ಇನ್ನೂ ಸಿಗದ ಚಿರತೆಗಳು: ಗಾರ್ಡನ್‌ ಸಿಟಿಯಲ್ಲಿ ಹೆಚ್ಚಿದ ಆತಂಕ

ಸಾರಾಂಶ

ಕಣ್ಣಿಗೆ ಕಾಣದ ಚಿರತೆಗಳಿಗೆ ತೀವ್ರ ಹುಡುಕಾಟ, ನಗರದ ಕೆಂಗೇರಿ, ಚಿಕ್ಕಜಾಲ ಸುತ್ತಮುತ್ತ ಚಿರತೆ ಸೆರೆಗೆ ಅರಣ್ಯ ಇಲಾಖೆ ತೀವ್ರ ಕಾರ್ಯಾಚರಣೆ, ಕೇವಲ ಚಿರತೆಗಳ ಹೆಜ್ಜೆ ಗುರುತು ಮಾತ್ರ ಪತ್ತೆ, 4-5 ಕಡೆ ಬೋನು ಇಟ್ಟು ಚಿರತೆ ಸೆರೆ ಯತ್ನ. 

ಬೆಂಗಳೂರು(ಡಿ.03):  ನಗರದ ಕೆಂಗೇರಿ ಮತ್ತು ಚಿಕ್ಕಜಾಲ ಸುತ್ತಮುತ್ತ ಕಾಣಿಸಿಕೊಂಡು ಆಂತಕ ಮೂಡಿಸಿದ್ದ ಚಿರತೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಶುಕ್ರವಾರ ದಿನವೀಡಿ ಕಾರ್ಯಾಚರಣೆ ನಡೆಸಿದ್ದು, ಚಿರತೆಗಳು ಮಾತ್ರ ಪತ್ತೆಯಾಗಿಲ್ಲ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಚಿರತೆ ದಾಳಿಗಳ ವಿಡಿಯೋಗಳನ್ನು ವೈರಲ್‌ ಮಾಡಿ ಸಾರ್ವಜನಿಕರಲ್ಲಿ ಆತಂಕ ಹುಟ್ಟುಹಾಕಲಾಗಿದೆ. ಇದರಿಂದಾಗಿ ಸುತ್ತಮುತ್ತ ಪ್ರದೇಶಗಳ ಜನರು ಓಡಾಟ ನಡೆಸಲು, ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದರು. ಚಿರತೆ ಪತ್ತೆಯಾಗದ ಹಿನ್ನೆಲೆ ಮುಂದಿನ ಮೂರ್ನಾಲ್ಕು ದಿನ ಸುತ್ತಮುತ್ತಲ ಪ್ರದೇಶದಲ್ಲಿ ನಿಗಾವಹಿಸಲು ನಿರ್ಧರಿಸಲಾಗಿದೆ.

‘ಚಿರತೆಯು ಜಿಂಕೆ ಬೇಟೆಯಾಡಿದ್ದ ಬಿಜಿಎಸ್‌ ಆಸ್ಪತ್ರೆ ಹಿಂಬದಿ ಗೇಟ್‌ ಸಮೀಪದ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಮತ್ತು ಶುಕ್ರವಾರ ದಿನವೀಡಿ ತಲಾ ನಾಲ್ಕು ಮಂದಿಯ ಮೂರು ತಂಡಗಳನ್ನು ಮಾಡಿಕೊಂಡು ಕಾರ್ಯಾಚರಣೆ ಕೈಗೊಳ್ಳಲಾಯಿತು. ಕೆಲವೆಡೆ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿತ್ತಾದರೂ, ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಚಿರತೆ ಕಂಡುಬಂದಿಲ್ಲ’ ಎಂದು ಕಗ್ಗಲೀಪುರ ವಲಯ ಅರಣ್ಯ ಅಧಿಕಾರಿ ಗೋವಿಂದ ರಾಜು ತಿಳಿಸಿದರು. ಇತ್ತ ಚಿಕ್ಕಜಾಲದ ಐಟಿಸಿ ಕಾರ್ಖಾನೆ ಬಳಿಯೂ ಸ್ಥಳೀಯ ಅರಣ್ಯ ಸಿಬ್ಬಂದಿ ತಪಾಸಣೆ ಮುಂದುವರೆಸಿದ್ದು, ಅಲ್ಲಿಯೂ ಚಿರತೆಯ ಸುಳಿವು ಕಂಡುಬಂದಿಲ್ಲ.

Bengaluru: ಸಿಲಿಕಾನ್‌ ಸಿಟಿಯಲ್ಲಿ ಚಿರತೆಗಳು ಪ್ರತ್ಯಕ್ಷ, ಆತಂಕ

ಮತ್ತಷ್ಟು ದಿನ ನಿಗಾ:

‘ಚಿರತೆ ಕಂಡುಬಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಅರಣ್ಯ ಇಲಾಖೆ ಸಿಬ್ಬಂದಿ ನಿಗಾವಹಿಸಲು ನಿರ್ಧರಿಸಿದ್ದಾರೆ. ರಾತ್ರಿ ಅವಧಿಯಲ್ಲಿ ಗಸ್ತು ಹೆಚ್ಚಿಸಲಾಗುವುದು. ನಾಲ್ಕು ಕಡೆಗಳಲ್ಲಿ ಪಂಜರ ಇಟ್ಟಿದ್ದು, ಅವುಗಳ ಸ್ಥಳ ಬದಲಿಸಲಾಗಿದೆ. ಸ್ಥಳೀಯ ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧರಿಸಿ ಚಿರತೆ ಓಡಾಡಿದ ಸ್ಥಳಗಳಲ್ಲಿ ಪಂಜರಗಳನ್ನು ಇಡಲಾಗಿದೆ. ಜತೆಗೆ ನಾಲ್ಕೈದು ಕಡೆಗಳಲ್ಲಿ ಕ್ಯಾಮರಾ ಟ್ರಾಪಿಂಗ್‌ ಅಳವಡಿಸಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಜಾಲತಾಣದಲ್ಲಿ ಹಳೇ ವಿಡಿಯೋ: ಆತಂಕ

ಬೆಂಗಳೂರಿನಲ್ಲಿ ಚಿರತೆಗಳು ಪತ್ತೆಯಾಗಿವೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಚಿರತೆ ದಾಳಿ ಮಾಡಿದ ವಿಡಿಯೋಗಳು ಹೆಚ್ಚಿನ ಸಂಖ್ಯೆ ವೈರಲ್‌ ಆಗಿದ್ದವು. ಇಬ್ಬರು ಮಹಿಳೆಯರಿಗೆ ದಾಳಿ ಮಾಡಿದ ಚಿರತೆ, ಸಿಸಿ ಟಿವಿಗಳಲ್ಲಿ ಪತ್ತೆಯಾದ ಚಿರತೆ ವಿಡಿಯೋಗಳು ವ್ಯಾಟ್ಸಪ್‌, ಫೇಸ್‌ಬುಕ್‌ನಲ್ಲಿ ಹರಿದಾಡಿ ಸ್ಥಳೀಯರ ಆತಂಕ ಹೆಚ್ಚಿಸಿದ್ದವು. ಬಳಿಕ ಅರಣ್ಯ ಇಲಾಖೆ ಅಂತಾರ್ಜಾಲ ವಿಭಾಗವು ವಿಡಿಯೋ ಹಳೆಯವು ಹಾಗೂ ಹೊರರಾಜ್ಯದ ವಿಡಿಯೋಗಳಾಗಿದ್ದು ಬೆಂಗಳೂರಿಗೆ ಸಂಬಂಧಪಟ್ಟಿದ್ದವಲ್ಲ ಎಂದು ಸ್ಪಷ್ಟನೆ ನೀಡಿದರು.

ಕರ್ನಾಟಕದ ಜನವಸತಿ ಪ್ರದೇಶಗಳಲ್ಲೀಗ ಚಿರತೆ ಚಿಂತೆ..!

ಶಾಲೆಗಳಿಂದ ಮಕ್ಕಳು ದೂರ

ಚಿರತೆ ಪತ್ತೆಯಾದ ಪ್ರದೇಶದ ಸಮೀಪದಲ್ಲಿರುವ ಶ್ರೀಧರ ಗುಡ್ಡ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟುತಗ್ಗಿತ್ತು. ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು ಚಿರತೆಯು ಜಿಂಕೆ ಬೇಟೆಯಾಡಿದ್ದ ಸ್ಥಳದ ಮೂಲಕವೇ ಓಡಾಟ ನಡೆಸುತ್ತಾರೆ. ಪೋಷಕರು ಆತಂಕಗೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ ಎಂದು ಶಾಲಾ ಶಿಕ್ಷಕರು ತಿಳಿಸಿದರು. ಜತಗೆ ಸುತ್ತಮುತ್ತ ಪ್ರದೇಶದಲ್ಲಿ ಸಾರ್ವಜನಿಕರ ಓಡಾಟ ಸಾಮಾನ್ಯ ದಿನಗಳಿಗಿಂತ ತಗ್ಗಿತ್ತು.

ಅರಣ್ಯ ಪ್ರದೇಶದ ಸುತ್ತಮುತ್ತ 5-6 ಕಿಮೀ ಕಾಡುಪ್ರಾಣಿಗಳು ನಡೆಯುವುದು ಸಾಮಾನ್ಯವಾಗಿದೆ. ನಾಗರಿಕರು ಅರಣ್ಯ ಸಮೀಪ ಒಂಟಿಗಾಗಿ ಒಡಾಟ ನಡೆಸಬಾರದು. ಸ್ಥಳದಲ್ಲಿ ಬೋನುಗಳನ್ನು ಇರಿಸಲಾಗಿದ್ದು, ಕ್ಯಾಮೆರಾ ಟ್ರ್ಯಾಪ್‌ಗಳನ್ನು ಹಾಕಲಾಗಿದೆ. ಸಿಸಿಟಿವಿಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಸ್ಥಳೀಯರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಸಾರ್ವಜನಿಕರು ವೈರಲ್‌ ವಿಡಿಯೋಗಳನ್ನು ಕಂಡು ಆಂತಕಕ್ಕೆ ಒಳಗಾಗಬಾರದು ಅಂತ ಬೆಂಗಳೂರು ನಗರ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಸ್‌.ಎಸ್‌.ರವಿಶಂಕರ್‌ ತಿಳಿಸಿದ್ದಾರೆ. 
 

PREV
Read more Articles on
click me!

Recommended Stories

ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!