ನಮ್ಮ ಕ್ಲಿನಿಕ್‌ಗೆ ವೈದ್ಯರ ಸೇವೆ ಕಡ್ಡಾಯ?

By Kannadaprabha NewsFirst Published Dec 3, 2022, 10:00 AM IST
Highlights

243 ಕ್ಲಿನಿಕ್‌ಗೆ ಈವರೆಗೆ ಕೇವಲ 108 ವೈದ್ಯರ ಆಸಕ್ತಿ, ಹಲವು ಬಾರಿ ಅರ್ಜಿ ಆಹ್ವಾನಿಸಿದರೂ ಬಾರದ ವೈದ್ಯರು, ವೈದ್ಯರ ಕೊರತೆ ನೀಗಿಸಲು ಪಾಲಿಕೆ ಯೋಜನೆ, ಎಂಬಿಬಿಎಸ್‌ ಮುಗಿಸಿದವರ ಸೇವೆಗೆ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಡಿ.03):  ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ‘ನಮ್ಮ ಕ್ಲಿನಿಕ್‌’ ಆರಂಭಕ್ಕೆ ಎದುರಾಗಿರುವ ವೈದ್ಯರ ಕೊರತೆ ನೀಗಿಸುವುದಕ್ಕೆ ಒಂದು ವರ್ಷದ ಕಡ್ಡಾಯ ಸರ್ಕಾರಿ ಸೇವೆ ನಿಯಮದಡಿ ಎಂಬಿಬಿಎಸ್‌ ಮುಗಿಸಿದ ಹೊಸ ವೈದ್ಯರ ಬಳಕೆಗೆ ಬಿಬಿಎಂಪಿ ಮುಂದಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಹಾಗೂ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವ ಬಿಬಿಎಂಪಿ ಆರೋಗ್ಯ ವಿಭಾಗವು, ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್‌ ಆರಂಭಿಸುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಮೂರ್ನಾಲ್ಕು ಬಾರಿ ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆದರೂ ಈವರೆಗೆ ಕೇವಲ 108 ವೈದ್ಯರು ನಮ್ಮ ಕ್ಲಿನಿಕ್‌ನಲ್ಲಿ ಸೇವೆ ಸಲ್ಲಿಸುವುದಕ್ಕೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಇನ್ನುಳಿದ ಕ್ಲಿನಿಕ್‌ಗಳಲ್ಲಿ ಕಾರ್ಯನಿರ್ವಹಿಸುವುದಕ್ಕೆ ವೈದ್ಯರ ಕೊರತೆ ಎದುರಾಗಿದೆ. ಹೀಗಾಗಿ, ಎಂಬಿಬಿಎಸ್‌ ಮುಗಿಸಿದ ಹೊಸ ವೈದ್ಯರನ್ನು ನಮ್ಮ ಕ್ಲಿನಿಕ್‌ಗಳಿಗೆ ನಿಯೋಜನೆ ಮಾಡುವಂತೆ ಕೋರಲಾಗಿದೆ. ಬಿಬಿಎಂಪಿಯ ಮನವಿಗೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಡ್ಡಾಯ ಸರ್ಕಾರಿ ಸೇವೆಯಡಿ ನಿಯೋಜನೆ ಮಾಡಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ನಮ್ಮ ಕ್ಲಿನಿಕ್‌ಗೆ ವೈದ್ಯಾಧಿಕಾರಿ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಡಾಕ್ಟರ್‌ ಸಮಸ್ಯೆ ಶಾಶ್ವತ ಪರಿಹಾರವೇ?

ಆರಂಭದಲ್ಲಿಯೇ ವೈದ್ಯರ ಕೊರತೆ ಎದುರಿಸುತ್ತಿರುವ ನಮ್ಮ ಕ್ಲಿನಿಕ್‌ಗೆ ಮುಂದಿನ ದಿನದಲ್ಲಿ ಈ ಸಮಸ್ಯೆ ಉಂಟಾಗಿ ಯೋಜನೆಗೆ ಧಕ್ಕೆ ಉಂಟಾಗಬಾರದು. ನಮ್ಮ ಕ್ಲಿನಿಕ್‌ಗೆ ಶಾಶ್ವತವಾಗಿ ವೈದ್ಯರ ಸಮಸ್ಯೆ ಪರಿಹಾರವಾಗಬೇಕೆಂಬ ಕಾರಣಕ್ಕೆ ಬಿಬಿಎಂಪಿಯು ಎಂಬಿಬಿಎಸ್‌ ಮುಗಿಸಿದ ಹೊಸ ವೈದ್ಯರನ್ನು ನಿಯೋಜನೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ ಎಂದು ತಿಳಿದು ಬಂದಿದೆ.

ಪ್ರತಿ ವರ್ಷ ರಾಜ್ಯದಲ್ಲಿ ಸುಮಾರು 6 ಸಾವಿರ ವೈದ್ಯರು ಕೋರ್ಸ್‌ ಮುಗಿಸುತ್ತಾರೆ. ಬಿಬಿಎಂಪಿಯು ನಮ್ಮ ಕ್ಲಿನಿಕ್‌ಗೆ ಡಾಕ್ಟರ್‌ ಸೇರಿದಂತೆ ಇನ್ನುಳಿದ ಸಿಬ್ಬಂದಿಯನ್ನು ಒಂದು ವರ್ಷದ ಗುತ್ತಿಗೆಗೆ ನೇಮಕ ಮಾಡಿಕೊಳ್ಳುತ್ತಿದೆ. ಒಂದು ವರ್ಷ ಮುಕ್ತಾಯಗೊಂಡ ಮೇಲೆ ಮತ್ತೆ ಡಾಕ್ಟರ್‌ ಸಮಸ್ಯೆ ಉಂಟಾಗದಂತೆ ಎಂಬಿಬಿಎಸ್‌ ಕೋರ್ಸ್‌ ಮುಗಿಸಿ ಹೊರ ಬಂದ ಹೊಸ ವೈದ್ಯರನ್ನು ಪ್ರತಿವರ್ಷ ಅಗತ್ಯಕ್ಕೆ ಅನುಗುಣವಾಗಿ ನಿಯೋಜನೆ ಮಾಡುವುದರಿಂದ ನಮ್ಮ ಕ್ಲಿನಿಕ್‌ಗೆ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗುವುದಿಲ್ಲ ಎಂಬ ಉದ್ದೇಶದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ತ್ರಿಲೋಕ ಚಂದ್ರ ‘ಕನ್ನಡಪ್ರಭ’ ಕ್ಕೆ ಮಾಹಿತಿ ನೀಡಿದ್ದಾರೆ.

ಎಂಡಿ ವೈದ್ಯರ ನಿಯೋಜನೆಗೂ ಪ್ರಸ್ತಾವನೆ:

ಎಂಬಿಬಿಎಸ್‌ ಮುಗಿಸಿದ ಹೊಸ ವೈದ್ಯರು ಮಾತ್ರವಲ್ಲದೇ, ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ನ 2ನೇ ವರ್ಷದಲ್ಲಿ (ಎಂಡಿ) ಮೂರು ತಿಂಗಳು ಪ್ರಾಯೋಗಿಕ ತರಬೇತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಈ ಪ್ರಾಯೋಗಿಕ ತರಬೇತಿಗೆ ನಮ್ಮ ಕ್ಲಿನಿಕ್‌ಗಳಿಗೆ ನಿಯೋಜನೆ ಮಾಡುವಂತೆಯು ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಕೆ ಮಾಡಿದೆ.

ಮೊದಲ ಹಂತದಲ್ಲಿ 108 ನಮ್ಮ ಕ್ಲಿನಿಕ್‌

ವೈದ್ಯರ ಕೊರತೆ ಹಾಗೂ ನಮ್ಮ ಕ್ಲಿನಿಕ್‌ ಕಟ್ಟಡಗಳು ಸಿದ್ಧಗೊಳ್ಳದ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಲಾ 4ರಂತೆ ಮೊದಲ ಹಂತದಲ್ಲಿ 108 ನಮ್ಮ ಕ್ಲಿನಿಕ್‌ ಆರಂಭಗೊಳ್ಳಲಿವೆ. ಉಳಿದ ನಮ್ಮ ಕ್ಲಿನಿಕ್‌ಗಳನ್ನು ಎರಡನೇ ಹಂತದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸವಿ ನೆನಪಿಗಾಗಿ ಜುಲೈ 28ರಂದು ಪ್ರಾಯೋಗಿಕವಾಗಿ ಬೆಂಗಳೂರಿನ ಎರಡು ತಾಣಗಲಲ್ಲಿ ಕ್ಲಿನಿಕ್‌ ಕಾರ್ಯನಿರ್ವಹಿಸುತ್ತಿವೆ.

ನಮ್ಮ ಕ್ಲಿನಿ​ಕ್‌​ನಲ್ಲಿ ಎಲ್ಲರಿಗೂ ಶುಗರ್‌ ಟೆಸ್ಟ್‌: ಸಚಿವ ಸುಧಾಕರ್‌

ರಾಜ್ಯಾದ್ಯಂತ ಏಕಕಾಲಕ್ಕೆ ಚಾಲನೆ

ಬೆಂಗಳೂರಿನ ಎಲ್ಲ 243 ವಾರ್ಡ್‌ ಸೇರಿದಂತೆ ರಾಜ್ಯದ ಒಟ್ಟು 438 ಕಡೆ ನಮ್ಮ ಕ್ಲಿನಿಕ್‌ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ. ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ 108 ಹಾಗೂ ರಾಜ್ಯ ವಿವಿಧ ಜಿಲ್ಲೆಗಳಲ್ಲಿ 100 ನಮ್ಮ ಕ್ಲಿನಿಕ್‌ಗೆ ಏಕಕಾಲಕ್ಕೆ ಚಾಲನೆ ನೀಡುವುದಕ್ಕೆ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಮಯ ಪಡೆದು ಶೀಘ್ರದಲ್ಲಿ ಕಾರ್ಯಕ್ರಮದ ದಿನಾಂಕ ಘೋಷಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಮ್ಮ ಕ್ಲಿನಿಕ್‌ಗೆ ವೈದ್ಯರ ಕೊರತೆ ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಒಟ್ಟು ಎರಡು ಪ್ರಸ್ತಾವನೆ ಸಲ್ಲಿಸಲಾಗಿದೆ. ಎಂಬಿಬಿಎಸ್‌ ಮುಗಿಸಿದ ಹೊಸ ವೈದ್ಯರ ನಿಯೋಜನೆ ಮತ್ತು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ 2ನೇ ವರ್ಷದ ವಿದ್ಯಾರ್ಥಿಗಳನ್ನು ನಿಯೋಜನೆ ಕೋರಲಾಗಿದೆ. ಪ್ರತಿ ವರ್ಷ ನಿಯೋಜನೆ ಮಾಡಿದರೆ ನಮ್ಮ ಕ್ಲಿನಿಕ್‌ಗೆ ಮುಂದಿನ ದಿನಗಳಲ್ಲಿ ವೈದ್ಯರ ಸಮಸ್ಯೆ ಎದುರಾಗುವುದಿಲ್ಲ ಅಂತ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕಚಂದ್ರ ತಿಳಿಸಿದ್ದಾರೆ. 
 

click me!