ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ: ಹೆದ್ದಾರಿಗಳ ಬಳಿಯೇ ಗುಡ್ಡ ಕುಸಿತ, ಹೆಚ್ಚಿದ ಆತಂಕ

By Girish Goudar  |  First Published Jul 9, 2022, 10:46 PM IST

*  ಮಳೆಯ ಅಬ್ಬರಕ್ಕೆ ತತ್ತರಿಸಿದ ಜನತೆ
*  ಉತ್ತರ ಕನ್ನಡ ಕರಾವಳಿ ಹಾಗೂ ಪಶ್ಚಿಮ ಘಟ್ಟಗಳ ಸರಣಿಯನ್ನ ಹೊಂದಿರುವ ವಿಶಿಷ್ಟ ಜಿಲ್ಲೆ
*  ವಾಹನ ಸವಾರರು ಹಾಗೂ ಕಾರ್ಮಿಕರ ನಿದ್ದೆಗೆಡಿಸಿದ ಭೂಕುಸಿತ 
 


ವರದಿ: ಭರತ್‌ರಾಜ್ ಕಲ್ಲಡ್ಕ‌, ಏಷ್ಯಾನೆಟ್ ಸುವರ್ಣ ನ್ಯೂಸ್‌, ಕಾರವಾರ

ಕಾರವಾರ(ಜು.09):  ಅದು ಕರಾವಳಿ ಹಾಗೂ ಪಶ್ಚಿಮ ಘಟ್ಟಗಳ ಸರಣಿಯನ್ನ ಹೊಂದಿರುವ ವಿಶಿಷ್ಟ ಜಿಲ್ಲೆ. ಕರಾವಳಿ ಹಾಗೂ ಘಟ್ಟದ ಭಾಗಗಳಿಗೆ ಸಂಚರಿಸಲು ಇರುವ ಮೂರ್ನಾಲ್ಕು ರಸ್ತೆಗಳೇ ಪ್ರಮುಖ ಕೊಂಡಿಯಾಗಿದ್ದು, ಇದೀಗ ಆ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಆತಂಕ ಎದುರಾಗಿದೆ. ಕಳೆದ ಬಾರಿ ಮಳೆಗಾಲದಲ್ಲಿ ಎದುರಾಗಿದ್ದ ಭೂಕುಸಿತ ಪ್ರಕರಣಗಳು ಇದೀಗ ಮತ್ತೆ ಮರುಕಳಿಸುತ್ತಿದ್ದು, ಯಾವಾಗ ರಸ್ತೆಯ ಮೇಲೆ ಬಂಡೆಗಳು, ಮಣ್ಣು ಕುಸಿದುಬೀಳುತ್ತೋ ಎಂದು ಸವಾರರು ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ..

Latest Videos

undefined

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಿಂದ ಉತ್ತರ ಕರ್ನಾಟಕ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಇದು ಹೆದ್ದಾರಿ ಸವಾರರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಪರಿಣಾಮ ಕಾರವಾರದಿಂದ ಜೊಯಿಡಾ ಮಾರ್ಗವಾಗಿ ಬೆಳಗಾವಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ 34ರ ಅಣಶಿ ಘಟ್ಟದಲ್ಲಿ ಕೆಲವು ದಿನಗಳಿಂದ ಅಲ್ಲಲ್ಲಿ ಗುಡ್ಡದ ಮೇಲಿನ ಕಲ್ಲು, ಮಣ್ಣುಗಳು ಕುಸಿದು ರಸ್ತೆಗೆ ಬೀಳುತ್ತಿವೆ. ಕರಾವಳಿಯ ಗೋವಾ, ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲೂ ಹೆದ್ದಾರಿ ಅಗಲೀಕರಣ ಹಿನ್ನೆಲೆ ತೆರವುಗೊಳಿಸಲಾಗಿದ್ದ ಗುಡ್ಡಗಳಿಂದ ಬೃಹತ್ ಗಾತ್ರದ ಕಲ್ಲುಗಳು ರಸ್ತೆ ಮೇಲೆ ಬಿದ್ದಿವೆ. ಅಲ್ಲದೇ, ಕಾರವಾರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸುರಂಗ ಮಾರ್ಗದ ಬಳಿ ಸಹ ಗುಡ್ಡದಿಂದ ಮಣ್ಣು, ಬಂಡೆಗಳು ಕುಸಿದಿದ್ದು, ವಾಹನ ಸವಾರರ ಹಾಗೂ ಕಾರ್ಮಿಕರ ನಿದ್ದೆಗೆಡಿಸಿದೆ. 

ಅಂಕೋಲಾ- ಹುಬ್ಬಳ್ಳಿ ಮಾರ್ಗದಿಂದ ಪರಿಸರಕ್ಕೆ ಧಕ್ಕೆಯಾಗಲ್ಲ: ಗಾಂವಕರ

ಕಳೆದ ವರ್ಷ 2021ರಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ವಿವಿಧೆಡೆ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿದ್ದು, ಜನತೆಗೆ ಅಂತದ್ದೇ ಘಟನೆ ಮತ್ತೆ ಮರುಕಳಿಸುವ ಭೀತಿ ಶುರುವಾಗಿದೆ. ಈ ಕಾರಣದಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂತಹ ಪ್ರದೇಶಗಳಲ್ಲಿ ಜನರ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಿದೆ ಅಂತ ಉತ್ತರಕನ್ನಡ ಜಿಲ್ಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪೆನ್ನೇಕರ್ ತಿಳಿಸಿದ್ದಾರೆ. 

ಇನ್ನು ಜಿಲ್ಲೆಯ ಕರಾವಳಿಯಿಂದ ಉತ್ತರ ಕರ್ನಾಟಕ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಘಟ್ಟದಲ್ಲಿನ ರಸ್ತೆಗಳಿಂದಲೇ ಸಂಚರಿಸಬೇಕಾಗಿದೆ. ರಾಜ್ಯ ಹೆದ್ದಾರಿ 34ರ ಅಣಶಿ ಘಟ್ಟ, ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟ, ರಾಷ್ಟ್ರೀಯ ಹೆದ್ದಾರಿ 766EEಯ ದೇವಿಮನೆ ಘಟ್ಟ ಹಾಗೂ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರ ಗೇರುಸೊಪ್ಪ ಮಾರ್ಗಗಳು ಪಶ್ಚಿಮ ಘಟ್ಟದಲ್ಲೇ ಹಾದು ಹೋಗಿವೆ. 

ಕಳೆದ ಬಾರಿ ಸುರಿದ ಮಳೆಗೆ ಅಣಶಿ ಹಾಗೂ ಅರಬೈಲ್ ಘಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಹೆದ್ದಾರಿ ಸಂಪರ್ಕವೇ ಕಡಿತಗೊಂಡಿತ್ತು. ಇದಾದ ಬಳಿಕ ಅಧ್ಯಯನ ನಡೆಸಿದ್ದ ತಜ್ಞರ ತಂಡ ಈ ಬಾರಿಯೂ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುವ ಎಚ್ಚರಿಕೆಯನ್ನ ನೀಡಿದ್ದು, ಈ ನಿಟ್ಟಿನಲ್ಲಿ ಹೆದ್ದಾರಿಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿದೆ ಅನ್ನೋದು ಸಾರ್ವಜನಿಕರ ಅಭಿಪ್ರಾಯ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಈಗಾಗಲೇ ಭೂಕುಸಿತ ಆತಂಕವಿರುವ ಪ್ರದೇಶಗಳಲ್ಲಿ ತುರ್ತು ಕಾರ್ಯಾಚರಣೆಗೆ ತಂಡಗಳನ್ನು ನೇಮಕ ಮಾಡಿದ್ದುಣ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸನ್ನದ್ಧವಾಗಿರೋದಾಗಿ ತಿಳಿಸಿದ್ದಾರೆ. 

ಒಟ್ಟಿನಲ್ಲಿ ಮಳೆಯ ಅಬ್ಬರಕ್ಕೆ ಜನರು ತತ್ತರಿಸಿದ ಬೆನ್ನಲ್ಲೇ ಹೆದ್ದಾರಿಗಳಲ್ಲಿ ಭೂಕುಸಿತ ಪ್ರಕರಣಗಳು ಸಂಭವಿಸುತ್ತಿದ್ದು, ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಜನರ ಸುರಕ್ಷತೆಯ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
 

click me!