* ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಅಬ್ಬರ
* 2004ರ ನಂತರ ಇದೇ ಮೊದಲ ಬಾರಿ ಮಳೆಗೆ ಮುಳುಗಿದ ಪಿಲಿಕುಳ
* ಇತಿಹಾಸದಲ್ಲೇ ಮೊದಲ ಬಾರಿಗೆ ಪಿಲಿಕುಳದಲ್ಲಿ ಭಾರೀ ನೆರೆ ಪರಿಸ್ಥಿತಿ
ಮಂಗಳೂರು, (ಜುಲೈ.09): 2004ರಲ್ಲಿ ಉದ್ಘಾಟನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಮಂಗಳೂರಿನ ಪ್ರಸಿದ್ದ ಪ್ರವಾಸಿ ತಾಣ ಪಿಲಿಕುಳ ಮೃಗಾಲಯಕ್ಕೆ ಮಳೆನೀರು ನುಗ್ಗಿ ಬಹುತೇಕ ಮುಳುಗಡೆಯಾಗಿದ್ದು, ನೆರೆ ಭೀತಿ ಎದುರಾಗಿದೆ.
ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಪಿಲಿಕುಳ ಮೃಗಾಲಯ ಜಲಾವೃತವಾಗಿದ್ದು, ಎಕರೆಗಟ್ಟಲೆ ಇರೋ ಪಿಲಿಕುಳ ಮೃಗಾಲಯದ ಬಹುತೇಕ ಭಾಗ ಮುಳುಗಡೆಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಪಿಲಿಕುಳದಲ್ಲಿ ಭಾರೀ ನೆರೆ ಪರಿಸ್ಥಿತಿ ಎದುರಾಗಿದ್ದು, 2004ರಲ್ಲಿ ಉದ್ಘಾಟನೆ ಬಳಿಕ ಇದೇ ಮೊದಲ ಬಾರಿಗೆ ನೆರೆ ಬಂದಿದೆ. ಭಾರೀ ಪ್ರಮಾಣದ ನೀರು ಹರಿದು ಬಂದು ಪಿಲಿಕುಳದ ಪಾದಚಾರಿ ಮಾರ್ಗ ಬಂದ್ ಆಗಿದ್ದು, ಮೃಗಾಲಯಕ್ಕೆ ನೀರು ನುಗ್ಗಿ ಕೆಲ ಪ್ರಾಣಿಗಳ ವಾಸ್ತವ್ಯಕ್ಕೆ ಸಮಸ್ಯೆಯಾಗಿದೆ.
ರನ್ ವೇ ಸಮೀಪ ಗುಡ್ಡ ಕುಸಿತ: ಮಂಗಳೂರು ಏರ್ ಪೋರ್ಟ್ ರನ್ ವೇ ಸೇಫ್
ಮೃಗಾಲಯದ ಒಳಗಡೆ ಮರಗಳು ಉರುಳಿ ಬೀಳುವ ಆತಂಕ ಎದುರಾಗಿದ್ದು, ಭಾರೀ ಗಾಳಿ ಮಳೆ ಮತ್ತು ನೀರು ನುಗ್ಗಿ ಮರಗಳು ಉರುಳಿ ಬಿದ್ದಿದೆ. ಪ್ರವಾಸಿಗರ ಪ್ರವೇಶ ನಿಷೇಧಿಸದೇ ಇದ್ದಲ್ಲಿ ಅಪಾಯ ಸಾಧ್ಯತೆ ಇತ್ತು. ಎಕರೆಗಟ್ಟಲೇ ಇರೋ ಮೃಗಾಲಯದ ಅಲ್ಲಲ್ಲಿ ಮರಗಳು ತುಂಡಾಗಿ ಬಿದ್ದಿದ್ದು, ಮಳೆಯಿಂದ ರಕ್ಷಣೆ ಪಡೆದು ಪ್ರಾಣಿಗಳು ಗೂಡು ಸೇರಿದೆ. ಮಳೆ ನೀರು ನುಗ್ಗಿ ನೀರು ನಿಂತ ಬೆನ್ನಲ್ಲೇ ಮೃಗಾಲಯ ಬಂದ್ ಆಗಿದೆ. ಮರಗಳ ತೆರವು ಕಾರ್ಯಕ್ಕೂ ಭಾರೀ ಮಳೆಯಿಂದ ಅಡ್ಡಿಯಾಗಿದೆ.
ಜುಲೈ 11ರವರೆಗೆ ಪಿಲಿಕುಳ ಬಂದ್!
ಮೃಗಾಲಯ ಜಲಾವೃತವಾದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಪಿಲಿಕುಳ ಮೃಗಾಲಯದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಹೇಳಿಕೆ ನೀಡಿದ್ದಾರೆ. ಜುಲೈ 11ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಉದ್ಯಾನವನದೊಳಗೆ ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆ ಮರಗಳು ಮುರಿದು ಬೀಳುವ ಅಪಾಯ ಸಾಧ್ಯತೆ ಮುಂಜಾಗ್ರತೆ ವಹಿಸಲಾಗಿದೆ. ಪ್ರಾಣಿಗಳು ಮಳೆಗೆ ಒದ್ದೆಯಾಗುವುದನ್ನ ತಪ್ಪಿಸಲು ಗೂಡು ಸೇರಿಸಲಾಗಿದೆ. ಜು.11ರ ಬಳಿಕ ಹವಾಮಾನ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು. 2004ರಲ್ಲಿ ಪಿಲಿಕುಳ ಜೈವಿಕ ಉದ್ಯಾನವನ ಉದ್ಘಾಟನೆ ಆಗಿದ್ದು, ಆ ಬಳಿಕ ಇತಿಹಾಸದಲ್ಲಿ ಮೊದಲ ಬಾರಿಗೆ ನಮ್ಮಲ್ಲಿ ನೆರೆ ಬಂದಿದೆ. ನೀರು ಭಾರೀ ಪ್ರಮಾಣದಲ್ಲಿ ಹರಿದು ಬರ್ತಾ ಇದ್ದು, ಕೆಲವೆಡೆ ಮುಳುಗಡೆ ಆಗಿದೆ ಎಂದಿದ್ದಾರೆ.