ಬೆಂಗ್ಳೂರಲ್ಲಿ 2ನೇ ಡೋಸ್‌ ಪಡೆಯುವವರ ಸಂಖ್ಯೆ ಹೆಚ್ಚಳ

By Kannadaprabha NewsFirst Published Oct 17, 2021, 11:36 AM IST
Highlights

*  ಬಿಬಿಎಂಪಿ ವ್ಯಾಪ್ತಿಯಲ್ಲಿ ಚುರುಕಾದ ಕೊರೋನಾ ಲಸಿಕಾ ಅಭಿಯಾನ
*  ಬೆಂಗಳೂರು ನಗರದಲ್ಲಿ ಶೇ.85ರಷ್ಟು ಮಂದಿಗೆ ಮೊದಲ ಡೋಸ್‌ ಲಸಿಕೆ 
*  ಚುರುಕುಗೊಂಡ ಲಸಿಕಾ ಅಭಿಯಾನ 
 

ಬೆಂಗಳೂರು(ಅ.17):  ಪಾಲಿಕೆ(BBMP) ವ್ಯಾಪ್ತಿಯಲ್ಲಿ ಕೊರೋನಾ(Coronavirus) ಲಸಿಕಾ ಅಭಿಯಾನ ಚುರುಕುಗೊಂಡಿದ್ದು, ಎರಡನೇ ಡೋಸ್‌ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 91.70 ಲಕ್ಷ ಜನರು ಕೊರೋನಾ ಲಸಿಕೆ(Vaccine) ಪಡೆಯಲು ಅರ್ಹರಾಗಿದ್ದು, ಈ ಪೈಕಿ 78.20 ಲಕ್ಷ ಜನರಿಗೆ ಮೊದಲ ಡೋಸ್‌ (ಶೇ.85) ಹಾಗೂ 46.92 ಲಕ್ಷ (ಶೇ.51) ಜನರಿಗೆ ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. ಒಟ್ಟಾರೆ 1.25 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

ನಗರದಲ್ಲಿ(Bengaluru) ಶೇ.85ರಷ್ಟು ಮಂದಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ. ಬಹುತೇಕರು ಕೋವಿಶೀಲ್ಡ್‌(Covishield) ಪಡೆದಿದ್ದು, ಇದೀಗ ಎರಡನೇ ಡೋಸ್‌ ಲಸಿಕೆ ಪಡೆಯಲು ಹೆಚ್ಚಿನವರು ಅರ್ಹರಾಗಿದ್ದಾರೆ. ಹೀಗಾಗಿ ಕೆಲ ದಿನಗಳಿಂದ ಮೊದಲ ಡೋಸ್‌ಗಿಂತ ಎರಡನೇ ಡೋಸ್‌ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದೆ. ಕಳೆದೊಂದು ವಾರದಿಂದ ನಗರದಲ್ಲಿ ನಿತ್ಯ ಸರಾಸರಿ 25-30 ಸಾವಿರ ಡೋಸ್‌ ಲಸಿಕೆ ನೀಡಲಾಗುತ್ತಿದೆ. ಈ ಪೈಕಿ ಸರಾಸರಿ 3-4 ಸಾವಿರ ಡೋಸ್‌ ಮೊದಲ ಡೋಸ್‌ ಹಾಗೂ ಉಳಿದಂತೆ ಎರಡನೇ ಡೋಸ್‌ ಲಸಿಕೆ ನೀಡುತ್ತಿರುವುದಾಗಿ ಪಾಲಿಕೆ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

100 ಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ಧತೆ: ವಿಮಾನ, ಹಡಗು, ರೈಲಲ್ಲಿ ಘೋಷಣೆ!

ಲಸಿಕಾ ಅಭಿಯಾನ(Vaccine Drive) ಚುರುಕುಗೊಳಿಸುವ ನಿಟ್ಟಿನಲ್ಲಿ ಪಾಲಿಕೆಯಿಂದ 198 ವಾರ್ಡ್‌ ವ್ಯಾಪ್ತಿಯ ಬ್ಲಾಕ್‌ ಹಾಗೂ ಲೇನ್‌ ಮಟ್ಟದಲ್ಲಿ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಶೇ.100ರಷ್ಟು ಗುರಿ ಸಾಧಿಸುವ ನಿಟ್ಟಿನಲ್ಲಿ ಪಾಲಿಕೆ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ಕಳೆದ ಆರು ದಿನಗಳ ಲಸಿಕೆ ಮಾಹಿತಿ
ದಿನ ಒಟ್ಟು ಡೋಸ್‌ 1ನೇ ಡೋಸ್‌ 2ನೇ ಡೋಸ್‌

ಅ.15 12,963 2,344 10,619
ಅ.14 13,516 2,248 11,268
ಅ.13 32,909 5,455 27,454
ಅ.12 31,395 5,285 26,110
ಅ.11 37,671 6,619 31,052
ಅ.10 13,562 2,263 11,299
 

click me!