ಬಳ್ಳಾರಿಯಲ್ಲಿ ಹೆಚ್ಚಿದ ಡೆಂಘೀ ಜ್ವರ, ಜನರಲ್ಲಿ ಆತಂಕ..!

By Kannadaprabha News  |  First Published Sep 10, 2023, 9:45 PM IST

ಕಳೆದ ಆಗಸ್ಟ್ ತಿಂಗಳಲ್ಲಿಯೇ ಜಿಲ್ಲೆಯಲ್ಲಿ 436 ಜನರಲ್ಲಿ ಡೆಂಘೀಜ್ವರ ಕಾಣಿಸಿದೆ. ಈ ಪೈಕಿ ಬಳ್ಳಾರಿ ನಗರದಲ್ಲಿಯೇ 229 ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 2616 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. 


ಕೆ.ಎಂ.ಮಂಜುನಾಥ್

ಬಳ್ಳಾರಿ(ಸೆ.10):  ನಗರ ಸೇರಿದಂತೆ ಜಿಲ್ಲಾದ್ಯಂತ ಶಂಕಿತ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ನೂರಾರು ಮಕ್ಕಳಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿಯೇ ಜಿಲ್ಲೆಯಲ್ಲಿ 436 ಜನರಲ್ಲಿ ಡೆಂಘೀಜ್ವರ ಕಾಣಿಸಿದೆ. ಈ ಪೈಕಿ ಬಳ್ಳಾರಿ ನಗರದಲ್ಲಿಯೇ 229 ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 2616 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ ! ಶಂಕಿತ ಡೆಂಘೀ ಪ್ರಕರಣಗಳ ಪೈಕಿ 92 ಪ್ರಕರಣಗಳು ಖಚಿತವಾಗಿವೆ.

Latest Videos

undefined

ಬಳ್ಳಾರಿ ನಗರದಲ್ಲಿಯೇ ಹೆಚ್ಚು ಪ್ರಕರಣ

ಜಿಲ್ಲೆಯ ಪೈಕಿ ಬಳ್ಳಾರಿ ಮಹಾನಗರದಲ್ಲಿ ಅತಿಹೆಚ್ಚು ಡೆಂಘೀ ಪ್ರಕರಣಗಳು ಕಂಡು ಬಂದಿವೆ. ಜನವರಿಯಿಂದ ಈವರೆಗೆ ಒಟ್ಟು 1124 ಪ್ರಕರಣಗಳು ಪತ್ತೆಯಾಗಿದ್ದು, ಆಗಸ್ಟ್ ತಿಂಗಳು ಒಂದರಲ್ಲಿಯೇ 229 ಜನರಲ್ಲಿ ಡೆಂಘೀಜ್ವರ ಇರುವುದು ಖಚಿತವಾಗಿದೆ.

ಯಾವಾಗಲೂ ನಿಮಗೇ ಸೊಳ್ಳೆ ಕಚ್ಚುತ್ತಾ? ಯಾರ ಕಂಡ್ರೆ ಇದಕ್ಕೆ ಹೆಚ್ಚು ಇಷ್ಟ?

ಗಮನಾರ್ಹ ಸಂಗತಿ ಎಂದರೆ ಜ್ವರ ಹಿನ್ನಲೆಯಲ್ಲಿ ಪರೀಕ್ಷಿಸಲಾದ ಜಿಲ್ಲೆಯ ಒಟ್ಟು 2378 ಜನರ ಪೈಕಿ ಎಲ್ಲರಲ್ಲೂ ಶಂಕಿತ ಡೆಂಘೀಜ್ವರ ಇರುವುದು ಖಚಿತವಾಗಿದೆ. ನಗರದ ವಿವಿಧ ಕಾಲೋನಿಗಳ ತಗ್ಗು ಪ್ರದೇಶಗಳಲ್ಲಿ ಹೆಚ್ಚು ದಿನಗಳ ಕಾಲ ಮಳೆನೀರು ಸಂಗ್ರಹಗೊಳ್ಳುತ್ತಿರುವುದು, ಕುಡಿವನೀರನ್ನು ಬಹಳದಿನಗಳವರೆಗೆ ಹಿಡಿದಿಟ್ಟುಕೊಳ್ಳುವುದು, ಹೂವಿನ ಕುಂಡಗಳಲ್ಲಿ ನಿತ್ಯ ನೀರು ಬದಲಾಯಿಸದಿರುವುದು, ಟೈರ್, ತೆಂಗಿನ ಚಿಪ್ಪಿನಲ್ಲಿ ನೀರು ಸಂಗ್ರಹಗೊಳ್ಳುತ್ತಿರುವುದು ಸೇರಿದಂತೆ ನಾನಾ ಕಾರಣಗಳಿಂದ ಈಡೀಸ್ ಸೊಳ್ಳೆಯ ಸಂತಾನೋತ್ಪತ್ತಿ ಹೆಚ್ಚಾಗುತ್ತಿರುವುದರಿಂದ ಡೆಂಘೀಜ್ವರ ಪ್ರಕರಣಗಳು ನಗರ ಪ್ರದೇಶದಲ್ಲಿ ಸೊಳ್ಳೆಗಳ ಹಾವಳಿ ಮಿತಿಮೀರಲು ಕಾರಣವಾಗಿದೆ.

ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡೆಂಘೀಜ್ವರ ಇರುವುದು ಪತ್ತೆಯಾಗಿದೆ. ಆದರೆ, ಎಲ್ಲೂ ಸಾವಿನ ಪ್ರಕರಣಗಳಾಗಿಲ್ಲ. ಡೆಂಘೀ ನಿಯಂತ್ರಣಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮಹಾನಗರ ಪಾಲಿಕೆ ನಗರದ ವಿವಿಧ ಕಾಲೊನಿಗಳಲ್ಲಿ ಸೊಳ್ಳೆಗಳ ನಾಶಕ್ಕೆ ಫಾಗಿಂಗ್ ಕಾರ್ಯ ಕೈಗೊಂಡಿದ್ದು, ಮನೆಯಲ್ಲಿ ಹಾಗೂ ಆಸುಪಾಸಿನಲ್ಲಿ ಬಹಳ ದಿನಗಳ ಕಾಲ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ಅರಿವು ಮೂಡಿಸುವ ಕೆಲಸ ಮುಂದುವರಿಸಿದೆ. ಇದರ ನಡುವೆ ನಗರ ಪ್ರದೇಶದಲ್ಲಿ ಡೆಂಘೀಜ್ವರ ಪ್ರಕರಣಗಳು ಏರಿಕೆಯಾಗಿದ್ದು, ಸಾರ್ವಜನಿಕರಲ್ಲಿ ಭೀತಿ ಮೂಡಿದೆ.

ಸರ್ಕಾರಿ-ಖಾಸಗಿ ಆಸ್ಪತ್ರೆಗಳು ಭರ್ತಿ

ಮಕ್ಕಳಲ್ಲಿ ಶಂಕಿತ ಡೆಂಘೀಜ್ವರ ಪ್ರಕರಣಗಳು ಹೆಚ್ಚಾಗಿರುವುದರಿಂದ ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಭರ್ತಿಯಾಗಿವೆ. ಖಾಸಗಿ ಮಕ್ಕಳ ಕ್ಲಿನಿಕ್‌ಗಳಲ್ಲೂ ಚಿಕಿತ್ಸೆಗೆಂದು ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಜೀವಕ್ಕೆ ಅಪಾಯ ತಂದೊಡ್ಡುವ ಶಂಕಿತ ಡೆಂಘೀಜ್ವರ ಎಂದು ಗೊತ್ತಾಗುತ್ತಿದ್ದಂತೆಯೇ ಪೋಷಕರು ಕಂಗಾಲಾಗುತ್ತಿದ್ದಾರೆ. ಬಡ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗಿದ್ದರೆ, ಮಧ್ಯಮ ವರ್ಗದವರು ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಡೆಂಘಿ ಮೇಲೆ ನಿಗಾ ಇಡಲು ಬಂತು ಮೊಬೈಲ್‌ ಆ್ಯಪ್‌ ! ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ಶಂಕಿತ ಡೆಂಘೀ ಪ್ರಕರಣಗಳ ವಿವರ (ಜನವರಿಯಿಂದ ಸೆ.5ರವರೆಗೆ)

ಬಳ್ಳಾರಿ ನಗರ 1124
ಬಳ್ಳಾರಿ ತಾಲೂಕು 458
ಸಿರುಗುಪ್ಪ ತಾಲೂಕು 343
ಕಂಪ್ಲಿ ತಾಲೂಕು 81
ಕುರುಗೋಡು ತಾಲೂಕು 233
ಸಂಡೂರು ತಾಲೂಕು 377

ಡೆಂಘೀ ಜ್ವರ ನಿಯಂತ್ರಣಕ್ಕೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಇಲಾಖೆಯಿಂದ ನಿರಂತರವಾಗಿ ನಡೆದಿದೆ. ಆಶಾ ಕಾರ್ಯಕರ್ತೆಯರಿಗೆ ಮನೆಮನೆಗೆ ತೆರಳಿ ಜಾಗೃತಿ ಮೂಡಿಸುತ್ತಾರೆ. ಹಳ್ಳಿ ಜನರು ಬಾಲ ಹುಳ ಎಂದು ತಿಳಿದುಕೊಳ್ಳುತ್ತಿದ್ದಾರೆ. ಅವರಿಗೆ ಅರಿವು ಮೂಡಿಸುತ್ತಿದ್ದೇವೆ. ಈಡೀಸ್ ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾ ವಹಿಸಬೇಕಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ ತಿಳಿಸಿದ್ದಾರೆ.  

click me!