ವರದಿ - ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್.
ಚಾಮರಾಜನಗರ (ಆ.25): ಕಾಡಿನಲ್ಲಿ ಬೆಳೆಯುವ ಆ ಕಳೆ ವನ್ಯಪ್ರಾಣಿಗಳಿಗೆ ಮಾರಕ. ಅಲ್ಲದೇ ಕಾಡ್ಗಿಚ್ಚಿಗೂ ಆಹ್ವಾನ ನೀಡಿದಂತೆ. ಈ ಅನುಪಯುಕ್ತ ಕಳೆಯ ಮೂಲಕವೇ ಸೋಲಿಗರಿಗೆ ಆದಾಯದ ಮೂಲ ತೋರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಅದರ ವರದಿ ಇಲ್ಲಿದೆ ನೋಡಿ. ಲಂಟಾನಾ ಇದು ಕಾಡಿನಲ್ಲಿ ಬೆಳೆಯುವ ಅನವಶ್ಯಕ ಕಳೆ. ಮುಳ್ಳಿನಿಂದ ಕೂಡಿರುವ ಈ ಗಿಡದಿಂದ ಕಾಡುಪ್ರಾಣಿಗಳಿಗೆ ಅಪಾಯ ಹೆಚ್ಚು. ಇದನ್ನು ಎಷ್ಟು ಬಾರಿ ಬೇರು ಸಮೇತ ಕಿತ್ತೊಗೆದರೂ ಮತ್ತೇ ಮತ್ತೇ ಬೆಳೆಯುತ್ತಲೇ ಇರುತ್ತದೆ. ಇದನ್ನೆಲ್ಲ ಮನಗಂಡ ಅರಣ್ಯ ಇಲಾಖೆ ಅಧಿಕಾರಿಗಳು ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದೇನಪ್ಪಾ ಅಂದ್ರೆ ಸ್ಥಳೀಯ ಸೋಲಿಗರಿಗೆ ಈ ಲಂಟಾನವನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿ ಮಾಡುವುದು.
undefined
ಚಾಮರಾಜನಗರದಲ್ಲಿ ಹುಲಿ ಹಾಗೂ ಆನೆ ಕಾಟದಿಂದ ಹೈರಾಣಾದ ರೈತರು
ಹೌದು ಸದ್ಯ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ವಲಯ(BRT Tiger Reserve Forest Zone)ದಲ್ಲಿ ಈಗಾಗಲೇ ಲಂಟಾನದಿಂದ ಅಲಂಕಾರಿಕ ವಸ್ತುಗಳನ್ನು ಸಿದ್ದಪಡಿಸಲು ತರಬೇತಿ ನೀಡಲಾಗುತ್ತಿದೆ. ಬಿಆರ್‌ಟಿ ವಲಯ ವ್ಯಾಪ್ತಿಗೆ ಬರುವ ಬೆಲವತ್ತ(Belavatta) ಗ್ರಾಮದಲ್ಲಿ ಸೋಲಿಗ(Soliga) ಯುವಕರಿಗೆ ಲಂಟಾನದಿಂದ ಪೀಠೋಪಕರಣ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುವ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಸೋಲಿಗ ಯುವಕರಿಗೆ ಉದ್ಯೋಗ ಸೃಷ್ಟಿಸಲು ಅರಣ್ಯ ಇಲಾಖೆ ಮುಂದಾಗಿದೆ..
ಇನ್ನೂ ತರಬೇತಿ ಕೇಂದ್ರದಲ್ಲಿ ಯುವಕರಿಗೆ ಲಂಟಾನಾದಿಂದ ಆನೆ ಕಲಾಕೃತಿ, ಕಸದಬುಟ್ಟಿ, ಸ್ಟೂಲ್ ಸೇರಿದಂತೆ ವಿವಿಧ ಕಲಾಕೃತಿಗಳನ್ನು ಮಾಡುವ ತರಬೇತಿ ನೀಡಲಾಗುತ್ತಿದೆ. ಮೊದಲಿಗೆ ಲಂಟಾನವನ್ನು ಕಾಡಿನಿಂದ ತಂದು ನೀರಿನಲ್ಲಿ ಚೆನ್ನಾಗಿ ಬೇಯಿಸಲಾಗುತ್ತದೆ. ನಂತರ ಅದರಲ್ಲಿರುವ ಮುಳ್ಳುಗಳನ್ನು ತೆಗೆದು ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಒಬ್ಬರಿಗೆ ಪ್ರತಿದಿನ 500 ರುಪಾಯಿ ನೀಡಲಾಗುತ್ತದೆ. ಈ ತರಬೇತಿಯಿಂದ ನಮಗೆ ಉದ್ಯೋಗ ಭರವಸೆ ಸಿಕ್ಕಿದೆ ಎಂದು ಸೋಲಿಗ ಯುವಕರು ಸಂತಸಪಡುತ್ತಾರೆ.
India@75: ಬ್ರಿಟಿಷರ ಅರಣ್ಯ ಕಾಯ್ದೆ ವಿರುದ್ಧ ಸಂತಾಲ್ ಬುಡಕಟ್ಟು ಸಮುದಾಯದ ಕ್ರಾಂತಿ
ಒಟ್ಟಾರೆ ಕಾಡಿಗೆ ಕಂಟಕವಾಗಿರುವ ಲಂಟಾನಾದಿಂದ ಸೋಲಿಗ ಯುವಕರಿಗೆ ಉದ್ಯೋಗ ಸೃಷ್ಟಿಯಾಗಿರುವುದು ಖುಷಿಯ ವಿಚಾರ. ಇನ್ನು ಮುಂದೆ ಅಧಿಕಾರಿಗಳು ಇನ್ನು ಹೆಚ್ಚಿನ ರೀತಿಯಲ್ಲಿ ತರಬೇತಿ ನೀಡಿ ನಿರೊದ್ಯೋಗಿ ಸೋಲಿಗ ಯುವಕರಿಗೆ ಹೆಚ್ಚಿನ ಉದ್ಯೋಗ ಜೊತೆಗೆ ಮಾರುಕಟ್ಟೆ ಸೃಷ್ಟಿ ಮಾಡಲಿ ಎಂಬುದೇ ನಮ್ಮ ಆಶಯ.