ಮೈಸೂರು (ಸೆ.17): ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಅಳಿಯನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಅತ್ತೆ ಸೇರಿದಂತೆ 5 ಮಂದಿಗೆ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಯಡದೊರೆ (ಕುರಿಸಿದ್ದನಹುಂಡಿ) ಗ್ರಾಮದ ಮರಯ್ಯ ಎಂಬವರ ಪುತ್ರ ಮಹೇಶ ಎಂಬವರೇ ಕೊಲೆಯಾವರು. ಈ ಕೊಲೆ ಮಾಡಿದ್ದ ಮಹೇಶ ಅತ್ತೆ ಮಣಿ ಅ. ರೇವಮ್ಮ, ಬಾಮೈದ ಕೈಲಾಸ, ಸಂಬಂಧಿಕರಾದ ದೊಡ್ಡಗಂಡು, ಯೋಗೇಶ ಮತ್ತು ದೊಡ್ಡರಾಜು ಜೀವಾವಧಿ ಶಿಕ್ಷೆಗೆ ಗುರಿಯಾದವರು.
ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಕಾಲುವೆಗೆ ಎಸೆದ ಕವಿ
ಯಡದೊರೆಯ ಮಹೇಶ ಅದೇ ಗ್ರಾಮದ ರಾಚಯ್ಯ ಪುತ್ರಿಯನ್ನು ಮದುವೆಯಾಗಿದ್ದರು. ಮನೆಗೆ ಆಗಾಗ ಬರುತ್ತಿದ್ದ ಅತ್ತೆ ಮಣಿಯೊಂದಿಗೆ ಮಹೇಶ ಅಕ್ರಮ ಸಂಬಂಧ ಇರಿಸಿಕೊಂಡಿದ್ದನು. ಈ ವಿಚಾರವು ಮಣಿ ಪತಿ ರಾಚಯ್ಯ, ಪುತ್ರ ಕೈಲಾಸ ಮತ್ತು ಸಂಬಂಧಿಕರಿಗೆ ಗೊತ್ತಾಗಿ, ಇಬ್ಬರಿಗೂ ಬೈದು ಬುದ್ಧಿ ಹೇಳಿದ್ದರು. ಮಹೇಶ ನೀನೇ ನಿನ್ನ ಕಡೆಯವರನ್ನು ಎತ್ತಿ ಕಟ್ಟಿನನ್ನ ಮೇಲೆ ಗಲಾಟೆ ಮಾಡಿಸಿರುವುದಾಗಿ ಮಣಿ ಬೈಯ್ದಿದ್ದು, ಈ ವಿಚಾರವಾಗಿ ಮಹೇಶನ ಮೇಲೆ ಹಗೆ ಸಾಧಿಸುತ್ತಿದ್ದರು.
ಹೀಗಿರುವಾಗ 2016ರ ಆಗಸ್ಟ್ 28 ರಂದು ಮಹೇಶ್ ಅತ್ತೆಯ ಮನೆಯಲ್ಲಿದ್ದ ಬೈಕ್ ತೆಗೆದುಕೊಳ್ಳಲು ಹೋಗಿದ್ದಾಗ ಬಾಮೈದ ಕೈಲಾಸ, ನೀನು ಬಂದಿರುವುದು ಬೈಕಿಗಾಗಿ ಅಲ್ಲ. ನನ್ನ ತಾಯಿ ಜೊತೆಗೆ ಅಕ್ರಮ ಸಂಬಂಧ ಇರಿಸಿಕೊಂಡಿರುವೇ, ಆಕೆಯನ್ನು ನೋಡುವುದಕ್ಕೋಸ್ಕರ ಬೈಕ್ ನೆಪ ಮಾಡಿಕೊಂಡು ಬಂದಿರುವೇ ಎಂದು ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾನೆ. ಬಳಿಕ ಮನೆಯಲ್ಲಿದ್ದ ಅತ್ತೆ ಮಣಿ, ಮಾವ ರಾಚಯ್ಯ ಸೇರಿದಂತೆ ಸಂಬಂಧಿಕರು ದೊಣ್ಣೆ, ಹೆಂಚಿನಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಮಹೇಶ 2016ರ ಸೆ.1 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಈ ಸಂಬಂಧ ಆಗಿನ ಟಿ. ನರಸೀಪುರ ಸರ್ಕಲ್ ಇನ್ಸ್‌ಪೆಕ್ಟರ್ ಮನೋಜ್‌ಕುಮಾರ್ ಅವರು ಪ್ರಕರಣ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ಈ ಪ್ರಕರಣ ವಿಚಾರಣೆ ಸಂದರ್ಭದಲ್ಲೇ ರಾಚಯ್ಯ ಮೃತಪಟ್ಟಿದ್ದರು.
ಈ ಪ್ರಕರದಣ ವಿಚಾರಣೆ ನಡೆಸಿದ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹೊಸಮನಿ ಪುಂಡಲೀಕ ಅವರು, ಮಹೇಶನನ್ನು ಕೊಲೆ ಮಾಡಿರುವುದು ಸಾಕ್ಷಿಗಳ ವಿಚಾರಣೆಯಿಂದ ಸಾಭೀತಾಗಿದೆ ಎಂದು ಕೈಲಾಸ, ದೊಡ್ಡಗಂಡು, ಮಣಿ, ಯೋಗೇಶ ಮತ್ತು ದೊಡ್ಡರಾಜುಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ . 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಚ್.ಡಿ. ಆನಂದ್‌ಕುಮಾರ್ ವಾದ ಮಂಡಿಸಿದ್ದರು.